'ಮತಕ್ಕಾಗಿ ಲಂಚ' ಪ್ರಕರಣ: ಸಿಎಂ ರೇವಂತ್ ವಿಚಾರಣೆ ತೆಲಂಗಾಣದಿಂದ ಹೊರಗೆ ವರ್ಗಾಯಿಸಲು ಕೋರಿ ಸುಪ್ರೀಂಗೆ ಅರ್ಜಿ

2015ರಲ್ಲಿ ತೆಲಂಗಾಣ ಎಂಎಲ್‌ಸಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮತ ಚಲಾಯಿಸಲು ನಾಮನಿರ್ದೇಶಿತ ಶಾಸಕ ಎಲ್ವಿಸ್ ಸ್ಟೀಫನ್ಸನ್‌ ಅವರಿಗೆ ರೆಡ್ಡಿ ಅವರು 50 ಲಕ್ಷ ರೂಪಾಯಿ ಲಂಚದ ಆಮಿಷ ಒಡ್ಡಿದ್ದರು ಎಂಬ ಆರೋಪಗಳು ಈ ಪ್ರಕರಣಗಳಲ್ಲಿ ಸೇರಿವೆ.
Revanth Reddy and Supreme Court
Revanth Reddy and Supreme CourtFacebook
Published on

ತೆಲಂಗಾಣದ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ವಿರುದ್ಧದ 2015ರ ಮತಕ್ಕಾಗಿ ಲಂಚದ ಆಮಿಷ ಒಡ್ಡಿದ ಹಗರಣದ ವಿಚಾರಣೆಯನ್ನು ತೆಲಂಗಾಣದ ಹೊರಗಿನ ವಿಚಾರಣಾಧೀನ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಸಲ್ಲಿಸಲಾದ ಮನವಿಯ ಬಗ್ಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ.

ವಿಚಾರಣೆಯನ್ನು ನೆರೆಯ ರಾಜ್ಯಗಳಾದ ಮಧ್ಯಪ್ರದೇಶ ಅಥವಾ ಛತ್ತೀಸಗಢಕ್ಕೆ ವರ್ಗಾಯಿಸುವಂತೆ ಕೋರಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ನೇತೃತ್ವದ ವಿಭಾಗೀಯ ಪೀಠವು ನೋಟಿಸ್‌ ಜಾರಿ ಮಾಡಿದ್ದು, ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ.

Justice BR Gavai and Justice Sandeep Mehta
Justice BR Gavai and Justice Sandeep Mehta

ರೆಡ್ಡಿ ಅವರು ಪ್ರಸ್ತುತ ರಾಜ್ಯದ ಮುಖ್ಯಮಂತ್ರಿಯಾಗಿರುವುದರಿಂದ ತೆಲಂಗಾಣದಲ್ಲಿ ಅವರ ವಿರುದ್ಧ ನ್ಯಾಯಯುತ ವಿಚಾರಣೆ ಸಾಧ್ಯವಿಲ್ಲ ಎಂದು ವರ್ಗಾವಣೆ ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷದ ಶಾಸಕರಾದ ಗುಂತಕಂಡ್ಲಾ ಜಗದೀಶ್ ರೆಡ್ಡಿ, ಕಲ್ವಕುಂಟ್ಲಾ ಸಂಜಯ್ ಮತ್ತು ವಿಧಾನ ಪರಿಷತ್ ಸದಸ್ಯರಾದ ಸತ್ಯವತಿ ರಾಥೋಡ್ ಮತ್ತು ಮೊಹಮ್ಮದ್ ಅಲಿ ಅವರು ಅರ್ಜಿ ಸಲ್ಲಿಸಿದ್ದಾರೆ.

ತೆಲಂಗಾಣ ರಾಜ್ಯ ಮತ್ತು ಎ ರೇವಂತ ರೆಡ್ಡಿ ಮತ್ತು ಇತರರು ಮತ್ತು ತೆಲಂಗಾಣ ರಾಜ್ಯ ವರ್ಸಸ್‌ ಸಂದ್ರ ವೆಂಕಟ ವೀರಯ್ಯ ಪ್ರಕರಣಗಳು ಸದ್ಯ ಹೈದರಾಬಾದ್‌ನ ವಿಚಾರಣಾಧೀನ ನ್ಯಾಯಾಲಯದಲ್ಲಿದ್ದು, ಈ ಎರಡೂ ಭ್ರಷ್ಟಾಚಾರ ಪ್ರಕರಣಗಳನ್ನು ವರ್ಗಾಯಿಸುವಂತೆ ಅರ್ಜಿದಾರರು ಕೋರಿದ್ದಾರೆ.

2015ರಲ್ಲಿ ತೆಲಂಗಾಣ ಎಂಎಲ್‌ಸಿಗೆ ನಡೆದ ಚುನಾವಣೆಯಲ್ಲಿ ಮತ ಚಲಾಯಿಸಲು ನಾಮನಿರ್ದೇಶಿತ ಶಾಸಕ ಎಲ್ವಿಸ್ ಸ್ಟೀಫನ್ಸನ್ ಅವರಿಗೆ ಬಹುಕೋಟಿ ಲಂಚದ ಭಾಗವಾಗಿ ರೆಡ್ಡಿ ಅವರು 50 ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ನೀಡಿದ್ದರು ಎಂಬ ಆರೋಪ ಮಾಡಲಾಗಿತ್ತು.

ರೆಡ್ಡಿ ಅವರ ಮಾಜಿ ನಾಯಕ ಮತ್ತು ಆಂಧ್ರಪ್ರದೇಶದ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ನಿರ್ದೇಶನದ ಮೇರೆಗೆ ಈ ಮುಂಗಡವನ್ನು ಪಾವತಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

2017ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಪಕ್ಷಕ್ಕೆ ಸೇರುವ ಮೊದಲು ರೆಡ್ಡಿ ಅವರು ತೆಲುಗು ದೇಶಂ ಪಕ್ಷದ (ಟಿಡಿಪಿ) ಪರವಾಗಿ ಅಥವಾ ಮತದಾನದಿಂದ ದೂರ ಉಳಿಯುವಂತೆ ಸ್ಟೀಫನ್ಸನ್‌ ಅವರಿಗೆ ಲಂಚದ ಆಮಿಷ ಒಡ್ಡಿದ್ದರು ಎಂದು ಆರೋಪಿಸಲಾಗಿದೆ. ರೆಡ್ಡಿ ಮತ್ತು ಇತರ ಆರೋಪಿಗಳು 2015ರಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತು ಹೈದರಾಬಾದ್ ನಗರ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು, ನಂತರ ಸ್ಟೀಫನ್ಸನ್ ನೀಡಿದ ದೂರಿನ ಮೇರೆಗೆ ಈ ವಿಷಯದಲ್ಲಿ ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

ಆದಾಗ್ಯೂ, ಪ್ರಮುಖ ಆರೋಪಿ ರೇವಂತ್ ರೆಡ್ಡಿ ಪ್ರಸ್ತುತ ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿರುವುದರಿಂದ ಈ ಪ್ರಕರಣಗಳಲ್ಲಿ ನ್ಯಾಯಯುತ ವಿಚಾರಣೆ ತೆಲಂಗಾಣದಲ್ಲಿ ಸಾಧ್ಯವಿಲ್ಲ ಎಂದು ಅರ್ಜಿದಾರರು ಈಗ ಪ್ರತಿಪಾದಿಸಿದ್ದಾರೆ.

ಆದ್ದರಿಂದ, ಎಸಿಬಿಯ ಪ್ರಾಸಿಕ್ಯೂಷನ್ ನಿರ್ದೇಶನಾಲಯವು ಈಗ "ಉತ್ತರದಾಯಿಯಾಗಿದೆ ಮತ್ತು ನೇರವಾಗಿ ರೆಡ್ಡಿ ಅವರ ನಿಯಂತ್ರಣದಲ್ಲಿದೆ" ಎಂದು ಮನವಿಯಲ್ಲಿ ತಿಳಿಸಲಾಗಿದೆ. ರೆಡ್ಡಿ ವಿರುದ್ಧ ತೆಲಂಗಾಣದ ವಿವಿಧ ನ್ಯಾಯಾಲಯಗಳಲ್ಲಿ ಪ್ರಸ್ತುತ 88 ಪ್ರಕರಣಗಳು ಬಾಕಿ ಉಳಿದಿವೆ, ಇದು ಅವರು ಶ್ರೀಮಂತ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾರೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ರೆಡ್ಡಿ ತೆಲಂಗಾಣದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಅನೇಕ ಸಂದರ್ಭಗಳಲ್ಲಿ ಬೆದರಿಕೆ ಹಾಕಿದ್ದಾರೆ ಮತ್ತು ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣವು ಖುಲಾಸೆಯಲ್ಲಿ ಕೊನೆಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಅರ್ಜಿದಾರರು ಹೇಳಿದ್ದಾರೆ. ಇದಲ್ಲದೆ, ಆರೋಪಿಗಳು 2015ರ ಪ್ರಕರಣದ ವಿಚಾರಣೆಯನ್ನು ವಿಳಂಬಗೊಳಿಸಲು ಒಂದಲ್ಲ ಒಂದು ನೆಪದಲ್ಲಿ ಹಲವಾರು ಅರ್ಜಿಗಳನ್ನು ಸಲ್ಲಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದೆ.

ಆದ್ದರಿಂದ, ಮತಕ್ಕಾಗಿ ನಗದು ಹಗರಣದ ವಿಚಾರಣೆಯನ್ನು ತೆಲಂಗಾಣದಿಂದ ಮಧ್ಯಪ್ರದೇಶದಂತಹ ನೆರೆಯ ರಾಜ್ಯಕ್ಕೆ ವರ್ಗಾಯಿಸುವಂತೆ ಅರ್ಜಿದಾರರು ಈಗ ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.

Kannada Bar & Bench
kannada.barandbench.com