ಸವುಕ್ಕು ಶಂಕರ್‌ ಹಿಂದೆ ಬಿದ್ದಿದ್ದೀರಿ: ತಮಿಳುನಾಡು ಸರ್ಕಾರದ ನಡೆಗೆ ಸುಪ್ರೀಂ ಕೋರ್ಟ್‌ ಕಿಡಿ

ಸರ್ಕಾರ ಮೇ 12ರಂದು ಹೊರಡಿಸಿದ್ದ ಬಂಧನ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದ್ದ ಬೆನ್ನಿಗೇ ಗಾಂಜಾ ಹೊಂದಿದ ಆರೋಪಕ್ಕೆ ಸಂಬಂಧಿಸಿದಂತೆ ಈಚೆಗೆ ತಮಿಳುನಾಡು ಗೂಂಡಾ ಕಾಯಿದೆಯಡಿ ಶಂಕರ್ ಅವರನ್ನು ಬಂಧಿಸಲಾಗಿತ್ತು.
Savukku Shankar and Supreme Court
Savukku Shankar and Supreme Court
Published on

ತಮಿಳುನಾಡು ಗೂಂಡಾ ಕಾಯಿದೆ- 1982ರ ಅಡಿ ಯೂಟ್ಯೂಬರ್‌ ಸವುಕ್ಕು ಶಂಕರ್‌ ಅವರನ್ನು ಬಂಧಿಸಿದ್ದ ರಾಜ್ಯ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಸೋಮವಾರ ತರಾಟೆಗೆ ತೆಗೆದುಕೊಂಡಿದೆ [ಎ ಶಂಕರ್ ಅಲಿಯಾಸ್‌ ಸವುಕ್ಕು ಶಂಕರ್ ಮತ್ತು ತಮಿಳುನಾಡು ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಕಾಯಿದೆಯಡಿ ತನ್ನ ವಿರುದ್ಧ ಕ್ರಮ ಕೈಗೊಂಡಿದ್ದನ್ನು ಪ್ರಶ್ನಿಸಿ ಶಂಕರ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ರಾಜ್ಯದ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.

“ಇದೇನು ಮಾಡುತ್ತಿದೀರಿ? ಈ ವ್ಯಕ್ತಿ ಹಿಂದಿ ಬಿದ್ದಿದ್ದೀರಿ. ಅವರು (ಜೈಲಿನಿಂದ) ಹೊರಗೆ ಬರುತ್ತಿದ್ದಂತೆ ಮತ್ತೆ ಕಂಬಿ ಎಣಿಸುವಂತೆ ಮಾಡುತ್ತಿದ್ದೀರಿ!” ಎಂದು ನ್ಯಾ. ಪರ್ದಿವಾಲಾ ಕಿಡಿಕಾರಿದರು.

ಸವುಕ್ಕು ಅವರ ವಿರುದ್ಧ ರಾಜ್ಯ ಸರ್ಕಾರ ಹೊರಡಿಸಿದ್ದ ಮುಂಜಾಗ್ರತಾ ಕ್ರಮವಾಗಿ ಬಂಧನ ಆದೇಶವನ್ನು ಮದ್ರಾಸ್‌ ಹೈಕೋರ್ಟ್‌ ರದ್ದುಗೊಳಿಸಿತ್ತು. ಅದರ ಬೆನ್ನಿಗೇ ಗೂಂಡಾ ಕಾಯಿದೆಯಿಡಿ ಕ್ರಮ ಕೈಗೊಂಡಿದ್ದನ್ನು ಪ್ರಶ್ನಿಸಿ ಸವುಕ್ಕು ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಸವುಕ್ಕು  ಅವರನ್ನು ಮಧ್ಯಂತರ ಬಿಡುಗಡೆ ಮಾಡುವಂತೆ ಸರ್ವೋಚ್ಚ ನ್ಯಾಯಾಲಯ ಈಚೆಗೆ ಆದೇಶಿಸಿತ್ತು.

ಪ್ರಕರಣವನ್ನು ಮುಂದೂಡಲಾಗಿದ್ದು ತಮಿಳುನಾಡು ಪೊಲೀಸರು ದಾಖಲಿಸಿರುವ ಹೊಸ ಪ್ರಕರಣ ಮತ್ತು ಸವುಕ್ಕು ಅವರ ತಾಯಿ ಸಲ್ಲಿಸಿರುವ ಹೇಬಿಯಸ್‌ ಕಾರ್ಪಸ್‌ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಆಗಸ್ಟ್‌ 27ರಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ತಮಿಳುನಾಡು ಸರ್ಕಾರದ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ವಾದ ಮಂಡಿಸಿದ್ದರು. ಸವುಕ್ಕು ಅವರನ್ನು ವಕೀಲ ಬಾಲಾಜಿ ಶ್ರೀನಿವಾಸನ್ ಪ್ರತನಿಧಿಸಿದ್ದರು.

Kannada Bar & Bench
kannada.barandbench.com