ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.
ಕರ್ನಾಟಕ ಹೈಕೋರ್ಟ್ ಆಗಸ್ಟ್ 2019ರಲ್ಲಿ ನೀಡಿದ್ದ ಆದೇಶದ ವಿರುದ್ಧ ಶಿವಕುಮಾರ್ ಅವರು ಮೇಲ್ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.
ಶಿವಕುಮಾರ್ ಅವರಿಗೆ ಸಂಬಂಧಿಸಿದ ದೆಹಲಿಯ ಸ್ಥಳಗಳ ಮೇಳೆ 2017ರಲ್ಲಿ ಆದಾಯ ತೆರಿಗೆ ಇಲಾಖೆಯ ದಾಳಿ ನಡೆದಿತ್ತು. ಆಗ ಸುಮಾರು 7 ಕೋಟಿ ರೂ ವಶಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ 2018 ರಲ್ಲಿ ಅವರ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಹಲವು ದಿನಗಳ ವಿಚಾರಣೆಯ ನಂತರ ಶಿವಕುಮಾರ್ ಅವರನ್ನು 2019ರ ಸೆಪ್ಟೆಂಬರ್ ನಲ್ಲಿ ಇ ಡಿ ಬಂಧಿಸಿತ್ತು. ಆದರೆ, ಅಕ್ಟೋಬರ್ 2019ರಲ್ಲಿ ದೆಹಲಿ ಹೈಕೋರ್ಟ್ ಅಂತಿಮವಾಗಿ ಅವರಿಗೆ ಜಾಮೀನು ನೀಡಿತ್ತು. ಅದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು.
ಆದರೆ, ಬಂಧನಕ್ಕೂ ಮುನ್ನ ಶಿವಕುಮಾರ್ ಮತ್ತಿತರರು ಜಾರಿ ನಿರ್ದೇಶನಾಲಯದ ಸಮನ್ಸ್ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಆಗಸ್ಟ್ 2019ರಲ್ಲಿ, ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದ ನ್ಯಾ. ಅರವಿಂದ್ ಕುಮಾರ್ ಈ ರಿಟ್ ಅರ್ಜಿಗಳನ್ನು ವಜಾಗೊಳಿಸಿದರು. ಇದರ ವಿರುದ್ಧ ಶಿವಕುಮಾರ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇಂದು ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸಿರುವ ಸರ್ವೋಚ್ಚ ನ್ಯಾಯಾಲಯ ವಿಚಾರಣೆಯನ್ನು ರದ್ದುಗೊಳಿಸಿದೆ.
ಡಿ.ಕೆ.ಶಿವಕುಮಾರ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಮತ್ತೆ ಆರಂಭಿಸುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇನ್ನೂ ಕೈಗೆತ್ತಿಕೊಂಡಿಲ್ಲ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಇದೇ ರೀತಿಯ ಅರ್ಜಿಯೂ ಹೈಕೋರ್ಟ್‌ನಲ್ಲಿ ಬಾಕಿ ಇದೆ.
ಶಿವಕುಮಾರ್ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ವಾದ ಮಂಡಿಸಿದ್ದರು. ಉಳಿದ ಆರೋಪಿಗಳ ಪರವಾಗಿ ಹಿರಿಯ ವಕೀಲರಾದ ಡಾ. ಅಭಿಷೇಕ್ ಮನು ಸಿಂಘ್ವಿ ಮತ್ತು ಎಸ್. ನಾಗಮುತ್ತು ವಕಾಲತ್ತು ವಹಿಸಿದ್ದರು. ವಕೀಲರಾದ ಪರಮಾತ್ಮ ಸಿಂಗ್, ಮಾಯಾಂಕ್ ಜೈನ್ ಮತ್ತು ಮಧುರ್ ಜೈನ್ ಅವರು ಕೂಡ ತಂಡದಲ್ಲಿದ್ದರು.