ಚೆಕ್‌ಬೌನ್ಸ್‌ ಪ್ರಕರಣಗಳ ವಿಚಾರಣೆಗೆ ಹೆಚ್ಚುವರಿ ನ್ಯಾಯಾಲಯಗಳ ಸ್ಥಾಪನೆ: ಸುಪ್ರೀಂ ಸಲಹೆಗೆ ಕೇಂದ್ರದ ಶ್ಲಾಘನೆ

“ನೀವು ತಾತ್ಕಾಲಿಕ ಕಾನೂನು ಮಾಡಹುದು. ಇದರಿಂದ ಈ ನ್ಯಾಯಾಲಯಗಳು ಒಂದು ನಿರ್ದಿಷ್ಟ ಅವಧಿಗೆ ಅಸ್ತಿತ್ವದಲ್ಲಿರಲಿವೆ ಎಂದು ನೀವು ಹೇಳಬಹುದಾಗಿದೆ. ನಿವೃತ್ತ ನ್ಯಾಯಾಧೀಶರು ಅಥವಾ ತಜ್ಞರನ್ನು ನೇಮಿಸಬಹುದು” ಎಂದು ಸಿಜೆಐ ಬೊಬ್ಡೆ ತಿಳಿಸಿದರು.
ಚೆಕ್‌ಬೌನ್ಸ್‌ ಪ್ರಕರಣಗಳ ವಿಚಾರಣೆಗೆ ಹೆಚ್ಚುವರಿ ನ್ಯಾಯಾಲಯಗಳ ಸ್ಥಾಪನೆ: ಸುಪ್ರೀಂ ಸಲಹೆಗೆ ಕೇಂದ್ರದ ಶ್ಲಾಘನೆ
Cheque Bouncing

ವರ್ಗಾವಣೀಯ ಲಿಖಿತಗಳ ಅಧಿನಿಯಮ ಕಾಯಿದೆ (ನೆಗೋಷಬಲ್ ಇನ್ಸ್ ಟ್ರುಮೆಂಟ್ಸ್‌ ಆಕ್ಟ್‌) ಸೆಕ್ಷನ್ 138ರ ಅಡಿಯಲ್ಲಿ ಚೆಕ್ ಬೌನ್ಸ್ ಪ್ರಕರಣಗಳ ತ್ವರಿತ ವಿಚಾರಣೆಗೆ ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸುವುದಕ್ಕಾಗಿ ತಾತ್ಕಾಲಿಕ ಕಾನೂನನ್ನು ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠ ಗುರುವಾರ ಸಲಹೆ ನೀಡಿದೆ.

ಸಿಜೆಐ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ ಮತ್ತು ರವೀಂದ್ರ ಭಟ್ ಅವರಿದ್ದ ಸಾಂವಿಧಾನಿಕ ಪೀಠ ಈ ಸಲಹೆ ನೀಡಿತು. ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸುವ ಅಧಿಕಾರ ಹಾಗೂ ಕರ್ತವ್ಯ ಕೇಂದ್ರ ಸರ್ಕಾರಕ್ಕಿದೆ ಎನ್ನುವುದು ಮೇಲ್ನೋಟದ ಅಭಿಪ್ರಾಯವಾಗಿದೆ ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ಹೇಳಿತು.

"ವರ್ಗಾವಣೀಯ ಲಿಖಿತಗಳ ಕಾಯಿದೆಯಿಂದಾಗಿ ಬಾಕಿ ಉಳಿಯುತ್ತಿರುವ ಪ್ರಕರಣಗಳ ಸಂಖ್ಯೆ ಅಸಹಜವಾಗಿದೆ. ನೀವು (ಸಮಸ್ಯೆಯನ್ನು ಪರಿಹರಿಸಲು) ತಾತ್ಕಾಲಿಕ ಕಾನೂನು ರೂಪಿಸಬಹುದು. ಇದರಿಂದ ಈ ನ್ಯಾಯಾಲಯಗಳು ಒಂದು ನಿರ್ದಿಷ್ಟ ಅವಧಿಗೆ ಅಸ್ತಿತ್ವದಲ್ಲಿರಲಿವೆ ಎಂದು ನೀವು ಹೇಳಬಹುದಾಗಿದೆ. ನಿವೃತ್ತ ನ್ಯಾಯಾಧೀಶರು ಅಥವಾ ತಜ್ಞರನ್ನು ಇದಕ್ಕೆ ನೇಮಿಸಬಹುದು” ಎಂದು ಸಿಜೆಐ ಬೊಬ್ಡೆ ತಿಳಿಸಿದರು.

Also Read
ನೀರವ್ ಮೋದಿ ಪ್ರಕರಣ: ಬ್ಯಾಂಕ್, ಕೇಂದ್ರ ಸರ್ಕಾರದ ಕಾರ್ಯವೈಖರಿ ಕುರಿತು ಬ್ರಿಟನ್ ನ್ಯಾಯಾಲಯ ಹೇಳಿದ್ದೇನು?

ಸಾಲಿಸಿಟರ್‌ ಜನರಲ್‌ (ಎಸ್‌ಜಿ) ತುಷಾರ್‌ ಮೆಹ್ತಾ ಅವರು ಇದೊಂದು ಸ್ವಾಗತಾರ್ಹ ಕ್ರಮ ಎಂದು ಅಭಿಪ್ರಾಯಪಟ್ಟರು. ಈ ಕುರಿತು “ನಾವು ವ್ಯಾಪಕ ಚರ್ಚೆ ನಡೆಸಬೇಕಿದೆ. ಆಂತರಿಕವಾಗಿ ನಾವು ಇದರ ಸೂಕ್ಷ್ಮಗಳ ಬಗ್ಗೆ ಸಾಕಷ್ಟು ಕೆಲಸ ಮಾಡಬೇಕಿದೆ” ಎಂದು ಹೇಳಿದರು.

ಪ್ರಸ್ತಾವಿತ ಕಾನೂನಿನ ಬಗ್ಗೆ ಅಧಿಕೃತ ಹೇಳಿಕೆ ನೀಡಲು ಮತ್ತು ಬಾಕಿ ಉಳಿದಿರುವ ಸೆಕ್ಷನ್ 138 ಪ್ರಕರಣಗಳ ವಿಚಾರಣೆ ನಡೆಸಲು ಅಗತ್ಯವಾದ ಮಾರ್ಗ ರೂಪಿಸಲು ರಚಿಸಲಾಗುತ್ತಿರುವ ಸಮಿತಿಗೆ ಯಾವ ನ್ಯಾಯಾಧೀಶರನ್ನು ನೇಮಿಸಬಹುದು ಎಂಬ ಕುರಿತು ಚರ್ಚಿಸಲು ಎಸ್‌ಜಿ ಅವರಿಗೆ ಮಾರ್ಚ್ 10 ರವರೆಗೆ ನ್ಯಾಯಾಲಯವು ಕಾಲಾವಕಾಶ ನೀಡಿದೆ.

ಚೆಕ್‌ ಬೌನ್ಸ್‌ ಮಾಡಲಾದ ಮಾಹಿತಿಯಲ್ಲಿ ಚೆಕ್‌ ಡ್ರಾ ಮಾಡಿಕೊಂಡವರ ವಿವರಗಳನ್ನು ಒಳಗೊಳ್ಳುವ ವ್ಯವಸ್ಥೆಯನ್ನು ರೂಪಿಸಬಹುದೇ ಎಂಬ ಪ್ರಶ್ನೆಯನ್ನು ಕೂಡ ನ್ಯಾಯಾಲಯ ವಿಚಾರಣೆ ವೇಳೆ ಎತ್ತಿತು. “ಇದರಿಂದ ತಕ್ಷಣ ದೂರು ಮತ್ತು ಸಮನ್ಸ್‌ ನೀಡಬಹುದಾಗಿದೆ. ಕಾನೂನು ಉಲ್ಲಂಘನೆಯಾದರೆ ಗೌಪ್ಯತೆಯ ಮುಸುಕನ್ನು ತೆಗೆದುಹಾಕಬಹುದು ಎಂದು ನ್ಯಾ. ಬೊಬ್ಡೆ ಅಭಿಪ್ರಾಯಪಟ್ಟರು.

ಆದರೆ, ನ್ಯಾಯಾಲಯದ ಆದೇಶದ ವಿನಾ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಬ್ಯಾಂಕುಗಳು ತಿಳಿಸಿದಾಗ ಈ ನಿಟ್ಟಿನಲ್ಲಿ ಆದೇಶ ರವಾನಿಸಲಾಗುವುದು ಎಂದು ಸುಪ್ರೀಂಕೋರ್ಟ್‌ ಬ್ಯಾಂಕುಗಳಿಗೆ ಭರವಸೆ ನೀಡಿತು.

ದೇಶದ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳಲ್ಲಿ ಚೆಕ್‌ಬೌನ್ಸ್ ಪ್ರರಕಣಗಳ ಸಂಖ್ಯೆ ಗಣನೀಯವಾಗಿದೆ. ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಶೇ. 30 ರಿಂದ 40ರಷ್ಟು ಪ್ರಕರಣಗಳು ಮೇಲಿನ ಕಾಯಿದೆಯಡಿ ಬರುವ ಪ್ರಕರಣಗಳೇ ಆಗಿವೆ. ಹೈಕೋರ್ಟ್‌ನಲ್ಲಿಯೂ ಈ ಪ್ರಕರಣಗಳ ಸಂಖ್ಯೆ ಗಣನೀಯಾಗಿದೆ ಎನ್ನುವ ಅಂಶವನ್ನು ಈ ಹಿಂದೆ ಸುಪ್ರೀಂ ಕೋರ್ಟ್‌ ತಿಳಿಸಿತ್ತು.

Related Stories

No stories found.