ಪಿಂಚಣಿ ಪಾವತಿ ಆದೇಶ ಪ್ರಶ್ನಿಸಿದ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಸಾಮಾನ್ಯ ಪಿಂಚಣಿ ಪ್ರಕರಣಗಳನ್ನು ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದನ್ನು ರಾಜ್ಯ ಸರ್ಕಾರ ರೂಢಿಯಾಗಿಸಿಕೊಂಡಿದೆ ಎಂದು ನ್ಯಾಯಾಲಯ ಅತೃಪ್ತಿ ವ್ಯಕ್ತಪಡಿಸಿತು.
Supreme Court
Supreme Court

ನಿವೃತ್ತ ಸರ್ಕಾರಿ ನೌಕರರಿಗೆ ಪಿಂಚಣಿ ಪಾವತಿಸುವಂತೆ ನೀಡಲಾಗಿದ್ದ ಸೂಚನೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ [ಉತ್ತರ ಪ್ರದೇಶ ಸರ್ಕಾರ ಮತ್ತಿತರರು ಹಾಗೂ  ಶಶಿ ಶ್ರೀವಾಸ್ತವ ನಡುವಣ ಪ್ರಕರಣ].

ಸಾಮಾನ್ಯ ಪಿಂಚಣಿ ಪ್ರಕರಣಗಳನ್ನು ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದನ್ನು ರಾಜ್ಯ ಸರ್ಕಾರ ರೂಢಿಯಾಗಿಸಿಕೊಂಡಿದೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಓಕಾ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ರಜಾಕಾಲೀನ ಪೀಠ ಅಸಮಾಧಾನ ವ್ಯಕ್ತಪಡಿಸಿತು.

Also Read
[ವೇತನ, ಪಿಂಚಣಿ ಮರು ನಿಗದಿ] ಸುದೀರ್ಘ ಸೇವೆ ಸಲ್ಲಿಸಿದವರಿಗೆ ಸಣ್ಣ ಮೊತ್ತ ನೀಡಿದರೆ ಆಕಾಶ ಕಳಚಿ ಬೀಳದು: ಹೈಕೋರ್ಟ್‌

“ಯಾರದೋ ಪಿಂಚಣಿ ತಡೆಯುವಂತೆ ಕೋರಿ ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಎಡತಾಕುತ್ತಿದೆ. ಏನು ನಡೆಯುತ್ತಿದೆ? ಪಿಂಚಣಿ ಪಡೆಯುವುದನ್ನು ಸರ್ಕಾರ ಏಕೆ ತಡೆಯಬೇಕು? ಪ್ರತಿ ಬಾರಿ ಪಿಂಚಣಿ ನೀಡುವಾಗಲೂ ರಾಜ್ಯ ಸರ್ಕಾರ ಅದಕ್ಕೆ ವಿರುದ್ಧವಾಗಿ ಮನವಿ ಸಲ್ಲಿಸುತ್ತದೆ” ಎಂದು ಪೀಠ ಕೆಂಡಾಮಂಡಲವಾಯಿತು.

Also Read
ನಿವೃತ್ತ ನ್ಯಾಯಾಧೀಶರಿಗೆ ಒಂದು ಶ್ರೇಣಿ ಒಂದು ಪಿಂಚಣಿ: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ನಿವೃತ್ತ ನ್ಯಾಯಮೂರ್ತಿ

ಈ ಪ್ರಕರಣದಲ್ಲಿ ಪಿಂಚಣಿದಾರರನ್ನು ತಾತ್ಕಾಲಿಕ ಆಧಾರದಲ್ಲಿ ನೇಮಿಸಲಾಗಿತ್ತು. ಅಲಾಹಾಬಾದ್‌ ಹೈಕೋರ್ಟ್‌ ಪಿಂಚಣಿಗಾಗಿ ಅನುಮತಿ ನೀಡಿದ ತೀರ್ಪಿನಲ್ಲಿ ದೋಷಗಳಿವೆ ಎಂದು ಉತ್ತರಪ್ರದೇಶ ಸರ್ಕಾರದ ಪರ ವಕೀಲರು ಪಟ್ಟು ಹಿಡಿದರು. ಆಗ ನ್ಯಾ. ಓಕಾ ಅವರು  ಹಲವು ವರ್ಷಗಳಿಂದ ಕೆಲಸ ಮಾಡಿದವರು ಪಿಂಚಣಿಗೆ ಅರ್ಹರು ಎಂದು ತಿರುಗೇಟು ನೀಡಿದರು.

ಇಂತಹ ಪ್ರಕರಣಗಳನ್ನು ವಿಚಾರಣೆ ನಡೆಸುವುದಕ್ಕಾಗಿ ಸುಪ್ರೀಂ ಕೋರ್ಟ್‌ ಇಲ್ಲ. ಹಲವು ವರ್ಷಗಳಿಂದ ಕೆಲಸ ಮಾಡಿದ ಯಾರೇ ಆದರೂ ಪಿಂಚಣಿಗೆ ಅರ್ಹರು ಎಂದು ನ್ಯಾಯಾಲಯ ಪುನರುಚ್ಚರಿಸಿತು.

Kannada Bar & Bench
kannada.barandbench.com