
ತಮಿಳುನಾಡಿನ ಕರೂರ್ ಕಾಲ್ತುಳಿತದ ಕುರಿತು ಸಿಬಿಐ ತನಿಖೆ ನಿರಾಕರಿಸಿ ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ತೀರ್ಪು ನೀಡಿದ ಕೆಲ ಹೊತ್ತಿನಲ್ಲಿಯೇ ಎಸ್‌ಐಟಿ ತನಿಖೆಗೆ ಆದೇಶಿಸಿದ ಚೆನ್ನೈನಲ್ಲಿರುವ ಪ್ರಧಾನ ಪೀಠವು ವ್ಯತಿರಿಕ್ತ ತೀರ್ಪು ನೀಡಿದ್ದ ಹಿನ್ನೆಲೆಯ ಔಚಿತ್ಯವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಪ್ರಶ್ನಿಸಿದೆ.
ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ಅವರ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸೆಪ್ಟೆಂಬರ್ 27ರಂದು ನಡೆಸಿದ್ದ ರಾಜಕೀಯ ಸಮಾವೇಶದಲ್ಲಿ ಕಾಲ್ತುಳಿತ ಸಂಭವಿಸಿ 41 ಮಂದಿ ಮೃತಪಟ್ಟಿದ್ದ ಘಟನೆಯನ್ನು ಎಸ್‌ಐಟಿ ತನಿಖೆಗೆ ಆದೇಶಿಸಿ ಮದ್ರಾಸ್ ಹೈಕೋರ್ಟ್ ಅಕ್ಟೋಬರ್ 3ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಟಿವಿಕೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಎನ್ ವಿ ಅಂಜಾರಿಯಾ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಹೈಕೋರ್ಟ್‌ನ ಮಧುರೈ ಪೀಠವು ಕಾಲ್ತುಳಿತದ ಕುರಿತ ಮತ್ತೊಂದು ಅರ್ಜಿಯನ್ನು ಈಗಾಗಲೇ ತಿರಸ್ಕರಿಸಿರುವಾಗ, ವಿಶೇಷ ಕಾರ್ಯಾಚರಣಾ ಕಾರ್ಯವಿಧಾನ (ಎಸ್‌ಒಪಿ) ಕೋರಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ನ ಪ್ರಧಾನ ಪೀಠ ಏಕೆ ಪರಿಗಣಿಸಿತು ಎಂದು ಪೀಠಆರಂಭದಲ್ಲಿಯೇ ಪ್ರಶ್ನಿಸಿತು.
ಪ್ರಧಾನ ಪೀಠದೆದುರು ಸಲ್ಲಿಸಲಾದ ಅರ್ಜಿ ಎಸ್ಒಪಿ ರೂಪಿಸುವುದಕ್ಕೆ ಸೀಮಿತವಾಗಿತ್ತು. ಆದರೂ ಹೈಕೋರ್ಟ್ ಈ ಮನವಿಯ ವ್ಯಾಪ್ತಿ ಮೀರಿ ಎಸ್ಐಟಿ ರಚಿಸಿತು. ಇಂತದ್ದಕ್ಕೆಲ್ಲ ಮಿತಿ ಇರಬೇಕು ಎಂದು ನ್ಯಾಯಾಲಯ ಹೇಳಿತು.
ಸುದೀರ್ಘ ವಿಚಾರಣೆಯ ಬಳಿಕ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತು.
ಹಿರಿಯ ವಕೀಲರಾದ ಗೋಪಾಲ್ ಬಾಲಸುಬ್ರಮಣ್ಯನ್, ಆರ್ಯಮ ಸುಂದರಂ ಅವರು ಟಿವಿಕೆ ಪರವಾಗಿ ವಾದ ಮಂಡಿಸಿದರು. ತಮಿಳುನಾಡು ಸರ್ಕಾರವನ್ನು ಹಿರಿಯ ನ್ಯಾಯವಾದಿಗಳಾದ ಮುಕುಲ್ ರೋಹಟ್ಗಿ, ಪಿ ವಿಲ್ಸನ್ ಪ್ರತಿನಿಧಿಸಿದ್ದರು. ಘಟನೆಯ ಸಂತ್ರಸ್ತರೊಬ್ಬರ ಕುಟುಂಬ ಸದಸ್ಯರ ಪರವಾಗಿ ಮತ್ತೊಬ್ಬ ಹಿರಿಯ ನ್ಯಾಯವಾದಿ ವಿ ರಾಘವಾಚಾರಿ ವಾದ ಮಂಡಿಸಿದರು.