ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಎಂಎಂ ಸುಂದರೇಶ್ ಮತ್ತು ಬೇಲಾ ಎಂ ತ್ರಿವೇದಿ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ಸೊರೇನ್ ಅವರಿಗೆ ಸುಪ್ರೀಂ ಕೋರ್ಟ್ ಅನ್ನು ನೇರವಾಗಿ ಸಂಪರ್ಕಿಸುವ ಬದಲು ಮೊದಲು ಜಾರ್ಖಂಡ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿತು.
"ಅವರು (ಸೊರೇನ್) ಹೈಕೋರ್ಟ್ ಅನ್ನು ಏಕೆ ಸಂಪರ್ಕಿಸಿಲ್ಲ. ಇಲ್ಲಿ (ಸುಪ್ರೀಂ ಕೋರ್ಟ್) ನೇರವಾಗಿ ಏಕೆ ಬರಲಾಗಿದೆ?" ಎಂದು ನ್ಯಾಯಮೂರ್ತಿ ಖನ್ನಾ ಪ್ರಶ್ನಿಸಿದರು.
ಇದಕ್ಕೆ ಸೊರೇನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು "ನಾವು ಮುಖ್ಯಮಂತ್ರಿ ಪ್ರಕರಣದಲ್ಲಿ ವ್ಯವಹರಿಸುತ್ತಿದ್ದೇವೆ" ಎಂದು ಅವರು ಹೇಳಿದರು.
ಆಗ ನ್ಯಾ. ಖನ್ನಾ ಅವರು "ನ್ಯಾಯಾಲಯಗಳು ಎಲ್ಲರಿಗೂ ಮುಕ್ತವಾಗಿವೆ. ನಾವು ಒಬ್ಬ ವ್ಯಕ್ತಿಗೆ ಅವಕಾಶ ನೀಡಿದರೆ, ಎಲ್ಲರಿಗೂ ಅವಕಾಶ ನೀಡಬೇಕಾಗುತ್ತದೆ" ಎಂದು ಹೇಳಿದರು.
ನಂತರ ನ್ಯಾಯಾಲಯವು ಮನವಿಯನ್ನು ಸ್ವೀಕರಿಸಲು ಒಲವು ಹೊಂದಿಲ್ಲ ಮತ್ತು ಸೊರೇನ್ ಮೊದಲು ಹೈಕೋರ್ಟ್‌ಗೆ ಹೋಗಬೇಕು ಎಂದು ಸ್ಪಷ್ಟಪಡಿಸಿತು. "ದಯವಿಟ್ಟು ಹೈಕೋರ್ಟ್‌ಗೆ ಹೋಗಿ, ನಾವು ಮಧ್ಯಪ್ರವೇಶಿಸುವುದಿಲ್ಲ" ಎಂದು ಪೀಠ ಹೇಳಿತು.
ಸೊರೇನ್ ಆರಂಭದಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು ಆದರೆ, ನಂತರ ಅದನ್ನು ಹಿಂತೆಗೆದುಕೊಂಡು ಸುಪ್ರೀಂ ಕೋರ್ಟ್ ಕದತಟ್ಟಿದ್ದರು.
"ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಪ್ರಸ್ತುತ ಅರ್ಜಿಯನ್ನು ಪರಿಗಣಿಸಲು ನಾವು ಒಲವು ಹೊಂದಿಲ್ಲ. 226ನೇ ವಿಧಿ ಅಡಿಯಲ್ಲಿ ವ್ಯಾಪ್ತಿಯ ಹೈಕೋರ್ಟ್ ಸಂಪರ್ಕಿಸುವ ಅವಕಾಶ ಮುಕ್ತಗೊಳಿಸಲಾಗಿದೆ. ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಮತ್ತು ಅದು ಇನ್ನೂ ಬಾಕಿ ಇದೆ ಎಂದು ನಮಗೆ ತಿಳಿಸಲಾಗಿದೆ. ನಂತರ 226ನೇ ವಿಧಿ ಅಡಿಯಲ್ಲಿ ಮತ್ತೊಂದು ಅರ್ಜಿಯನ್ನು ಸಲ್ಲಿಸಲಾಗಿದೆ, ನಂತರ ಅದನ್ನು ಹಿಂಪಡೆಯಲಾಗಿದೆ. ಅರ್ಜಿದಾರರು ಅದನ್ನು ತಿದ್ದುಪಡಿ ಮಾಡಲು ಮುಕ್ತವಾಗಿದ್ದಾರೆ" ಎಂದು ಸುಪ್ರೀಂ ಕೋರ್ಟ್ ಹೇಳಿತು.
ಜಾರಿ ನಿರ್ದೇಶನಾಲಯದ ಬಂಧನದ ವಿರುದ್ಧ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಸಲ್ಲಿಸಿದ್ದ ಮನವಿಯನ್ನು ಪೀಠ ವಿಚಾರಣೆ ನಡೆಸಿತು.
ಜಾರ್ಖಂಡ್‌ನಲ್ಲಿ ಭೂಮಿಯ ಮಾಲೀಕತ್ವವನ್ನು ಅಕ್ರಮವಾಗಿ ಬದಲಾಯಿಸುವ ಬೃಹತ್ ದಂಧೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸೊರೇನ್ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪ ಮಾಡಿದೆ. ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್ಎ) ಅಡಿಯಲ್ಲಿ ಜನವರಿ 20ರಂದು ಸೊರೇನ್ ಅವರ ಹೇಳಿಕೆಯನ್ನು ಜಾರಿ ನಿರ್ದೇಶನಾಲಯ ದಾಖಲಿಸಿದೆ. ಈ ಪ್ರಕರಣದಲ್ಲಿ 2011ರ ಬ್ಯಾಚ್ ಐಎಎಸ್ ಅಧಿಕಾರಿ, ರಾಂಚಿ ಜಿಲ್ಲಾಧಿಕಾರಿ ಛಾವಿ ರಂಜನ್ ಸೇರಿ ಒಂದು ಡಜನಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.
ಸೊರೇನ್, ರಂಜನ್, ಇತರ ಒಂಭತ್ತು ಮಂದಿ ಮತ್ತು ಮೂರು ಕಂಪೆನಿಗಳ ವಿರುದ್ಧ ಪಿಎಂಎಲ್ಎ ಸೆಕ್ಷನ್ 45ರ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಜೂನ್ 23, 2016ರಂದು ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ. ಆರೋಪಿಗಳು ಜೈಲಿನಲ್ಲಿ ಕೊಳೆಯುತ್ತಿದ್ದರೆ, ಸೊರೆನ್ ಅಕ್ರಮ ಹಣ ವರ್ಗಾವಣೆ ಆರೋಪಗಳನ್ನು ನಿರಾಕರಿಸಿದ್ದರು. ಬಂಧನಕ್ಕೂ ಮುನ್ನ ಬಿಡುಗಡೆ ಮಾಡಿದ ವೀಡಿಯೊದಲ್ಲಿ, ಪಿತೂರಿಯ ಭಾಗವಾಗಿ "ನಕಲಿ ದಾಖಲೆಗಳ" ಆಧಾರದ ಮೇಲೆ ತನ್ನನ್ನು ಬಂಧಿಸಲಾಗಿದೆ ಎಂದು ಸೊರೆನ್ ಹೇಳಿದ್ದಾರೆ.
ಜಾರಿ ನಿರ್ದೇಶನಾಲಯದ ಬಂಧನದ ಹಿನ್ನೆಲೆಯಲ್ಲಿ ಸೊರೇನ್ ಜನವರಿ 31ರಂದು ತಮ್ಮ ಸಿಎಂ ಹುದ್ದೆ ತ್ಯಜಿಸಿದ್ದರು. ಈ ಪ್ರಕರಣದಲ್ಲಿ ಇದುವರೆಗೆ ತನಗೆ ನೀಡಲಾದ ಎಲ್ಲಾ ಸಮನ್ಸ್‌ಗಳನ್ನು ತಮ್ಮ ಮನವಿಯಲ್ಲಿ ಪ್ರಶ್ನಿಸಿರುವ ಸೊರೇನ್ ಅವರು ದುರುದ್ದೇಶ ಕ್ರಮಕೈಗೊಳ್ಳದಂತೆ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಿದ್ದರು.
ತನ್ನ ವಿರುದ್ಧದ ತನಿಖೆಯ ಯಾವುದೇ ವಿವರಗಳನ್ನು ಸಮನ್ಸ್ ಹೊಂದಿಲ್ಲ ಮತ್ತು ತೆರಿಗೆ ಪಾವತಿಯಲ್ಲಿ ಸರಿಯಾಗಿ ಘೋಷಿಸಿರುವುದ್ನು ಆಧರಿಸಿ ವೈಯಕ್ತಿಕ ಆಸ್ತಿಗಳನ್ನು ಖರೀದಿಸಲಾಗಿದೆ ಎಂದು ಸೊರೇನ್ ಒತ್ತಿ ಹೇಳಿದ್ದಾರೆ.