ಖಲಿಸ್ತಾನಿ ಪ್ರತ್ಯೇಕತಾವಾದಿ ಮತ್ತು ಅಮೆರಿಕ-ಕೆನಡಾ ಪ್ರಜೆ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಪ್ರಸ್ತುತ ಜೆಕ್ ಗಣರಾಜ್ಯದಲ್ಲಿ ಬಂಧನದಲ್ಲಿರುವ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಅವರ ಕುಟುಂಬ ಸದಸ್ಯರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
ಇದು ಅಂತಾರಾಷ್ಟ್ರೀಯ ಕಾನೂನನ್ನು ಒಳಗೊಂಡ ಸೂಕ್ಷ್ಮ ಪ್ರಕರಣವಾಗಿರುವುದರಿಂದ, ಮನವಿಯನ್ನು ತನಗೆ ಸಲ್ಲಿಸಿದ ಪತ್ರ ಎಂದು ಪರಿಗಣಿಸಿ ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ತಿಳಿಸಿದೆ.
ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಆರ್ಯಮಾ ಸುಂದರಂ ಮತ್ತು ವಕೀಲೆ ರೋಹಿಣಿ ಮೂಸಾ ಹಾಜರಾಗಿದ್ದರು.
"ಭಾರತೀಯ ಪ್ರಜೆಯೊಬ್ಬರು ವಿದೇಶಿ ನ್ಯಾಯಾಲಯದಲ್ಲಿ ತನ್ನನ್ನು ಸಮರ್ಪಕವಾಗಿ ಸಮರ್ಥಿಸಿಕೊಳ್ಳಲು ಮತ್ತು ತನ್ನ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಭಾರತ ಸರ್ಕಾರ ಅಗತ್ಯ ಸಹಾಯ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ" ಎಂಬುದಾಗಿ ವಿಚಾರಣೆಯ ಕೊನೆಗೆ ವಕೀಲೆ ರೋಹಿಣಿ ಹೇಳಿದರು.
ಅಮೆರಿಕದಲ್ಲಿ ಪನ್ನುನ್ ಅವರನ್ನು ಕೊಲ್ಲುವ ವಿಫಲ ಯತ್ನ ನಡೆದಿತ್ತು. ಆಗ ಗುಪ್ತಾ ಭಾರತದ ಸರ್ಕಾರಿ ನೌಕರನೊಂದಿಗೆ ಶಾಮೀಲಾಗಿದ್ದರು ಎಂದು ಅಮೆರಿಕ ವಕೀಲರು ಆರೋಪಿಸಿದ್ದರು. ಪನ್ನುನ್ ಅವರು ಅಮೆರಿಕ ಮತ್ತು ಕೆನಡಾದ ದ್ವಿಪೌರತ್ವ ಪಡೆದಿದ್ದಾರೆ.
ಅಮೆರಿಕದ ಆದೇಶದ ಮೇರೆಗೆ ಗುಪ್ತಾ ಅವರನ್ನು ಬಂಧಿಸಲಾಗಿದೆ ಎಂದು ಜೆಕ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ತಮ್ಮನ್ನು ಸೆರೆಯಲ್ಲಿಟ್ಟಿರುವ ಜೆಕ್ ಗಣರಾಜ್ಯದ ನ್ಯಾಯಾಲಯವನ್ನೇ ಗುಪ್ತಾ ಸಂಪರ್ಕಿಸಬೇಕಾಗುತ್ತದೆ ಎಂದು ಕಳೆದ ವರ್ಷ ಡಿಸೆಂಬರ್ 15ರಂದು ಪ್ರಕರಣ ಮೊದಲ ಬಾರಿಗೆ ವಿಚಾರಣೆಗೆ ಬಂದಾಗ ಸರ್ವೋಚ್ಚ ನ್ಯಾಯಾಲಯ ಮೇಲ್ನೋಟದ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಜೂನ್ 30ರಂದು ಪ್ರೇಗ್ ವಿಮಾನ ನಿಲ್ದಾಣದಲ್ಲಿ ತನ್ನನ್ನು ಅಕ್ರಮವಾಗಿ ಬಂಧಿಸಲಾಗಿತ್ತು. ಆಗ ತಾನು ವಿಶ್ರಾಂತಿ ಪಡೆಯಲು ಮತ್ತು ವ್ಯವಹಾರ ಶೋಧನೆಗಾಗಿ ಪ್ರವಾಸ ಕೈಗೊಂಡಿದ್ದಾಗಿ ಗುಪ್ತಾ ಮನವಿಯಲ್ಲಿ ಹೇಳಿಕೊಂಡಿದ್ದಾರೆ. ವಲಸೆ ಕೌಂಟರ್ ದಾಟಿದ ನಂತರ ತಮ್ಮನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಿದ ರೀತಿಯನ್ನು ಮನವಿಯಲ್ಲಿ ವಿವರವಾಗಿ ತಿಳಿಸಲಾಗಿದೆ.
ತಮ್ಮ ಬಂಧನ ಕಾನೂನುಬಾಹಿರ ಮತ್ತು ಅಂತರರಾಷ್ಟ್ರೀಯ ಮತ್ತು ಸ್ಥಳೀಯ ಕಾನೂನಿನ ತತ್ವಗಳಿಗೆ ವಿರುದ್ಧವಾಗಿದೆ. ನಿಷ್ಠಾವಂತ ಹಿಂದೂ ಮತ್ತು ಸಸ್ಯಾಹಾರಿಯಾದ ತನ್ನನ್ನು ಜೆಕ್ ಬಂಧಿಸಿದ್ದಾಗ ಗೋಮಾಂಸ ಮತ್ತು ಹಂದಿಮಾಂಸವನ್ನು ಬಲವಂತವಾಗಿ ನೀಡಲಾಗುತ್ತಿತ್ತು. ಇದು ತನ್ನ ಧಾರ್ಮಿಕ ನಂಬಿಕೆಗಳ ನೇರ ಉಲ್ಲಂಘನೆಯಾಗಿದೆ ಎಂದು ಅವರು ವಾದಿಸಿದ್ದಾರೆ.
ಅಲ್ಲದೆ ರಾಯಭಾರಿ ಕಚೇರಿ ಸಂಪರ್ಕಿಸುವುದನ್ನು ತಮಗೆ ನಿರಾಕರಿಸಲಾಯಿತು. ಭಾರತದಲ್ಲಿನ ಅವರ ಕುಟುಂಬವನ್ನು ಸಂಪರ್ಕಿಸುವ ಹಕ್ಕು ಮತ್ತು ವಕೀಲರನ್ನು ಪಡೆಯುವ ಸಾತಂತ್ರ್ಯವನ್ನು ಅಲ್ಲಗಳೆಯಲಾಯಿತು ಎಂದು ಅವರು ದೂರಿದ್ದಾರೆ.