
ಆಹಾರ ಕಲಬೆರಕೆ ತಡೆ ಕಾಯಿದೆ-1954ರ ಅಡಿಯಲ್ಲಿ ದೋಷಯುಕ್ತ ಬ್ರಾಂಡಿಂಗ್ ಮಾಡಿದ್ದಕ್ಕಾಗಿ ಮತ್ತು ತಪ್ಪಾಗಿ ಲೇಬಲ್ ಹಚ್ಚಿದ್ದಕ್ಕಾಗಿ ತಂಪು ಪಾನೀಯ ದೈತ್ಯ ಕಂಪೆನಿ ಪೆಪ್ಸಿಕೋ ವಿರುದ್ಧ ಪಂಜಾಬ್ ಸರ್ಕಾರ ಹೂಡಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ [ಪೆಪ್ಸಿಕೊ ಮತ್ತು ಪಂಜಾಬ್ ಸರ್ಕಾರ ನಡುವಣ ಪ್ರಕರಣ]
ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ "…ಎಫ್‌ಎಸ್‌ಎಸ್‌ಎಐ ಅಡಿಯಲ್ಲಿ ನೇಮಕಗೊಂಡ ನ್ಯಾಯನಿರ್ಣಯ ಅಧಿಕಾರಿ ಜಲಂಧರ್‌ಗೆ ಅರ್ಜಿದಾರರು 3 ಲಕ್ಷ ರೂ.ಗಳನ್ನು ಪಾವತಿಸಿದರೆ ಪ್ರಕರಣ ರದ್ದುಗೊಳ್ಳುತ್ತದೆ” ಎಂದು ತಿಳಿಸಿದರು. ಇದಕ್ಕೆ ಪೆಪ್ಸಿಕೊ ಸಮ್ಮತಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಕರಣ ರದ್ದುಗೊಳಿಸಿತು.
ಸರ್ಕಾರಿ ಆಹಾರ ನಿರೀಕ್ಷಕರು ಜಲಂಧರ್‌ನ ಬೇಕರಿಯೊಂದರಲ್ಲಿ 2007ರಲ್ಲಿ ಪರಿಶೀಲನೆ ನಡೆಸಿದ ವೇಳೆ 20 ಗ್ಯಾಟೋರೇಡ್ ಬಾಟಲಿಗಳನ್ನು ತಪ್ಪಾಗಿ ಬ್ರಾಂಡ್ ಮಾಡಿರುವುದು ಪತ್ತೆಯಾಗಿತ್ತು. ಉತ್ಪನ್ನದ ಲೇಬಲ್, ಬ್ಯಾಚ್ ಸಂಖ್ಯೆ ಹಾಗೂ ಉತ್ಪಾದನಾ ದಿನಾಂಕಗಳು ನಿಯಮಗಳ ಅನುಸಾರ ಇಲ್ಲ ಎಂದು ತಿಳಿದುಬಂದಿತ್ತು. ಹೀಗಾಗಿ ಆಹಾರ ಸುರಕ್ಷತೆ ಕಾನೂನು ಉಲ್ಲಂಘನೆ ಆರೋಪದಡಿ ಪೆಪ್ಸಿಕೋ ಮತ್ತು ಅದರ ಸಹವರ್ತಿಗಳ ವಿರುದ್ಧ ದೂರು ದಾಖಲಿಸಲಾಗಿತ್ತು.
ಅಡಿಷನಲ್ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ಡೂನ್ ಬೇಕರ್ಸ್, ಪೆಪ್ಸಿಕೊ ಮತ್ತು ಟ್ರೋಪಿಕಾನಾ ಬೆವರೇಜಸ್ ವಿರುದ್ಧ ಆರೋಪ ಹೊರಿಸಲಾಗಿತ್ತು. ನಂತರ ಪ್ರಕರಣ ಪಂಜಾಬ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಸರ್ಕಾರಿ ವಿಶ್ಲೇಷಕರು ಪತ್ತೆ ಮಾಡಿರುವ ಅಂಶಗಳು ಅಪೂರ್ಣವಾದವು ಎಂದು ಪೆಪ್ಸಿಕೊ ವಾದಿಸಿತ್ತು. ಅಲ್ಲದೆ ಎಫ್‌ಎಸ್‌ಎಸ್ ಕಾಯಿದೆ ಪಿಎಫ್‌ಎ ಕಾಯಿದೆ ಬದಲಿಗೆ ಎಫ್‌ಎಸ್‌ಎಸ್ ಕಾಯಿದೆ ಜಾರಿಯಲ್ಲಿರುವುದರಿಂದ ಆಹಾರ ವಿಚಾರವಾಗಿ ಬಾಕಿ ಉಳಿದಿರುವ ಅನೇಕ ಪ್ರಕರಣಗಳನ್ನು ಹಿಂಪಡೆಯುವುದನ್ನು ಪರಿಶೀಲಿಸಬೇಕು ಎಂದು ಅದು ಕೋರಿತ್ತು. ದೊಡ್ಡ-ಪ್ರಮಾಣದ ತಯಾರಕರು ಉತ್ಪಾದನೆಯನ್ನು ಸುಗಮಗೊಳಿಸಲು ಲೇಬಲ್‌ಗಳಿಗಿಂತ ಹೆಚ್ಚಾಗಿ ಬಾಟಲ್ ಕ್ಯಾಪ್‌ಗಳ ಮೇಲೆ ಬ್ಯಾಚ್ ಸಂಖ್ಯೆಗಳಂತಹ ಬದಲಾಗುವ ಮಾಹಿತಿಯನ್ನು ಮುದ್ರಿಸುವುದು ಸಾಮಾನ್ಯ ಅಭ್ಯಾಸವಾಗಿದೆ ಎಂದು ಅದು ಹೇಳಿತ್ತು.
ಆದರೆ ದೂರು ರದ್ದತಿಗೆ ಹೈಕೋರ್ಟ್ ನಿರಾಕರಿಸಿತ್ತು. ಪ್ರಕರಣ ಮಿಸ್‌ಬ್ರಾಂಡಿಂಗ್‌ಗೆ ಸಂಬಂಧಿಸಿದ್ದಾಗಿದ್ದು ಕಲಬೆರಕೆ ಕುರಿತಾದದ್ದಲ್ಲ. ಪಿಎಫ್‌ಎ ಕಾಯಿದೆಯ ಸೆಕ್ಷನ್ 16ಎ ಅಡಿಯಲ್ಲಿ ಸಂಕ್ಷಿಪ್ತವಾಗಿ ವಿಚಾರಣೆಗೆ ಒಳಪಡಬೇಕು ಎಂದು ಹೈಕೋರ್ಟ್ ಹೇಳಿತ್ತು. ಎಫ್‌ಎಸ್‌ಎಸ್ ಕಾಯಿದೆಯಡಿಯಲ್ಲಿ, ಅಂತಹ ಅಪರಾಧಗಳು ಈಗ ಸೆಕ್ಷನ್ 52 ರ ಅಡಿಯಲ್ಲಿ ಕೇವಲ ವಿತ್ತೀಯ ದಂಡ ವಿಧಿಸುವುದನ್ನು ಹೇಳುತ್ತವೆ, ಇದು ಕಡಿಮೆ ಶಿಕ್ಷೆ ವಿಧಿಸುವ ಬಗ್ಗೆ ಒತ್ತಿಹೇಳುತ್ತದೆ. ಹೀಗಾಗಿ ಪೆಪ್ಸಿಕೋ ಎರಡು ತಿಂಗಳೊಳಗೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಪ್ರಕರಣವನ್ನು ಹಿಂಪಡೆಯುವುದನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿತು.
ಪ್ರಕರಣ ಹಿಂಪಡೆಯುವ ಮೊದಲು ಸರ್ಕಾರ ಎಫ್‌ಎಸ್‌ಎಸ್ ಕಾಯಿದೆಯಡಿಯಲ್ಲಿ ದಂಡ ವಿಧಿಸಬಹುದು ಎಂದು ಅದು ಹೇಳಿತ್ತು. ಸರ್ಕಾರ ಪ್ರಕರಣ ಹಿಂತೆಗೆದುಕೊಳ್ಳದಿರಲು ನಿರ್ಧರಿಸಿದರೆ, ಅರ್ಜಿದಾರರನ್ನು ಕಾನೂನು ಕ್ರಮ ಎದುರಿಸಲು ಬಿಟ್ಟು, ತರ್ಕಬದ್ಧ ಆದೇಶ ನೀಡಲು ನಿರ್ದೇಶಿಸಲಾಗಿತ್ತು.
ಪ್ರಕರಣ ಅಂತಿಮವಾಗಿ ಸುಪ್ರೀಂ ಕೋರ್ಟ್ ಅಂಗಳ ತಲುಪಿತು. 2024ರ ಡಿಸೆಂಬರ್‌ನಲ್ಲಿ, ಹೈಕೋರ್ಟ್ ನಿರ್ದೇಶನಗಳ ಪ್ರಕಾರ ದೂರು ಮುಕ್ತಾಯಗೊಳಿಸುವುದನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಪಂಜಾಬ್ ಸರ್ಕಾರಕ್ಕೆ ಸೂಚಿಸಿತ್ತು. ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದಾಗ ತಪ್ಪು ಬ್ರ್ಯಾಂಡಿಂಗ್‌ಗಾಗಿ ಎಫ್‌ಎಸ್‌ಎಸ್ ಕಾಯಿದೆಯಡಿ ಪರಿಗಣಿಸಲಾದ ಗರಿಷ್ಠ ದಂಡವಾದ ₹3 ಲಕ್ಷವನ್ನು ಪೆಪ್ಸಿಕೋ ಪಾವತಿಸಿದರೆ ದೂರನ್ನು ಮುಕ್ತಾಯಗೊಳಿಸಬಹುದು ಎಂದು ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತು. ದಂಡ ಪಾವತಿಗೆ ಪೆಪ್ಸಿಕೋ ಸಮ್ಮತಿಸಿದ ಹಿನ್ನೆಲೆಯಲ್ಲಿ ಪ್ರಕರಣ ರದ್ದುಗೊಳಿಸಲಾಯಿತು.