ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮತದಾನವಾದ 48 ಗಂಟೆಗಳಲ್ಲಿ ಎಲ್ಲಾ ಮತಗಟ್ಟೆಗಳಲ್ಲಿನ ಒಟ್ಟಾರೆ ಪ್ರಮಾಣೀಕೃತ ಮತದಾನದ ದತ್ತಾಂಶ ಮತ್ತು ಒಟ್ಟು ಮತಗಳ ಚಲಾವಣೆಯನ್ನು ಪ್ರಕಟಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಮಧ್ಯಂತರ ಕೋರಿಕೆ ಮಾಡಿದ್ದ ಸರ್ಕಾರೇತರ ಸಂಸ್ಥೆ ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಅರ್ಜಿ ಸಂಬಂಧ ಆದೇಶ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಸುಪ್ರೀಂ ಕೋರ್ಟ್‌ಗೆ 2019ರಲ್ಲಿ ಸಲ್ಲಿಕೆಯಾಗಿರುವ ಅರ್ಜಿಯಲ್ಲಿನ ಪ್ರಧಾನ ಕೋರಿಕೆಯೇ ಹಾಲಿ ಅರ್ಜಿಯ ಮಧ್ಯಂತರ ಕೋರಿಕೆಯಾಗಿದೆ ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಸತೀಶ್ ಚಂದ್ರ ಶರ್ಮಾ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠ ಹೇಳಿದೆ.
“2019ರ ಅರ್ಜಿಯ ʼಬಿʼ ಕೋರಿಕೆ ಮತ್ತು 2924ರ ಹಾಲಿ ಮಧ್ಯಂತರ ಅರ್ಜಿಯ ʼಎʼ ಕೋರಿಕೆ ನೋಡಿ… ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶವು ನಿಮ್ಮತ್ತ ಮುಖ ನೆಟ್ಟಿದ್ದು ಹೀಗೆ ಮಾಡುವಂತಿಲ್ಲ ಎಂದು ಹೇಳುತ್ತದೆ. 1985ರ ತೀರ್ಪಿನ ಪ್ರಕಾರ ವಿಶೇಷ ಸಂದರ್ಭದಲ್ಲಿ ಹಾಗೆ ಮಾಡಬಹುದು ಎನ್ನಲಾಗಿದೆ. ಈ ಪ್ರಕರಣದಲ್ಲಿ ಮಾರ್ಚ್ 16ರಂದು ನೀವೇಕೆ ಅರ್ಜಿ ಸಲ್ಲಿಸಲಿಲ್ಲ” ಎಂದು ಪೀಠ ಪ್ರಶ್ನಿಸಿದೆ.
ಇದಕ್ಕೆ ಎಡಿಆರ್ ಪ್ರತಿನಿಧಿಸಿದ್ದ ಹಿರಿಯ ವಕೀಲ ದುಷ್ಯಂತ್ ದವೆ ಅವರು “ಇಸಿಐ ಮಾಹಿತಿ ಬಹಿರಂಗಪಡಿಸಿದ ಬಳಿಕ ಮಾತ್ರವೇ ನಾವು ಅರ್ಜಿ ಸಲ್ಲಿಸಬಹುದಿತ್ತು" ಎಂದರು. ಆದಾಗ್ಯೂ, ನ್ಯಾಯಾಲಯವು ಮಧ್ಯಂತರ ಆದೇಶ ಮಾಡಲು ನಿರಾಕರಿಸಿತು.
“2019ರ ಅರ್ಜಿಯ ʼಬಿʼ ಕೋರಿಕೆ ಮತ್ತು ಹಾಲಿ ಮಧ್ಯಂತರ ಅರ್ಜಿಯ ʼಎʼ ಕೋರಿಕೆಯು ಮೇಲ್ನೋಟಕ್ಕೆ ಒಂದೇ ರೀತಿ ಇರುವುದರಿಂದ ನಾವು ಮಧ್ಯಂತರ ಆದೇಶ ಮಾಡುವ ಉದ್ದೇಶ ಹೊಂದಿಲ್ಲ. ಬೇಸಿಗೆ ರಜೆ ಬಳಿಕ ಮಧ್ಯಂತರ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಬೇಕು" ಎಂದು ನ್ಯಾಯಾಲಯ ಆದೇಶಿಸಿದೆ.
ಮೇಲ್ನೋಟದ ಅಭಿಪ್ರಾಯ ಹೊರತುಪಡಿಸಿ, ಅರ್ಹತೆಯ ಮೇಲೆ ನ್ಯಾಯಾಲಯವು ಅಭಿಪ್ರಾಯ ವ್ಯಕ್ತಪಡಿಸಿಲ್ಲ.
2024ರ ಲೋಕಸಭಾ ಚುನಾವಣೆಯಲ್ಲಿ ಮತದಾನವಾದ 48 ಗಂಟೆಗಳ ಒಳಗೆ ಎಲ್ಲಾ ಮತಗಟ್ಟೆಗಳಲ್ಲಿನ ಮತದಾನದ ಅಂತಿಮ ದೃಢೀಕೃತ ದತ್ತಾಂಶ ಹಾಗೂ ಚಲಾವಣೆಯಾದ ಒಟ್ಟು ಮತಗಳನ್ನು ಬಹಿರಂಗ ಪಡಿಸಲು ಕೋರಿ ಸರ್ಕಾರೇತರ ಸಂಸ್ಥೆ ಎಡಿಆರ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.
ಎಲ್ಲಾ ಮತಗಟ್ಟೆಗಳಲ್ಲಿ ಅಂತಿಮ ಪ್ರಮಾಣೀಕೃತ ಮತದಾನ ದತ್ತಾಂಶ ಪ್ರಕಟಿಸುವ ಸಂಬಂಧ ಯಾವುದೇ ಕಾನೂನಾತ್ಮಕ ಹಕ್ಕನ್ನು ಚಲಾಯಿಸಲಾಗದು ಎಂದು ಬುಧವಾರವಷ್ಟೇ ಭಾರತೀಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ಹೇಳಿತ್ತು.