ಮತದಾರರನ್ನು ವಂಚಿಸುವ ಉದ್ದೇಶದಿಂದ ಒಂದೇ ರೀತಿಯ ಹೆಸರಿನ, ನಕಲಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದರ ವಿರುದ್ಧ ಕ್ರಮಕೈಗೊಳ್ಳಲು ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ಶುಕ್ರವಾರ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಅಭ್ಯರ್ಥಿಗಳ ತಂದೆ-ತಾಯಿ ನಿರ್ದಿಷ್ಟ ಹೆಸರು ನೀಡಿದ್ದಾರೆ ಎಂಬ ಕಾರಣಕ್ಕೆ ಅವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲಾಗದು ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಎಸ್ ಸಿ ಶರ್ಮಾ ಮತ್ತು ಸಂದೀಪ್ ಶರ್ಮಾ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.
“ಪ್ರಕರಣದ ಹಣಬರಹ ನಮಗೆ ಗೊತ್ತಿದೆ. ಅಭ್ಯರ್ಥಿಗಳಿಗೆ ಅವರ ತಂದೆ ತಾಯಿ ಒಂದೇ ತೆರನಾದ ಹೆಸರು ನೀಡಿದರೆ ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡುವುದು ಹೇಗೆ? ಉದಾಹರಣೆಗೆ ರಾಹುಲ್ ಗಾಂಧಿ ಮತ್ತು ಲಾಲೂ ಪ್ರಸಾದ್ ಯಾದವ್ ಎಂದು ಯಾರಾದರೂ ಹೆಸರು ಹೊಂದಿದ್ದರೆ ನಿರಾಕರಿಸಲು ಸಾಧ್ಯವೇ?" ಎಂದು ನ್ಯಾಯಾಲಯ ಹೇಳಿದೆ.
ಒಂದೇ ಹೆಸರಿನ, ನಕಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಮೂಲಕ ಮತದಾರರಲ್ಲಿ ಗೊಂದಲ ಸೃಷ್ಟಿಸುವುದು ಹಳೆಯ ಟ್ರಿಕ್ ಆಗಿದ್ದು, ಅದನ್ನು ನಿರ್ಬಂಧಿಸಬೇಕು ಎಂದು ಸಬು ಸ್ಟೀಫನ್ ಅವರು ವಕೀಲ ವಿ ಜೆ ಬಿಜು ಅರ್ಜಿ ಸಲ್ಲಿಸಿದ್ದರು. ಇದನ್ನು ಅವರ ವಕೀಲರು ಹಿಂಪಡೆದರು.