ಶಬರಿಮಲೆ ಪ್ರಕರಣ ವಿಚಾರಣೆ ನಡೆಸುತ್ತಿರುವ 9 ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ದಾವೂದಿ ಬೊಹ್ರಾ ಬಹಿಷ್ಕಾರ ಪ್ರಕರಣ

ಒಂಬತ್ತು ನ್ಯಾಯಮೂರ್ತಿಗಳ ಪೀಠದ ಮುಂದೆ ಬಾಕಿ ಉಳಿದಿರುವ ಶಬರಿಮಲೆ ಉಲ್ಲೇಖದಲ್ಲಿ ಎತ್ತಿರುವ ಪ್ರಶ್ನೆಗಳನ್ನು ಹಾಲಿ ಪ್ರಕರಣದಲ್ಲಿ ಎರಡು ಪ್ರಮುಖ ವಿಚಾರಗಳು ಒಳಗೊಂಡಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
Justices Vikram Nath, Sanjiv Khanna, SK Kaul, Abhay S. Oka,  J.k. Maheshwari
Justices Vikram Nath, Sanjiv Khanna, SK Kaul, Abhay S. Oka, J.k. Maheshwari

ದಾವೂದಿ ಬೊಹ್ರಾ ಸಮುದಾಯವು ತನ್ನ ಸದಸ್ಯರನ್ನು ಬಹಿಷ್ಕರಿಸಲು ಹೊಂದಿರುವ ಹಕ್ಕುಗಳ ಕುರಿತಾಗಿ ಉದ್ಭವಿಸಿರುವ ಕಾನೂನಾತ್ಮಕ ವಿಷಯಗಳನ್ನು ಶಬರಿಮಲೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಒಂಭತ್ತು ನ್ಯಾಯಮೂರ್ತಿಗಳ ವಿಸ್ತೃತ ಪೀಠದ ಪರಿಗಣನೆಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಶಿಫಾರಸ್ಸು ಮಾಡಿದೆ [ದಾವೂದಿ ಬೊಹ್ರಾ ಸಮುದಾಯ ಕೇಂದ್ರ ಮಂಡಳಿ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಇಸ್ಲಾಂ ಧರ್ಮಕ್ಕೆ ಸೇರಿದ ಷಿಯಾ ಪಂಥದ ಪಂಗಡವಾದ ದಾವೂದಿ ಬೊಹ್ರಾ ಸಮುದಾಯದ ಸರ್ವೋಚ್ಚ ನಾಯಕ ತನ್ನ ಸದಸ್ಯರನ್ನು ಬಹಿಷ್ಕರಿಸಬಹುದೇ ಮತ್ತು ಅದೊಂದು ಧಾರ್ಮಿಕ ಆಚರಣೆ ಎಂದು ಪರಿಗಣಿಸಿ ಸಂವಿಧಾನ ಅದಕ್ಕೆ ರಕ್ಷಣೆ ನೀಡುತ್ತದೆಯೇ ಎಂದು ಪ್ರಶ್ನಿಸಿರುವ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡಸಿತು.

ಈ ವೇಳೆ,1962ರ ಸರ್ದಾರ್ ಸೈಯದ್ನಾ ತಾಹೆರ್ ಸೈಫುದ್ದೀನ್ ಮತ್ತು ಬಾಂಬೆ ಸರ್ಕಾರ ಪ್ರಕರಣದಲ್ಲಿ ಸದಸ್ಯರನ್ನು ಬಹಿಷ್ಕರಿಸುವ ಬೋಹ್ರಾ ಸಮುದಾಯದ ಹಕ್ಕುಗಳನ್ನು ರಕ್ಷಿಸಿರುವ ತೀರ್ಪಿನ ಮರುಪರಿಶೀಲನೆಯ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌, ಸಂಜೀವ್‌ ಖನ್ನಾ, ಅಭಯ್‌ ಶ್ರೀನಿವಾಸ್‌ ಓಕಾ, ವಿಕ್ರಮ್‌ನಾಥ್‌ ಮತ್ತು ಜೆ ಕೆ ಮಹೇಶ್ವರಿ ಅವರ ನೇತೃತ್ವದ ಸಾಂವಿಧಾನಿಕ ಪೀಠವು ಅಭಿಪ್ರಾಯಪಟ್ಟಿತು.

“ಸಾಂವಿಧಾನಿಕ ಪೀಠದ ನಿರ್ಧಾರವನ್ನು ಮರುಪರಿಗಣಿಸುವ ಅಗತ್ಯವಿದೆ. ಅದಕ್ಕೆ ಸಂಬಂಧಿಸಿದಂತೆ ನಾವು ಕಾರಣಗಳನ್ನು ದಾಖಲಿಸಿದ್ದೇವೆ. ಇದರಲ್ಲಿ ಎರಡು ಆಧಾರಗಳಿವೆ” ಎಂದು ನ್ಯಾಯಾಲಯ ಹೇಳಿದೆ.

ಸಂವಿಧಾನದ 26(ಬಿ) ವಿಧಿ ಹಾಗೂ ಸಂವಿಧಾನದ ಮೂರನೇ ಭಾಗದ ನಡುವಿನ ಹಕ್ಕುಗಳ ಸಮತೋಲನದ ಕುರಿತು ಪರಿಶೀಲಿಸಬೇಕಾದ ಅಗತ್ಯವನ್ನು ಪೀಠವು ಒತ್ತಿ ಹೇಳಿತು. ಸಂವಿಧಾನದ 26(ಬಿ) ವಿಧಿಯು ಧಾರ್ಮಿಕ ಪಂಥಗಳಿಗೆ ತಮ್ಮ ಆಚರಣಾ ವಿಧಾನಗಳನ್ನು ಕಾಯ್ದುಕೊಳ್ಳುವ ಹಕ್ಕನ್ನು ನೀಡಿದರೆ, ಸಂವಿಧಾನದ ಮೂರನೇ ಭಾಗವು ವ್ಯಕ್ತಿಯ ಹಕ್ಕುಗಳ ಕುರಿತಾದದ್ದಾಗಿದೆ. ಅದರಲ್ಲಿಯೂ ವಿಶೇಷವಾಗಿ ಸಂವಿಧಾನದ 21ನೇ ವಿಧಿಯು ನೀಡುವ ಜೀವಿಸುವ ಹಾಗೂ ಸ್ವಾತಂತ್ರ್ಯದ ಹಕ್ಕು ಇಲ್ಲಿ ಪ್ರಮುಖವಾಗಿದೆ. ಇವೆರಡರ ನಡುವಿನ ಸಮತೋಲನದ ಕುರಿತು ಪರಿಶೀಲಿಸಬೇಕಾದ ಅಗತ್ಯದೆಡೆಗೆ ಪೀಠವು ಬೆರಳು ಮಾಡಿದೆ. ಇದು ವಿಷಯವನ್ನು ವಿಸ್ತೃತ ಪೀಠವು ಪರಿಗಣಿಸಲು ಬೇಕಾದ ಮೊದಲನೆಯ ಆಧಾರವಾಗಿದೆ.

ಎರಡನೆಯದು, ಸಾಂವಿಧಾನಿಕ ನೈತಿಕತೆಯನ್ನು ಆಧರಿಸಿದ್ದಾಗಿದೆ. ಸಾಂವಿಧಾನಿಕ ನೈತಿಕತೆಯನ್ನು ಒರೆಗೆ ಹಚ್ಚಿ ನೋಡಿದಾಗ ಬಹಿಷ್ಕಾರದ ವಿಚಾರಕ್ಕೆ ಸಂವಿಧಾನದ 26 (ಬಿ) ವಿಧಿ ಅಡಿಯಲ್ಲಿ ರಕ್ಷಣೆ ನೀಡಬಹುದೇ ಎನ್ನುವ ಪ್ರಶ್ನೆಯನ್ನು ಪೀಠವು ಎತ್ತಿದೆ.

Also Read
ದಾವೂದಿ ಬೊಹ್ರಾ ಸಮುದಾಯದ ಬಹಿಷ್ಕಾರ ಪ್ರಕರಣ: ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಕುರಿತು ಆದೇಶ ಕಾಯ್ದಿರಿಸಿದ ಸುಪ್ರೀಂ

ಶಬರಿಮಲೆ ಮರುಪರಿಶೀಲನಾ ತೀರ್ಪಿನ ಮೂರು ಮತ್ತು ನಾಲ್ಕನೇ ಪ್ರಶ್ನೆಯಲ್ಲಿ ಈ ಎರಡೂ ವಿಚಾರಗಳನ್ನು ಒಳಗೊಳ್ಳಲಾಗಿದೆ. ಹೀಗಾಗಿ, ಈ ಪ್ರಕರಣವನ್ನು ಶಬರಿಮಲೆ ಪ್ರಕರಣ ಇರುವ ಒಂಭತ್ತು ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ಸೇರ್ಪಡೆ ಮಾಡುವಂತೆ ಪೀಠವು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳನ್ನು ಕೋರಿತು.

ದಾವೂದಿ ಬೊಹ್ರಾ ಸಮುದಾಯದ ಸರ್ವೋಚ್ಚ ನಾಯಕ ತನ್ನ ಸದಸ್ಯರನ್ನು ಬಹಿಷ್ಕರಿಸಬಹುದೇ ಮತ್ತು ಅದೊಂದು ಧಾರ್ಮಿಕ ಆಚರಣೆ ಎಂದು ಪರಿಗಣಿಸಿ ಸಂವಿಧಾನ ಅದಕ್ಕೆ ರಕ್ಷಣೆ ನೀಡುತ್ತದೆಯೇ ಎಂದು ಪ್ರಶ್ನಿಸಿರುವ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದ ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕೆ ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ತೀರ್ಪು ಕಾಯ್ದಿರಿಸಿತ್ತು.

Related Stories

No stories found.
Kannada Bar & Bench
kannada.barandbench.com