MediaOne and Supreme Court
MediaOne and Supreme Court

ಕೇರಳದ ಮೀಡಿಯಾ ಒನ್ ಸುದ್ದಿವಾಹಿನಿ ಮೇಲೆ ಕೇಂದ್ರ ಹೇರಿದ್ದ ನಿಷೇಧ ರದ್ದುಪಡಿಸಿದ ಸುಪ್ರೀಂ ಕೋರ್ಟ್‌

ನಿಷೇಧಕ್ಕೆ ಕಾರಣಗಳನ್ನು ಮುಚ್ಚಿದ ಲಕೋಟೆಯಲ್ಲಿ ಮಾತ್ರ ಸಲ್ಲಿಸಬಹುದು ಎಂಬ ಕೇಂದ್ರ ಗೃಹಸಚಿವಾಲಯದ ನಿಲುವನ್ನು ನ್ಯಾಯಾಲಯ ತಿರಸ್ಕರಿಸಿತು. ಅಧಿಕಾರದಲ್ಲಿರುವವರಿಗೆ ಸತ್ಯವನ್ನು ಹೇಳುವುದು ಮಾಧ್ಯಮದ ಕರ್ತವ್ಯವಾಗಿದೆ ಎಂದಿತು.

ರಾಷ್ಟ್ರೀಯ ಭದ್ರತೆಯ ಆಧಾರದ ಮೇಲೆ ಕೇರಳದ ʼಮೀಡಿಯಾ ಒನ್‌ʼ ಸುದ್ದಿವಾಹಿನಿಯ ಪ್ರಸಾರ ಪರವಾನಗಿ ನವೀಕರಿಸಲು ಕೇಂದ್ರ ಸರ್ಕಾರ ನಿರಾಕರಿಸಿದ್ದನ್ನು ಸುಪ್ರೀಂ ಕೋರ್ಟ್‌ ಬುಧವಾರ ರದ್ದುಪಡಿಸಿದೆ.

ಸುದ್ದಿವಾಹಿನಿಯು ಪ್ರಸಾರ ಮಾಡಿರುವ ಕೆಲವು ಕಾರ್ಯಕ್ರಮಗಳು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುತ್ತವೆ ಎಂಬ ಕೇಂದ್ರ ಸರ್ಕಾರದ ವಾದವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರಿದ್ದ ಪೀಠ ತಳ್ಳಿಹಾಕಿತು.

ಅಲ್ಪಸಂಖ್ಯಾತರ ಪರ ವರದಿಗಳನ್ನು ಪ್ರಸಾರ ಮಾಡಲಾಗಿದೆ. ಯುಎಪಿಎ, ಎನ್‌ಆರ್‌ಸಿ, ಎಸಿಎಎ ಹಾಗೂ ನ್ಯಾಯಾಂಗ ಮತ್ತು ಕಾರ್ಯಾಂಗದ ಬಗ್ಗೆ ಟೀಕೆಗಳಿವೆ ಎಂದು ಗುಪ್ತಚರ ಇಲಾಖೆಯ ವರದಿಗಳು ಹೇಳುತ್ತಿವೆ… ಅಂತಹ ವರದಿಗಳು ಕೇವಲ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಉಲ್ಲೇಖಗಳಾಗಿವೆ. ಭಯೋತ್ಪಾದನೆಯ ನಂಟನ್ನು ಸಾಬೀತುಪಡಿಸುವ ಅಂಶಗಳು ಅದರಲ್ಲಿ ಇಲ್ಲ ಎಂದು ನ್ಯಾಯಾಲಯ ಹೇಳಿತು.

ನ್ಯಾಯಾಲಯದ ಪ್ರಮುಖ ಅವಲೋಕನಗಳು

  • ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಬರಿಗೈಯಲ್ಲಿ ಹೇಳಲಾಗದು. ರಾಷ್ಟ್ರೀಯ ಭದ್ರತೆಗೆ ಸಂಬಂಧಪಟ್ಟ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಸಾಕ್ಷಿ ಮೀಡಿಯಾಒನ್‌ ವಿರುದ್ಧ ಇಲ್ಲ.

  • ರಾಷ್ಟ್ರೀಯ ಭದ್ರತೆಯ ಬಗೆಗಿನ ಕಳವಳವನ್ನು ಕೇಂದ್ರ ಸರ್ಕಾರ ಮನಬಂದಂತೆ ಪ್ರಸ್ತಾಪಿಸಿದೆ. ನಾಗರಿಕರ ಹಕ್ಕುಗಳನ್ನು ದಮನ ಮಾಡಲು ರಾಷ್ಟ್ರೀಯ ಭದ್ರತೆ ಬಳಸಿಕೊಂಡರೆ ಅದಕ್ಕೆ ಕಾನೂನಿನಡಿ ಅನುಮತಿ ನೀಡುವುದಿಲ್ಲ.

  • ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಕ್ಕೆ ಕಾರಣಗಳನ್ನು ಮುಚ್ಚಿದ ಲಕೋಟೆಯಲ್ಲಿ ಮಾತ್ರ ಸಲ್ಲಿಸಬಹುದು ಎಂಬ ಕೇಂದ್ರದ ನಿಲುವು ಸ್ವೀಕಾರಾರ್ಹವಲ್ಲ.

  • ಈ ರೀತಿ ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ನೀಡುವುದು ಅರ್ಜಿದಾರರ ಹಕ್ಕುಗಳ  ಮೇಲೆ ಪರಿಣಾಮ ಬೀರುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟ ನಡೆಸುವ ಅರ್ಜಿದಾರರನ್ನು ಈ ಮೂಲಕ ಕತ್ತಲಲ್ಲಿಟ್ಟಂತಾಗಿದೆ.

  • ಇಂತಹ ಸಂದರ್ಭಗಳಲ್ಲಿ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಿದೆ ಎಂಬುದನ್ನು ಸರ್ಕಾರ ಸಾಬೀತುಪಡಿಸಿ ನಂತರ ಸ್ವಾಭಾವಿಕ ನ್ಯಾಯದ ತತ್ವ ಪಾಲಿಸಬೇಕು ಎಂದು ಹೇಳಬಹುದು.

  • ಸಾರ್ವಜನಿಕ ವಿನಾಯಿತಿ ಪ್ರಕ್ರಿಯೆಗಳ ಮೂಲಕ ಗುರಿ ಸಾಧಿಸಲು ಸಾಧ್ಯವಾಗುವುದಾದರೆ ಮುಚ್ಚಿದ ಲಕೋಟೆ ಪ್ರಕ್ರಿಯೆ ಅಳವಡಿಸಿಕೊಳ್ಳಬಾರದು.

  • ಅಧಿಕಾರದಲ್ಲಿರುವವರಿಗೆ ಸತ್ಯವನ್ನು ಹೇಳುವುದು ಮಾಧ್ಯಮದ ಕರ್ತವ್ಯವಾಗಿದ್ದು ಟೀಕೆಗಳನ್ನು ವ್ಯವಸ್ಥೆಯ ವಿರೋಧಿ ಎನ್ನಲಾಗದು.

  • ಜಮಾತ್-ಎ-ಇಸ್ಲಾಮಿ ಹಿಂದ್ (ಜೆಇಐಎಚ್‌) ಜೊತೆ ಮೀಡಿಯಾಒನ್ ಸಂಪರ್ಕ ಹೊಂದಿದೆ ಎಂಬ ಕೇಂದ್ರದ ವಾದವನ್ನು ಒಪ್ಪಲಾಗದು. ಜೆಇಐಎಚ್‌ ನಿಷೇಧಿತ ಸಂಘಟನೆಯಲ್ಲ.

  • ಅಲ್ಲದೆ ಮೀಡಿಯಾ ಒನ್‌ ಮಾಲೀಕರು ಜೆಇಐಎಚ್‌ ಸಂಘಟನೆಯ ಷೇರುದಾರರು ಎಂಬುದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯಗಳಿಲ್ಲ.

ಸುದ್ದಿವಾಹಿನಿ ಪ್ರಸಾರವಾಗದಂತೆ ಜನವರಿ 31, 2022ರಂದು ಕೇಂದ್ರ ಸರ್ಕಾರ ನಿಷೇಧ ವಿಧಿಸಿತ್ತು. ಇದನ್ನು ಪ್ರಶ್ನಿಸಿ ವಾಹಿನಿ ಹೈಕೋರ್ಟ್‌ ಮೊರೆ ಹೋಗಿತ್ತು. ಕೇಂದ್ರ ಸರ್ಕಾರದ ನಿಷೇಧವನ್ನು ಕೇರಳ ಹೈಕೋರ್ಟ್‌ ವಿಭಾಗೀಯ ಪೀಠ ಎತ್ತಿಹಿಡಿದಿತ್ತು. ಈ ಹಿನ್ನೆಲೆಯಲ್ಲಿ ವಾಹಿನಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

Related Stories

No stories found.
Kannada Bar & Bench
kannada.barandbench.com