ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವ ಕುರಿತು ಸುಪ್ರೀಂ ಕೋರ್ಟ್ ಮಂಗಳವಾರ ಜಾರಿ ನಿರ್ದೇಶನಾಲಯವನ್ನು (ಇ ಡಿ) ಪ್ರಶ್ನಿಸಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ಇ ಡಿ ಗೆ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿದ್ದು, ಶುಕ್ರವಾರದ ವಿಚಾರಣೆ ವೇಳೆ ಉತ್ತರಿಸಲು ಸೂಚಿಸಿದೆ.
ಪಂಕಜ್ ಬನ್ಸಾಲ್ ಮತ್ತು ಭಾರತ ಒಕ್ಕೂಟ ಹಾಗೂ ವಿಜಯ್ ಮದನ್‌ಲಾಲ್ ಮತ್ತು ಭಾರತ ಒಕ್ಕೂಟ ಪ್ರಕರಣದಲ್ಲಿ ತಿಳಿಸಿರುವಂತೆ ನ್ಯಾಯ ನಿರ್ಣಯದ ಪ್ರಕ್ರಿಯೆಯಿಲ್ಲದೆ ಕ್ರಿಮಿನಲ್ ಮೊಕದ್ದಮೆಗಳನ್ನು ಇ ಡಿ ಪ್ರಾರಂಭಿಸಬಹುದೇ ... ಈ ಪ್ರಕರಣದಲ್ಲಿ ಇದುವರೆಗೆ ಯಾವುದೇ ಮುಟ್ಟುಗೋಲಿನ ಪ್ರಕ್ರಿಯೆಗಳಿಲ್ಲ, ಮತ್ತು ಇದ್ದರೆ, ಅರ್ಜಿದಾರರು ಹೇಗೆ ಭಾಗಿಯಾಗಿದ್ದಾರೆ ಎಂಬುದನ್ನು ಇ ಡಿ ತೋರಿಸಬೇಕು ಎಂದು ಅದು ಹೇಳಿದೆ.
ಅಲ್ಲದೆ, ಮನೀಶ್ ಸಿಸೋಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಪರವಾಗಿ ಮತ್ತು ವಿರುದ್ಧವಾಗಿ ಫಲಿತಾಂಶಗಳು ಕಂಡುಬಂದಿವೆ...ಕೇಜ್ರಿವಾಲ್ ಪ್ರಕರಣದಲ್ಲಿ ಅದು ಆಗಿದೆಯೇ ಎಂಬುದನ್ನು ಇ ಡಿ ತಿಳಿಸಬೇಕು ಎಂದೂ ಹೇಳಿದೆ.
ಬಹುಮುಖ್ಯವಾಗಿ ಸಾರ್ವತ್ರಿಕ ಚುನಾವಣೆಗೆ ಕೆಲ ದಿನಗಳಿರುವಂತೆಯೇ ಬಂಧಿಸಿರುವುದು ಏಕೆ ಎನ್ನುವುದನ್ನು ವಿವರಿಸಲು ಸೂಚಿಸಿದೆ.
ಇಡಿ ತನಿಖೆ ನಡೆಸುತ್ತಿರುವ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ನೇರ ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಇಂದು ಅವರ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು. ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಹಾಜರಿದ್ದರು.