ವಿಸ್ತೃತ ನ್ಯಾಯಪೀಠಕ್ಕೆ ಮರಾಠಾ ಮೀಸಲಾತಿ ಪ್ರಕರಣ; ಮರಾಠಾ ಕೋಟಾದಡಿ ಸದ್ಯಕ್ಕಿಲ್ಲ ಉದ್ಯೋಗ, ಪ್ರವೇಶಾತಿ

ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿಗೆ ಬದಲಾವಣೆ ಮಾಡುವುದಿಲ್ಲ ಎಂದು ಆದೇಶಿಸಿದ ನ್ಯಾಯಾಲಯ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ಮುಂದೆ ಪ್ರಕರಣವನ್ನು ಇರಿಸಲಾಗುವುದು, ಅವರು ವಿಸ್ತೃತ ಪೀಠ ರಚಿಸಲಿದ್ದಾರೆ.
Maratha reservation, Supreme Court
Maratha reservation, Supreme Court

ಮಹಾರಾಷ್ಟ್ರ ರಾಜ್ಯದಲ್ಲಿ ಮರಾಠಾ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಾಯಿದೆ (ಎಸ್‌ಇಬಿಸಿ) ಪ್ರಶ್ನಿಸಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬುಧವಾರ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಒಪ್ಪಿಸಲು ಶಿಫಾರಸ್ಸು ಮಾಡಿದೆ.

ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಹೇಮಂತ್ ಗುಪ್ತಾ ಮತ್ತು ಎಸ್ ರವೀಂದ್ರ ಭಟ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ಆದೇಶ ನೀಡಿದ್ದು, ಅಲ್ಲಿಯವರೆಗೆ ಉದ್ಯೋಗ ಮತ್ತು ಪ್ರವೇಶಾತಿಯಲ್ಲಿ ಮೀಸಲಾತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿಗೆ ಬದಲಾವಣೆ ಮಾಡುವುದಿಲ್ಲ ಎಂದು ನ್ಯಾಯಾಲಯವು ಆದೇಶಿಸಿದೆ. ಪ್ರಕರಣವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ಮುಂದಿರಿಸಲಿದ್ದು, ಅವರು ವಿಸ್ತೃತ ಪೀಠ ರಚಿಸಲಿದ್ದಾರೆ.

ಶೇ. 50 ಮೀಸಲಾತಿ ಮಿತಿ ವಿಚಾರಕ್ಕೆ ಸಂಬಂಧಿಸಿದಂತೆ 11 ನ್ಯಾಯಮೂರ್ತಿಗಳ ಪೀಠಕ್ಕೆ ವಿಚಾರಣೆ ಒಪ್ಪಿಸುವುದಕ್ಕೆ ಸಂಬಂಧಿಸಿದಂತೆ ವಿವಿಧ ಅರ್ಜಿದಾರರ ವಾದವನ್ನು ತ್ರಿಸದಸ್ಯ ಪೀಠ ಆಲಿಸಿತು. ಮೀಸಲಾತಿಯನ್ನು ಶೇ.50ಕ್ಕೆ ಮಿತಿಗೊಳಿಸುವ ವಿಚಾರವನ್ನು ವಿಸ್ತೃತ ಪೀಠಕ್ಕೆ ಒಪ್ಪಿಸುವಂತೆ ಮಹಾರಾಷ್ಟ್ರ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಮುಕುಲ್ ರೋಹಟ್ಗಿ ಹಾಗೂ ಅಭ್ಯರ್ಥಿಯನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಆಗ್ರಹಿಸಿದರು.

ಎಸ್‌ಇಬಿಸಿ ಕಾಯಿದೆಯು ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುತ್ತದೆ. ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಕಾನೂನನ್ನು ಎತ್ತಿ ಹಿಡಿದಿದ್ದ ಬಾಂಬೆ ಹೈಕೋರ್ಟ್‌ನ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಸದರಿ ಕಾನೂನನ್ನು ಜಾರಿಗೊಳಿಸಿದರೆ ಮೀಸಲಾತಿಗೆ ನಿಗದಿಗೊಳಿಸಿರುವ ಶೇ.50 ಗರಿಷ್ಠ ಮಿತಿಯನ್ನು ಉಲ್ಲಂಘಿಸಿದಂತಾಗುತ್ತದೆ ಎಂಬ ಪ್ರಾಥಮಿಕ ವಿಚಾರದ ಆಧಾರದಲ್ಲಿ ಕಾಯಿದೆಯನ್ನು ಪ್ರಶ್ನಿಸಲಾಗಿದೆ.

ಸಮಾಜದಲ್ಲಿನ ಜನಸಂಖ್ಯಾ ಶಾಸ್ತ್ರದಲ್ಲಿ ಬದಲಾವಣೆಯಾಗಿರುವುದರಿಂದ ಮೀಸಲಾತಿಗೆ ವಿಧಿಸಲಾಗಿರುವ ಗರಿಷ್ಠ ಮಿತಿಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಎಸ್‌ಇಬಿಸಿ ಕಾಯಿದೆಗೆ ಬೆಂಬಲ ವ್ಯಕ್ತಪಡಿಸಿರುವ ಹಿರಿಯ ನ್ಯಾಯವಾದಿಗಳು ವಾದಿಸಿದ್ದಾರೆ. ಮುಂದುವರೆದು, ಇಂದಿರಾ ಸಹಾನಿ ಪ್ರಕರಣದಲ್ಲಿ 9 ನ್ಯಾಯಮೂರ್ತಿಗಳ ಪೀಠ ತೀರ್ಪು ಪ್ರಕಟಿಸಿರುವುದರಿಂದ ಸದರಿ ಪ್ರಕರಣದ ವಿಚಾರಣೆಯನ್ನು 11 ನ್ಯಾಯಮೂರ್ತಿಗಳ ಪೀಠ ನಡೆಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲುಎಸ್) ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಸಂವಿಧಾನಕ್ಕೆ 103ನೇ ತಿದ್ದುಪಡಿ ತಂದ ಬಳಿಕ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಮೀಸಲಾತಿಯ ಶೇ.50 ಗರಿಷ್ಠ ಮಿತಿಯನ್ನು ಉಲ್ಲಂಘಿಸಲಾಗಿದೆ ಎಂದು ಸಾಂವಿಧಾನಿಕ ಪೀಠಕ್ಕೆ ಮೀಸಲಾತಿ ವಿಚಾರ ಒಪ್ಪಿಸುವ ವಾದದ ಪರವಿರುವ ವಕೀಲರು ಹೇಳಿದ್ದಾರೆ.

Also Read
ಎನ್‌ಎಲ್‌ಎಸ್ಐಯುನಲ್ಲಿ ಸ್ಥಳೀಯರಿಗೆ ಶೇ. 25 ಮೀಸಲಾತಿ: ಆದೇಶ ಕಾಯ್ದಿರಿಸಿದ ಹೈಕೋರ್ಟ್

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ತರಲಾದ ಸಾಂವಿಧಾನಿಕ ತಿದ್ದುಪಡಿ ಪ್ರಶ್ನಿಸಿದ್ದ ಜನಹಿತ ಅಭಿಯಾನ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಗಿತ್ತು ಎಂದು ನ್ಯಾಯಾಲಯದ ಗಮನಸೆಳೆಯಲಾಯಿತು. ಆದ್ದರಿಂದ, ಶಾಸನಾತ್ಮಕವಾದ ಎಸ್‌ಇಬಿಸಿ ಕಾಯಿದೆಯನ್ನೂ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು ಎಂದು ವಾದಕ್ಕೆ ಪುಷ್ಟಿ ಒದಗಿಸಲಾಯಿತು.

ಮತ್ತೊಂದು ಕಡೆ ಹಿರಿಯ ವಕೀಲರಾದ ಅರವಿಂದ ದಾತಾರ್ ಮತ್ತು ಗೋಪಾಲ್ ಶಂಕರನಾರಾಯಣನ್ ಅವರು ಮೇಲಿನ ಉಲ್ಲೇಖಗಳನ್ನು ವಿರೋಧಿಸಿದ್ದಲ್ಲದೇ ಎಸ್‌ಎಲ್ ಪಿ ಪ್ರಕರಣಗಳನ್ನು ನ್ಯಾಯಾಲಯ ನಿರ್ಧರಿಸಿದರೆ ಮತ್ತು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮರಾಠಾ ಸಮುದಾಯ ಹಿಂದುಳಿದಿಲ್ಲವಾದುದರಿಂದ ಮೊದಲಿಗೆ ಅದು ಮೀಸಲಾತಿ ಪಡೆಯಲು ಅರ್ಹವಲ್ಲ. ಇದರಿಂದ ಶೇ. 50 ಮೀಸಲಾತಿ ಉಲ್ಲಂಘಿಸಲಾಗುತ್ತದೆ ಎಂಬ ಪ್ರಶ್ನೆಯೇ ಅನೂರ್ಜಿತವಾಗುತ್ತದೆ. ಆದ್ದರಿಂದ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ವಾದಿಸಿದರು.

ಪ್ರಕರಣಗಳ ಅರ್ಹತೆಯ ಆಧಾರದಲ್ಲಿ ವಿಚಾರಣೆ ನಡೆಸಬೇಕು. ವಿಚಾರಣೆಯ ಸಂದರ್ಭದಲ್ಲಿ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕು ಎಂದು ಪೀಠಕ್ಕೆ ಅನಿಸಿದರೆ ಮುಂದಿನ ಸಂದರ್ಭದಲ್ಲಿ ಅದನ್ನು ಪರಿಗಣಿಸಬಹುದು ಎಂದು ದಾತಾರ್ ಮತ್ತು ಶಂಕರನಾರಾಯಣನ್ ಅವರು ನ್ಯಾಯಪೀಠಕ್ಕೆ ಸಲಹೆ ನೀಡಿದರು.

Related Stories

No stories found.
Kannada Bar & Bench
kannada.barandbench.com