ದೆಹಲಿ ಅಬಕಾರಿ ನೀತಿ ಪ್ರಕರಣ: ಮನೀಶ್ ಸಿಸೋಡಿಯಾಗೆ ಜಾಮೀನು ನೀಡಲು ಸುಪ್ರೀಂ ನಕಾರ

ಜುಲೈ 3ರೊಳಗೆ ಈ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲಾಗುವುದು ಎಂಬ ಜಾರಿ ನಿರ್ದೇಶನಾಲಯದ ಹೇಳಿಕೆಯನ್ನು ಸುಪ್ರೀಂ ಕೋರ್ಟ್‌ ರಜಾಕಾಲೀನ ಪೀಠ ದಾಖಲಿಸಿಕೊಂಡಿತು.
Manish Sisodia and Supreme Court
Manish Sisodia and Supreme Court

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ [ಮನೀಶ್ ಸಿಸೋಡಿಯಾ ವಿರುದ್ಧ ಜಾರಿ ನಿರ್ದೇಶನಾಲಯ].

ಜುಲೈ 3ರೊಳಗೆ ಈ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲಾಗುವುದು ಎಂಬ ಜಾರಿ ನಿರ್ದೇಶನಾಲಯದ ಹೇಳಿಕೆಯನ್ನು ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ರಜಾಕಾಲೀನ ಪೀಠ ಇದೇ ವೇಳೆ ದಾಖಲಿಸಿಕೊಂಡಿತು.

ಪ್ರಕರಣದ ಅರ್ಹತೆಯ ಬಗ್ಗೆ ತಾನು ಏನನ್ನೂ ಹೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ಸಿಸೋಡಿಯಾಗೆ ಸ್ವಾತಂತ್ರ್ಯವಿದೆ ಎಂದಿತು.

ಆದರೂ, ಹೊಸದಾಗಿ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್‌ಗೆ ಅಥವಾ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕೆ ಎಂಬ ಕುರಿತು ಪೀಠ ಸ್ಪಷ್ಟನೆ ನೀಡಿಲ್ಲ.

"ಸುಪ್ರೀಂ ಕೋರ್ಟ್‌ ಮುಂದೆ ಬರಲು ಸ್ವಾತಂತ್ರ್ಯವಿದೆಯೇ?" ಎಂದು ಸಿಸೋಡಿಯಾ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಈ ವೇಳೆ ಪ್ರಶ್ನಿಸಿದರು. ಮುಂದುವರಿದು, "ಸಿಸೋಡಿಯಾ 15 ತಿಂಗಳುಗಳ ಕಾಲ ಜೈಲಿನಲ್ಲಿ ಇದ್ದಾರೆ. ವಿಚಾರಣಾ ನ್ಯಾಯಾಲಯಗಳು ರಾಜಕೀಯಸೂಕ್ಷ್ಮ ವಿಷಯಗಳನ್ನು (ಕಾಲಮಿತಿಯೊಳಗೆ) ನಿಭಾಯಿಸುವುದಿಲ್ಲ" ಎಂದು ವಾದಿಸಿದರು.  ಆದರೆ, ನ್ಯಾಯಾಲಯ ಈ ಬಗ್ಗೆ ಯಾವುದೇ ವಿವರಣೆ ನೀಡಲಿಲ್ಲ.

ಸಿಸೋಡಿಯಾ ಫೆಬ್ರವರಿ 26, 2023 ರಿಂದ ಬಂಧನದಲ್ಲಿದ್ದು ದೆಹಲಿ ಹೈಕೋರ್ಟ್‌ ಈಚೆಗೆ ತಮಗೆ ಜಾಮೀನು ನಿರಾಕರಿಸಿ ನೀಡಿದ್ದ ಅರ್ಜಿ ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

Kannada Bar & Bench
kannada.barandbench.com