

ಆಸಿಡ್ ದಾಳಿ ಪ್ರಕರಣಗಳನ್ನು ನಿಯಂತ್ರಿಸಲು ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮಂಗಳವಾರ ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ಸಂತ್ರಸ್ತರಿಗೆ ಆರೋಪಿಗಳು ಪರಿಹಾರ ನೀಡಲು ಸಾಧ್ಯವಿಲ್ಲದ ವೇಳೆ ಅವರ ಆಸ್ತಿ ಜಪ್ತಿ ಮಾಡಿ ಹರಾಜು ಹಾಕಬಹುದು ಎಂದು ಸಲಹೆ ನೀಡಿತು [ಶಹೀನ್ ಮತ್ತು ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಆಸಿಡ್ ದಾಳಿ ಪ್ರಕರಣಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಕುರಿತು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯ ವೇಳೆ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ, ಇಂತಹ ಪ್ರಕರಣಗಳಲ್ಲಿ ವಿಧಿಸುವ ಶಿಕ್ಷೆಗಳು ಆಸಿಡ್ ದಾಳಿಗಳನ್ನು ತಡೆಯುವಷ್ಟು ಕಠಿಣವಾಗಿರಬೇಕು ಎಂದು ಒತ್ತಿ ಹೇಳಿತು.
ಅಗತ್ಯವಿದ್ದರೆ ಆರೋಪಿಯ ಆಸ್ತಿಯನ್ನು ಮಾರಾಟ ಮಾಡಿ ಸಂತ್ರಸ್ತರಿಗೆ ಪರಿಹಾರ ನೀಡಲೇಬೇಕು ಎಂತಲೂ ಸೂಚಿಸಿತು.
“ಆರೋಪಿ ಪರಿಹಾರ ಹಣ ನೀಡಲು ಸಾಧ್ಯವಿಲ್ಲದಿದ್ದರೆ, ಅವನ ಎಲ್ಲಾ ಆಸ್ತಿಗಳನ್ನು ಜಪ್ತಿ ಮಾಡಿ ಹರಾಜು ಹಾಕಿ ಪೀಡಿತರಿಗೆ ಹಣ ನೀಡುವುದರಲ್ಲಿ ತಪ್ಪೇನಿದೆ?” ಎಂದು ಮುಖ್ಯ ನ್ಯಾಯಮೂರ್ತಿ ಕಾಂತ್ ಪ್ರಶ್ನಿಸಿದರು.
ಇದೇ ವೇಳೆ, ಆಸಿಡ್ ದಾಳಿ ಪ್ರಕರಣಗಳಿಗೆ ಸಾಮಾನ್ಯ ಕಾನೂನು ಕ್ರಮಗಳಿಗಿಂತ ಮೀರಿದ ಶಿಕ್ಷೆಯ ಅಗತ್ಯವಿದೆ ಎಂದು ಅವರು ಹೇಳಿದರು.
ಮುಂದುವರೆದು, “ಕಾನೂನು ಅಕ್ಷರಗಳಾಚೆಗಿನ ಅಸಾಧಾರಣ ದಂಡನಾತ್ಮಕ ಕ್ರಮಗಳು ಇಂತಹ ಪ್ರಕರಣಗಳಲ್ಲಿ ಅಗತ್ಯ. ಆರೋಪಿಗೆ ನೋವುಂಟುಮಾಡುವಷ್ಟು ಕಠಿಣ ಕ್ರಮವಿಲ್ಲದಿದ್ದರೆ ಇದು ಫಲಕಾರಿಯಾಗುವುದಿಲ್ಲ. ಇಲ್ಲಿ ಆರೋಪಿಯಲ್ಲಿ ಸುಧಾರಣೆ ತರುವ ಸಿದ್ಧಾಂತಕ್ಕೆ ಯಾವುದೇ ಸ್ಥಾನ ಇರಬಾರದು” ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ, ದೇಶಾದ್ಯಂತ ನಡೆದ ಆಸಿಡ್ ದಾಳಿ ಪ್ರಕರಣಗಳ ಕುರಿತು ಸಮಗ್ರ ಮಾಹಿತಿಯನ್ನು ನಾಲ್ಕು ವಾರಗಳೊಳಗೆ ಸಲ್ಲಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೀಠ ನಿರ್ದೇಶನ ನೀಡಿದೆ. ವರ್ಷವಾರು ಪ್ರಕರಣಗಳ ಸಂಖ್ಯೆ, ಚಾರ್ಜ್‌ಶೀಟ್ ಸಲ್ಲಿಕೆಯ ಸ್ಥಿತಿ, ತೀರ್ಪು ಬಂದ ಹಾಗೂ ಬಾಕಿ ಇರುವ ಪ್ರಕರಣಗಳ ವಿವರಗಳ ಜೊತೆಗೆ, ಸಂತ್ರಸ್ತರ ಶೈಕ್ಷಣಿಕ ಅರ್ಹತೆ, ಉದ್ಯೋಗ, ವೈವಾಹಿಕ ಸ್ಥಿತಿ, ವೈದ್ಯಕೀಯ ಚಿಕಿತ್ಸೆ, ವೆಚ್ಚಗಳು ಹಾಗೂ ಪುನರ್ವಸತಿ ಯೋಜನೆಗಳ ಮಾಹಿತಿಯನ್ನೂ ನೀಡಬೇಕೆಂದು ಆದೇಶಿಸಿದೆ.
ಆಸಿಡ್ ದಾಳಿ ಪ್ರಕರಣಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಎದುರಿಸಲು ಹೊಸ ಕಾಯಿದೆ ಜಾರಿ ಅಥವಾ ಅಸ್ತಿತ್ವದಲ್ಲಿರುವ ಕಾನೂನುಗಳಲ್ಲಿ ಬದಲಾವಣೆ ಅಗತ್ಯವಿದೆಯೇ ಎಂಬುದನ್ನು ಗಮನಿಸುವಂತೆ ಕೇಂದ್ರ ಸರ್ಕಾರಕ್ಕೆ ಸಿಜೆಐ ಸೂಚಿಸಿದರು.
ಈ ಹಿಂದೆ ನ್ಯಾಯಾಲಯ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳು ದೇಶದಾದ್ಯಂತ ಬಾಕಿ ಇರುವ ಎಲ್ಲ ಆಸಿಡ್ ದಾಳಿ ಪ್ರಕರಣಗಳ ವಿವರ ಸಲ್ಲಿಸಬೇಕು ಎಂದು ಸೂಚಿಸಿತ್ತು. ಸಾಂಸ್ಥಿಕ ವಿಳಂಬ ಹಾಗೂ ಸಂತ್ರಸ್ತರಿಗೆ ಸಮಯೋಚಿತ ನ್ಯಾಯ ಒದಗಿಸಲು ತ್ವರಿತ ಕ್ರಮ ಅಗತ್ಯವಿದೆ ಎಂದು ಹೇಳಿತ್ತು.