ಭಾರತೀಯ ವಕೀಲರ ಪರಿಷತ್ (ಬಿಸಿಐ) ಹಾಗೂ ರಾಜ್ಯ ವಕೀಲರ ಪರಿಷತ್ತುಗಳಲ್ಲಿ ಮಹಿಳಾ ವಕೀಲರಿಗೆ ಶೇ. 30 ಮೀಸಲಾತಿ ಕಲ್ಪಿಸಲು ಕೋರಿ ಇಬ್ಬರು ಮಹಿಳಾ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ [ಪೂಜಾ ಗುಪ್ತ ವರ್ಸಸ್ ಭಾರತೀಯ ವಕೀಲರ ಪರಿಷತ್ತು].
ಪದಾಧಿಕಾರಿಗಳ ಆಯ್ಕೆ ಸಂಬಂಧಿಸಿದಂತೆ ಬಿಸಿಐ ಜನವರಿ 14ರಂದು ಹೊರಡಿಸಿದ್ದ ಅಧಿಸೂಚನೆಯನ್ನು ರದ್ದಪಡಿಸಲು ಕೋರಿ ವಕೀಲರಾದ ಹಿಮಾಚಲ ಪ್ರದೇಶ ಮೂಲದ ಪೂಜಾ ಗುಪ್ತಾ ಹಾಗೂ ಕೇರಳ ಮೂಲದ ಜೂಲಿ ಜಾರ್ಜ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಬಿಸಿಐ ಪದಾಧಿಕಾರಿಗಳಿಗೆ ನಡೆಸುತ್ತಿರುವ ಚುನಾವಣೆಯಲ್ಲಿ ಮಹಿಳೆಯರಿಗೆ ಯಾವುದೇ ಮೀಸಲಾತಿಯನ್ನು ಕಲ್ಪಿಸಲಾಗಿಲ್ಲ, ಇದು ಹಿಂದಿನಿಂದಲೂ ಹೀಗೆ ಮುಂದುವರೆದಿದ್ದು ಸಂವಿಧಾನದ ವಿಧಿಗಳಾದ 14, 19(1)g ಮತ್ತು 21ರ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ತಮ್ಮ ಮನವಿಯಲ್ಲಿ ಅಕ್ಷೇಪಿಸಿದ್ದರು. ಅಲ್ಲದೆ, ಅವಧಿಪೂರ್ವವಾಗಿ ಚುನಾವಣೆಯನ್ನು ನಡೆಸುತ್ತಿರುವ ಔಚಿತ್ಯದ ಬಗ್ಗೆಯೂ ಪ್ರಶ್ನಿಸಿದ್ದರು.
ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರರಾವ್ ಹಾಗೂ ಅಭಯ್ ಎಸ್ ಓಕಾ ಅವರನ್ನೊಳಗೊಂಡ ಪೀಠವು, ಸಂವಿಧಾನದ 32ನೇ ವಿಧಿಯಡಿ ಸಲ್ಲಿಸಲಾಗಿರುವ ಈ ಮನವಿಯನ್ನು ನಾವು ಪರುಸ್ಕರಿಸುತ್ತಿಲ್ಲ. ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ಆದೇಶಿಸಿತು. ಆದಾಗ್ಯೂ, ತಮ್ಮ ದೂರುಗಳನ್ನು ಪರಿಹರಿಸಿಕೊಳ್ಳಲು ಅರ್ಜಿದಾರರು ಭಾರತೀಯ ವಕೀಲರ ಪರಿಷತ್ತಿನಲ್ಲಿ ಮನವಿ ಸಲ್ಲಿಸಲು ಸ್ವತಂತ್ರರು ಎಂದಿತು.