ಸನಾತನ ಧರ್ಮ ಕುರಿತು ಹೇಳಿಕೆ: ವಾಕ್‌ ಸ್ವಾತಂತ್ರ್ಯದ ದುರ್ಬಳಕೆ ಎಂದ ಸುಪ್ರೀಂ; ಉದಯನಿಧಿ ಸ್ಟಾಲಿನ್ ವಿರುದ್ಧ ಗರಂ

ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ತನ್ನ ವಿರುದ್ಧ ದಾಖಲಾದ ವಿವಿಧ ಎಫ್ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಉದಯನಿಧಿ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಉದಯನಿಧಿ ಸ್ಟಾಲಿನ್ ಮತ್ತು ಸುಪ್ರೀಂ ಕೋರ್ಟ್
ಉದಯನಿಧಿ ಸ್ಟಾಲಿನ್ ಮತ್ತು ಸುಪ್ರೀಂ ಕೋರ್ಟ್

ಕಳೆದ ವರ್ಷ ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿದೆ.

ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಸ್ಟಾಲಿನ್ ಅವರು ಸಂವಿಧಾನದ 19 (1) (ಎ) (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು 25 ವಿಧಿ (ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಧರ್ಮದೆಡೆಗಿನ ನಿಷ್ಠೆ, ಆಚರಣೆ ಮತ್ತು ಪ್ರಸರಣದ ಹಕ್ಕು) ಅಡಿಯಲ್ಲಿ ಒದಗಿಸಲಾಗಿರುವ ಹಕ್ಕುಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಮೌಖಿಕವಾಗಿ ಟೀಕಿಸಿದೆ.

ಸ್ಟಾಲಿನ್ ತಮ್ಮ ಹೇಳಿಕೆಯ ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವಿನಿಂದ ವರ್ತಿಸಬೇಕಿತ್ತು ಎಂದು ನ್ಯಾಯಾಲಯ ನುಡಿದಿದೆ.

"ನೀವು 19 (1) ಎ ಮತ್ತು 25ನೇ ವಿಧಿಯಡಿ ನಿಮ್ಮ ಹಕ್ಕುಗಳನ್ನು ದುರುಪಯೋಗಪಡಿಸಿಕೊಂಡಿದ್ದೀರಿ! ಈಗ 32ನೇ ವಿಧಿಯಡಿ (ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಸುಪ್ರೀಂ ಕೋರ್ಟ್‌ ಎಡತಾಕುವುದು) ಅರ್ಜಿ ಸಲ್ಲಿಸಿದ್ದೀರಿ ಎಂದು ನಿಮಗೆ ತಿಳಿದಿದೆಯೇ? ಇದರ ಪರಿಣಾಮಗಳನ್ನು ನೀವು ಅರಿತುಕೊಳ್ಳಬೇಕು, ನೀವೊಬ್ಬ ಸಚಿವರು, ಸಾಮಾನ್ಯ ವ್ಯಕ್ತಿಯಲ್ಲ" ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ

ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ತನ್ನ ವಿರುದ್ಧ ದಾಖಲಾದ ವಿವಿಧ ಎಫ್ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಉದಯನಿಧಿ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸೆಪ್ಟೆಂಬರ್ 2, 2023 ರಂದು, ಚೆನ್ನೈನಲ್ಲಿ ತಮಿಳುನಾಡು ಪ್ರಗತಿಪರ ಬರಹಗಾರರ ಕಲಾವಿದರ ಸಂಘ ಆಯೋಜಿಸಿದ್ದ ಸಮ್ಮೇಳನದಲ್ಲಿ, ಉದಯನಿಧಿ ಸ್ಟಾಲಿನ್ ಕೆಲವು ವಿಷಯಗಳನ್ನು ಕೇವಲ ವಿರೋಧಿಸಬಾರದು ಆದರೆ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು.

"ಡೆಂಗಿ, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೋನಾ ವೈರಸ್ ನಿರ್ಮೂಲನೆ ಮಾಡುವಂತೆಯೇ, ನಾವು ಸನಾತನವನ್ನು ನಿರ್ಮೂಲನೆ ಮಾಡಬೇಕಾಗುತ್ತದೆ" ಎಂದು ಅವರು ಹೇಳಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.

ಇದಾದ ಕೆಲವೇ ದಿನಗಳಲ್ಲಿ 14 ಮಂದಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳು ಸೇರಿದಂತೆ 262 ಮಂದಿ ಉದಯನಿಧಿ ಅವರ ವಿರುದ್ಧ ಸ್ವಯಂಪ್ರೇರಿತ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದಿದ್ದರು.

ಇದಾದ ಕೆಲವೇ ವಾರಗಳಲ್ಲಿ ಸ್ಟಾಲಿನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಕಳೆದ ತಿಂಗಳು ಬೆಂಗಳೂರಿನ ವಿಚಾರಣಾ ನ್ಯಾಯಾಲಯ ಸ್ಟಾಲಿನ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆದೇಶಿಸಿತ್ತು.

ಸ್ಟಾಲಿನ್ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕುವಂತೆ ಸಲ್ಲಿಸಲಾಗಿದ್ದ ಅರ್ಜಿಗಳು ಮದ್ರಾಸ್ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಉದಯನಿಧಿ ಅವರು ಪ್ರಸ್ತುತ ತಮಿಳುನಾಡಿನ ಯುವಜನ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವರಾಗಿದ್ದಾರೆ.

ಈ ಮಧ್ಯೆ ಸನಾತನ ಧರ್ಮದ ಬಗ್ಗೆ ತಾವು ನೀಡಿದ್ದ ಹೇಳಿಕೆ ಹಿಂದೂ ಧರ್ಮ ಅಥವಾ ಹಿಂದೂ ಜೀವನ ವಿಧಾನಕ್ಕೆ ವಿರುದ್ಧವಾದುದಾಗಿರಲಿಲ್ಲ ಬದಲಿಗೆ ಜಾತಿ ತಾರತಮ್ಯ ಕೊನೆಗೊಳಿಸುವ ಕರೆಯಷ್ಟೇ ಆಗಿತ್ತು ಎಂದು ಸ್ಪಷ್ಟಪಡಿಸಿದ್ದರು.

ಅರ್ನಬ್ ಗೋಸ್ವಾಮಿ, ಮೊಹಮ್ಮದ್ ಜುಬೈರ್, ನೂಪುರ್ ಶರ್ಮಾ ಮತ್ತು ಅಮಿಶ್ ದೇವಗನ್ ಅವರ ಪ್ರಕರಣಗಳ ತೀರ್ಪುಗಳ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ದಾಖಲಾದ ಎಫ್ಐಆರ್‌ಗಳನ್ನು ಒಗ್ಗೂಡಿಸಿ ಆಲಿಸುವಂತೆ ಉದಯನಿಧಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಕೋರಿದರು.

ಆದರೆ, ಎಲ್ಲಾ ಎಫ್ಐಆರ್‌ಗಳನ್ನು ಒಟ್ಟುಗೂಡಿಸಿ ಒಂದೇ ರಾಜ್ಯದಲ್ಲಿ ಪ್ರಕರಣದ ವಿಚಾರಣೆ ನಡೆಸುವ ಮೂಲಕ ಉಳಿದ ರಾಜ್ಯಗಳ ಸಾಕ್ಷಿಗಳನ್ನು ಬೇರೆ ರಾಜ್ಯಕ್ಕೆ ಭೇಟಿ ನೀಡುವಂತೆ ಏಕೆ ಮಾಡಬೇಕು ಎಂದು ನ್ಯಾಯಮೂರ್ತಿ ದತ್ತಾ ಪ್ರಶ್ನಿಸಿದರು.

2022 ರಲ್ಲಿ ಪ್ರವಾದಿ ಮುಹಮ್ಮದ್ ಬಗ್ಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಜಿ ವಕ್ತಾರೆ ನೂಪುರ್ ಶರ್ಮಾ ನೀಡಿದ ವಿವಾದಾತ್ಮಕ ಹೇಳಿಕೆಗಳು ದ್ವೇಷದಿಂದ ಕೂಡಿದ್ದವು ಎಂದು ಸಿಂಘ್ವಿ ಹೇಳಿದರು.

ಉದಯನಿಧಿ ಅವರ ವಿರುದ್ಧದ ಕೆಲವು ಎಫ್ಐಆರ್‌ಗಳಲ್ಲಿನ ತೀರ್ಪುಗಳು ಮತ್ತು ವಿಚಾರಣೆಗಳ ಪ್ರಗತಿಯನ್ನು ಪರಿಶೀಲಿಸಿದ ನಂತರ ಮಾರ್ಚ್ 15ರಂದು ಅವರ ಮನವಿಯನ್ನು ಮತ್ತಷ್ಟು ಆಲಿಸಲು ನ್ಯಾಯಾಲಯ ಅಂತಿಮವಾಗಿ ಒಪ್ಪಿಕೊಂಡಿತು.

ವಿಶೇಷವೆಂದರೆ, ಸುದ್ದಿ ನಿರೂಪಕ ಅಮಿಶ್ ದೇವಗನ್ ಅವರ ದ್ವೇಷ ಭಾಷಣದ ಆರೋಪದ ಎಫ್ಐಆರ್‌ಗಳನ್ನು ಒಗ್ಗೂಡಿಸಲು ಅನುಮತಿ ನೀಡಿದ ವಿಭಾಗೀಯ ಪೀಠದಲ್ಲಿ ನ್ಯಾಯಮೂರ್ತಿ ಖನ್ನಾ ಕೂಡ ಇದ್ದರು.

Kannada Bar & Bench
kannada.barandbench.com