ತೇಜಸ್ವಿ ಸೂರ್ಯ ವಿರುದ್ಧದ ಎಫ್‌ಐಆರ್‌ಗೆ ತಡೆ ನೀಡಿದ್ದ ಹೈಕೋರ್ಟ್‌ ಆದೇಶ ಅಬಾಧಿತ; ತಡೆ ನೀಡಲು ಸುಪ್ರೀಂ ನಕಾರ

ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ದೀಪಂಕರ್‌ ದತ್ತ ಅವರ ನೇತೃತ್ವದ ವಿಭಾಗೀಯ ಪೀಠವು ಅರ್ಜಿದಾರರು ಏಕೆ ಮೊದಲಿಗೆ ಹೈಕೋರ್ಟ್‌ ಕದತಟ್ಟಿಲ್ಲ ಎಂದು ಪ್ರಶ್ನಿಸಿತು.
Tejasvi Surya and Supreme Court
Tejasvi Surya and Supreme CourtTejasvi Surya (FB)
Published on

ಬೆಂಗಳೂರಿನ ನಗರ್ತಪೇಟೆಯ ಮೊಬೈಲ್ ಅಂಗಡಿ ಮಾಲೀಕ ಮುಖೇಶ ಎಂಬಾತನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿ, ಸಾರ್ವಜನಿಕ ಶಾಂತಿ-ಸುವ್ಯವಸ್ಥೆಗೆ ಭಂಗ ತಂದ ಆರೋಪದಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ನಿರಾಕರಿಸಿತು.

ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ದೀಪಂಕರ್‌ ದತ್ತ ಅವರ ನೇತೃತ್ವದ ವಿಭಾಗೀಯ ಪೀಠವು ಅರ್ಜಿದಾರರು ಏಕೆ ಮೊದಲಿಗೆ ಹೈಕೋರ್ಟ್‌ ಕದತಟ್ಟಿಲ್ಲ ಎಂದು ಪ್ರಶ್ನಿಸಿತು.

“ಪ್ರತಿಯೊಬ್ಬರು ಸುಪ್ರೀಂ ಕೋರ್ಟ್‌ಗೆ ಓಡಿ ಬರುತ್ತಾರೆ. ನಾವು ನೋಟಿಸ್‌ ಜಾರಿ ಮಾಡಿದರೆ ನಾವೇನಾದರೂ ನಿಲುವು ತೆಗೆದುಕೊಳ್ಳುತ್ತೇವೆಯೇ? ಅದು ಮಧ್ಯಂತರ ನಿಲುವಷ್ಟೇ ಅಗುತ್ತದೆ. ನೀವೇಕೆ ಹೈಕೋರ್ಟ್‌ಗೆ ಹೋಗಿಲ್ಲ” ಎಂದು ನ್ಯಾಯಾಲಯವು ಪ್ರಶ್ನಿಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ಶಾದನ್‌ ಫರಾಸತ್‌ ಅವರು ಅರ್ಜಿ ಹಿಂಪಡೆಯುವುದಾಗಿ ಹೇಳಿದ್ದರಿಂದ ನ್ಯಾಯಾಲಯವು ಅದನ್ನು ಪುರಸ್ಕರಿಸಿತು.

ಮಾರ್ಚ್‌ 22ರಂದು ಹೈಕೋರ್ಟ್‌ ಮಾಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ನ್ಯಾಯಾಲಯ ನಡೆಸಿತು. ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ಪೀಠ ತೇಜಸ್ವಿ ಸೂರ್ಯ ವಿರುದ್ಧದ ಎಫ್‌ಐಆರ್‌ಗೆ ತಡೆ ನೀಡಿತ್ತು.

ಪ್ರಕರಣದ ಹಿನ್ನೆಲೆ: ಆಜಾನ್ ಪ್ರಾರ್ಥನೆ ವೇಳೆ ಹನುಮಾನ್‌ ಚಾಲೀಸಾ ಹಾಡು ನುಡಿಸಿದರು ಎಂದು ಆರೋಪಿಸಿ ಕೆಲ ಯುವಕರು ಮುಕೇಶ್‌ನ ಮೇಲೆ ಗಂಭೀರ ಹಲ್ಲೆ ನಡೆಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಇದರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ತೇಜಸ್ವಿ ಸೂರ್ಯ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಲಾಗಿದೆ ಎಂದು ಆರೋಪಿಸಿ ತೇಜಸ್ವಿ ಸೂರ್ಯ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 153ಎ, 295ಎ ಹಾಗೂ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 123(3ಎ) ಅಡಿ ಬೆಂಗಳೂರಿನ ಹಲಸೂರು ಗೇಟ್‌ ಠಾಣೆಯಲ್ಲಿ 20.03.2024ರಂದು ಪ್ರಕರಣ ದಾಖಲಿಸಲಾಗಿತ್ತು.

Kannada Bar & Bench
kannada.barandbench.com