ವಿದೇಶಿಯರನ್ನು ಗಡೀಪಾರು ಮಾಡದ ಅಸ್ಸಾಂ ಸರ್ಕಾರಕ್ಕೆ ಸುಪ್ರೀಂ ತರಾಟೆ

ಪ್ರಕರಣ ರಾಜ್ಯ ನಿರ್ವಹಿಸಬೇಕಾದ ಸಂಗತಿಯಾಗಿರದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಾಗಿ ಎಸ್‌ ಜಿ ಮೆಹ್ತಾ ತಿಳಿಸಿದರು.
Supreme Court, Assam
Supreme Court, Assam
Published on

ವಿದೇಶಿಯರು ಎಂದು ಘೋಷಿತರಾದ ವ್ಯಕ್ತಿಗಳನ್ನು ಗಡೀಪಾರು ಮಾಡದೆ ವಿಳಂಬ ಧೋರಣೆ ಅನುಸರಿಸುತ್ತಿರುವ ಅಸ್ಸಾಂ ಸರ್ಕಾರವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿತು [ರಾಜುಬಾಲಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ವಿಚಾರಣೆಗೆ ವರ್ಚುವಲ್ ವಿಧಾನದ ಮೂಲಕ ಹಾಜರಿದ್ದ ಅಸ್ಸಾಂನ ಮುಖ್ಯ ಕಾರ್ಯದರ್ಶಿ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಎ.ಎಸ್. ಓಕಾ ಮತ್ತು ಉಜ್ಜಲ್ ಭುಯಾನ್  ಅವರಿದ್ದ ಪೀಠ "ವಿಳಾಸವಿಲ್ಲದಿದ್ದರೂ , ಅವರನ್ನು ಗಡೀಪಾರು ಮಾಡಬಹುದು. ಅನಿರ್ದಿಷ್ಟವಾಗಿ ಅವರನ್ನು ಬಂಧಿಸಿಟ್ಟುಕೊಂಡಿರುವಂತಿಲ್ಲ... ಒಮ್ಮೆ ಅವರನ್ನು ವಿದೇಶಿಯರೆಂದು ಪರಿಗಣಿಸಿದ ನಂತರ, ಅವರನ್ನು ತಕ್ಷಣವೇ ಗಡೀಪಾರು ಮಾಡಬೇಕು. ಅವರ ಪೌರತ್ವದ ಸ್ಥಿತಿ ನಿಮಗೆ ತಿಳಿದಿದೆ. ಹಾಗಾದರೆ ಅವರ ವಿಳಾಸ ಸಿಗುವವರೆಗೆ ನೀವೇಕೆ ಕಾಯುತ್ತೀರಿ? ಅವರು ಎಲ್ಲಿಗೆ ಹೋಗಬೇಕೆಂದು ನಿರ್ಧರಿಸುವುದು ಉಳಿದ ದೇಶಕ್ಕೆ ಬಿಟ್ಟದ್ದು" ಎಂದಿತು.

Also Read
ಒಂದು ತಿಂಗಳೊಳಗೆ ಬಂಧನ ಶಿಬಿರಗಳಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಿ: ಅಸ್ಸಾಂ ಸರ್ಕಾರಕ್ಕೆ ಸುಪ್ರೀಂ ಸೂಚನೆ

ವಿಳಾಸವಿಲ್ಲದೆ ಹೋದಲ್ಲಿ ಆ ಜನರನ್ನು ಎಲ್ಲಿಗೆ ಗಡೀಪಾರು ಮಾಡಬೇಕೆಂದು ರಾಜ್ಯ ಸರ್ಕಾರದ ಪರ ವಕೀಲರು ನ್ಯಾಯಾಲಯವನ್ನು ಕೇಳಿದರು. ಆಗ ನ್ಯಾಯಮೂರ್ತಿ ಓಕಾ "ನೀವು ಅವರನ್ನು ಸಂಬಂಧಪಟ್ಟ ದೇಶದ ರಾಜಧಾನಿಗೆ ಗಡೀಪಾರು ಮಾಡಿ. ಆ ವ್ಯಕ್ತಿ ಪಾಕಿಸ್ತಾನದವನಾಗಿದ್ದರೆ - ನಿಮಗೆ ಪಾಕಿಸ್ತಾನದ ರಾಜಧಾನಿ ತಿಳಿದಿದೆಯೇ? ಅವರ ವಿದೇಶಿ ವಿಳಾಸ ತಿಳಿಯದೆ ಇದ್ದರೆ ಅವರನ್ನು ಇಲ್ಲಿ ಬಂಧಿಸಿದ್ದಾದರೂ ಹೇಗೆ? ಪರಿಶೀಲನಾ ವರದಿಯನ್ನು ವಿದೇಶಾಂಗ ಸಚಿವಾಲಯಕ್ಕೆ ಕಳುಹಿಸಿದ ದಿನಾಂಕವನ್ನು ಏಕೆ ಉಲ್ಲೇಖಿಸಿಲ್ಲ?" ಎಂದು ಕಿಡಿಕಾರಿದರು.

ಈ ಕುರಿತು ಸೂಕ್ತ ಅಫಿಡವಿಟ್‌ ಸಲ್ಲಿಸಲು ಸಮಯಾವಕಾಶ ಅಗತ್ಯವಿದೆ ಎಂದು ವಕೀಲರು ಮನವಿ ಮಾಡಿದರು. ಆದರೆ ನ್ಯಾಯಾಲಯ "ನಾವು ನಿಮಗೆ (ಅಸ್ಸಾಂ ಸರ್ಕಾರ) ಸುಳ್ಳು ಸಾಕ್ಷ್ಯದ ನೋಟಿಸ್ ಜಾರಿ ಮಾಡುತ್ತೇವೆ. ಒಂದು ರಾಜ್ಯ ಸರ್ಕಾರವಾಗಿ, ನೀವು ಆರೋಪ ಮುಕ್ತರಾಗಬೇಕು." ಎಂದು ಎಚ್ಚರಿಕೆ ನೀಡಿತು.

ವಿಚಾರಣೆಯ ಒಂದು ಹಂತದಲ್ಲಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಕರಣ ರಾಜ್ಯಪಟ್ಟಿಗೆ ಬಾರದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು.

ಆಗ ನ್ಯಾಯಾಲಯ “ಹಲವು ವರ್ಷಗಳಿಂದ ಬಂಧನದಲ್ಲಿರುವ ವ್ಯಕ್ತಿಗಳಿಗಾಗಿ ಸರ್ಕಾರದ ಬೊಕ್ಕಸ ಖಾಲಿಯಾಗುತ್ತಿದೆ. ಈ ಆತಂಕ ಸರ್ಕಾರಕ್ಕೆ ಅರ್ಥವಾಗುವಂತೆ ತೋರುತ್ತಿಲ್ಲ" ಎಂದು ನ್ಯಾ. ಓಕಾ ಹೇಳಿದರು.

Also Read
'ಪೊಲೀಸರು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದಾರೆಯೇ?' ಅಸ್ಸಾಂ ಎನ್‌ಕೌಂಟರ್‌ಗಳ ಕುರಿತು ಸುಪ್ರೀಂ ಪ್ರಶ್ನೆ

ವಿದೇಶಿ ವಿಳಾಸಗಳಿಲ್ಲದಿದ್ದರೂ ಸಹ, ಗಡೀಪಾರು ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸುವಂತೆ ನ್ಯಾಯಾಲಯ ಅಸ್ಸಾಂ ಸರ್ಕಾರಕ್ಕೆ ನಿರ್ದೇಶನ ನೀಡಿತು. ರಾಷ್ಟ್ರೀಯತೆ ಪರಿಶೀಲನಾ ಪ್ರಕ್ರಿಯೆಯ ಕುರಿತು ಎರಡು ವಾರಗಳಲ್ಲಿ ದಿನಾಂಕವನ್ನೂ ಒಳಗೊಂಡಂತೆ ತೆಗೆದುಕೊಂಡ ಕ್ರಮಗಳ ವಿವರವಾದ ಅಫಿಡವಿಟ್ ಸಲ್ಲಿಸುವಂತೆಯೂ ಸರ್ಕಾರಕ್ಕೆ ಸೂಚಿಸಿತು.

ದೇಶಗಳೇ ಇಲ್ಲದ ವ್ಯಕ್ತಿಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಸ್ಪಷ್ಟಪಡಿಸುವುದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಲಾಯಿತು. ಬಂಧನ ಕೇಂದ್ರಗಳಲ್ಲಿ ಉತ್ತಮ ಸೌಲಭ್ಯ  ದೊರೆಯುತ್ತಿದೆಯೇ ಎಂಬ ಕುರಿತು ಹದಿನೈದು ದಿನಗಳಿಗೊಮ್ಮೆ ಪರಿಶೀಲನೆ ನಡೆಸಲು ಸಮಿತಿ ರಚಿಸುವಂತೆ ನ್ಯಾಯಾಲಯ ಅಸ್ಸಾಂ ಸರ್ಕಾರಕ್ಕೆ ಇದೇ ವೇಳೆ ಆದೇಶಿಸಿತು. ಫೆಬ್ರವರಿ 25ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

Kannada Bar & Bench
kannada.barandbench.com