
ನ್ಯಾಯಾಲಯಗಳ ಆದೇಶ ಜಾರಿಗೆ ಸಂಬಂಧಿಸಿದ ಅರ್ಜಿಗಳು (ಎಕ್ಸಿಕ್ಯೂಷನ್ ಪಿಟಿಷನ್) ಕರ್ನಾಟಕದಲ್ಲಿ ಎಷ್ಟು ಬಾಕಿ ಇವೆ ಎಂಬುದಕ್ಕೆ ಸಂಬಂಧಿಸಿದಂತೆ ವಿವರ ಸಲ್ಲಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, “ಏಕೆ ಅಗತ್ಯ ಮಾಹಿತಿ ಒದಗಿಸಿಲ್ಲ ಎಂಬುದನ್ನು ವಿವರಿಸಿ ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅಫಿಡವಿಟ್ ಸಲ್ಲಿಸಬೇಕು” ಎಂದು ಈಚೆಗೆ ನಿರ್ದೇಶಿಸಿದೆ.
ತುರ್ತಾಗಿ ಎಕ್ಸಿಕ್ಯೂಷನ್ ಅರ್ಜಿಗಳನ್ನು ಇತ್ಯರ್ಥಪಡಿಸಬೇಕು ಎಂದು ನಿರ್ದೇಶಿಸಿದ ಹೊರತಾಗಿಯೂ ದೇಶಾದ್ಯಂತ 8.8 ಲಕ್ಷ ಪ್ರಕರಣಗಳು ಬಾಕಿ ಉಳಿದಿರುವುದಕ್ಕೆ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಪಂಕಜ್ ಮಿತ್ತಲ್ ಅವರ ವಿಭಾಗೀಯ ಪೀಠ ತೀವ್ರ ಬೇಸರ ವ್ಯಕ್ತಪಡಿಸಿದೆ.
“ಹಿಂದಿನ ಆದೇಶದ ಹೊರತಾಗಿಯೂ ಕರ್ನಾಟಕ ಹೈಕೋರ್ಟ್ ಯಾವುದೇ ದತ್ತಾಂಶ ಸಲ್ಲಿಸಲು ವಿಫಲವಾಗಿದೆ. ನ್ಯಾಯಾಲಯದ ಆದೇಶ ಅನುಪಾಲನೆ ಮಾಡದಿರುವುದನ್ನು ನಿರ್ಲಕ್ಷಿಸಲಾಗದು” ಎಂದಿರುವ ಸರ್ವೋಚ್ಚ ನ್ಯಾಯಾಲಯವು “ಎರಡು ವಾರಗಳಲ್ಲಿ ಮಾಹಿತಿ ಸಲ್ಲಿಸದಿರುವುದಕ್ಕೆ ವಿವರಣೆ ಒದಗಿಸಬೇಕು” ಎಂದು ನಿರ್ದೇಶಿಸಿದೆ.
ಕಳೆದ ಮಾರ್ಚ್‌ನಿಂದ 3.38 ಲಕ್ಷ ಎಕ್ಸಿಕ್ಯೂಷನ್ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದ್ದರೂ ಬಾಕಿ ಉಳಿದಿರುವ ಅರ್ಜಿಗಳು ಆತಂಕಕಾರಿಯಾಗಿವೆ ಎಂದು ನ್ಯಾಯಾಲಯ ಹೇಳಿದೆ.
“ಡಿಕ್ರಿ ಆದೇಶ ಮಾಡಿದ ಮೇಲೆ ಅದನ್ನು ಜಾರಿಗೊಳಿಸಲು ವರ್ಷಾನುಗಟ್ಟಲೇ ತೆಗೆದುಕೊಂಡರೆ ಅದಕ್ಕೆ ಯಾವುದೇ ಅರ್ಥವಿರುವುದಿಲ್ಲ. ಇದು ನ್ಯಾಯದ ಅಣಕವಲ್ಲದೇ ಬೇರೇನೂ ಅಲ್ಲ” ಎಂದು ನ್ಯಾಯಾಲಯ ಹೇಳಿದೆ.
ಈ ವರ್ಷದ ಆರಂಭದಲ್ಲಿ ನಾಲ್ಕು ದಶಕಗಳ ಆಸ್ತಿ ವಿವಾದವೊಂದನ್ನು ನಿರ್ಧರಿಸುವಾಗ ಆರು ತಿಂಗಳಲ್ಲಿ ಬಾಕಿ ಉಳಿದಿರುವ ಎಕ್ಸಿಕ್ಯೂಷನ್ ಅರ್ಜಿಗಳನ್ನು ವಿಲೇವಾರಿ ಮಾಡಿ ಅದರ ಸಂಬಂಧಿತ ದತ್ತಾಂಶ ಸಂಗ್ರಹಿಸಿ ಸಲ್ಲಿಸುವಂತೆ ಎಲ್ಲಾ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಇದನ್ನು ಪಾಲಿಸಲು ವಿಫಲರಾಗುವ ನ್ಯಾಯಾಧೀಶರು ಹೈಕೋರ್ಟ್‌ಗಳ ಆಡಳಿತಾತ್ಮಕ ವಿಭಾಗಕ್ಕೆ ಉತ್ತರದಾಯಿಗಳಾಗಿರುತ್ತಾರೆ ಎಂದೂ ಹೇಳಿತ್ತು.
ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಸಮಗ್ರ ವರದಿ ಸಲ್ಲಿಕೆ ಮಾಡಲಾಗಿದ್ದು, ಹಲವು ನ್ಯಾಯಾಲಯಗಳಲ್ಲಿ ಭಾರಿ ಪ್ರಮಾಣದಲ್ಲಿ ಎಕ್ಸಿಕ್ಯೂಷನ್ ಅರ್ಜಿಗಳು ಬಾಕಿ ಇರುವುದು ಬಹಿರಂಗವಾಗಿದೆ.
ಮಹಾರಾಷ್ಟ್ರದಲ್ಲಿ 3.4 ಲಕ್ಷ ಎಕ್ಸಿಕ್ಯೂಷನ್ ಅರ್ಜಿಗಳು ಬಾಕಿ ಇದ್ದು ಅಗ್ರಸ್ಥಾನಿಯಾಗಿದೆ. ಆನಂತರ ತಮಿಳುನಾಡು 86,000, ಕೇರಳದಲ್ಲಿ 83,000 ಅರ್ಜಿ ಬಾಕಿ ಇವೆ. ಉತ್ತರ ಪ್ರದೇಶದಲ್ಲಿ 27,000, ಆಂಧ್ರ ಪ್ರದೇಶದಲ್ಲಿ 68,000 ದಾವೆಗಳು ಬಾಕಿ ಇವೆ. ದೇಶಾದ್ಯಂತ 8,82,578 ಎಕ್ಸಿಕ್ಯೂಷನ್ ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. “ಸಂಗ್ರಹಿಸಲ್ಪಟ್ಟಿರುವ ದತ್ತಾಂಶವು ತುಂಬಾ ನಿರಾಶಾದಾಯಕವಾಗಿದೆ. ದೇಶಾದ್ಯಂತ ಬಾಕಿ ಉಳಿದಿರುವ ಎಕ್ಸಿಕ್ಯೂಷನ್ ಅರ್ಜಿಗಳು ಆತಂಕಕಾರಿಯಾಗಿವೆ” ಎಂದು ನ್ಯಾಯಾಲಯ ಹೇಳಿದೆ.
ಜಿಲ್ಲಾ ನ್ಯಾಯಾಲಯಗಳ ಮೇಲೆ ನಿಗಾ ಇಡುವುದರ ಜೊತೆಗೆ ಡಿಕ್ರಿ ಆದೇಶಗಳನ್ನು ಜಾರಿಗೊಳಿಸಲು ಪರಿಣಾಮಕಾರಿ ಪ್ರಕ್ರಿಯೆ ರೂಪಿಸುವಂತೆ ಸುಪ್ರೀಂ ಕೋರ್ಟ್ ಹೈಕೋರ್ಟ್‌ಗಳಿಗೆ ನಿರ್ದೇಶಿಸಿದ್ದು, ಆದೇಶ ಅನುಪಾಲನೆಗೆ ಆರು ತಿಂಗಳ ಕಾಲಾವಕಾಶ ವಿಸ್ತರಿಸಿದೆ. 2026ರ ಏಪ್ರಿಲ್ 10ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದ್ದು, ಅಷ್ಟರೊಳಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.