ಹೇಮಂತ್ ಸೊರೇನ್ ಬಳಿ 8.5 ಎಕರೆ ಅಕ್ರಮ ಆಸ್ತಿ; 36 ಲಕ್ಷ ನಗದು ಪತ್ತೆ: ರಾಂಚಿ ನ್ಯಾಯಾಲಯಕ್ಕೆ ಇ ಡಿ ಮಾಹಿತಿ

ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿರುವಂತೆಯೇ, 8.5 ಎಕರೆ ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಅವರ ವಿಚಾರಣೆ ನಡೆಸಲು ಇ ಡಿ 10 ದಿನಗಳ ಕಾಲಾವಕಾಶ ಕೋರಿದೆ.
ಹೇಮಂತ್ ಸೊರೆನ್ ಮತ್ತು ಇಡಿ
ಹೇಮಂತ್ ಸೊರೆನ್ ಮತ್ತು ಇಡಿಹೇಮಂತ್ ಸೊರೆನ್ (ಫೇಸ್‌ಬುಕ್‌)

ಅಕ್ರಮ ಆಸ್ತಿಯ ಸ್ವಾಧೀನ, ಒಡೆತನ ಹಾಗೂ ಅನುಭೋಗದಲ್ಲಿ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ನೇರವಾಗಿ ಭಾಗಿಯಾಗಿದ್ದಾರೆ ಎಂದು ರಾಂಚಿಯ ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದ ರಿಮಾಂಡ್ ಅರ್ಜಿಯಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ಹೇಳಿದೆ.

ಹಗರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ರಾಂಚಿಯ ಬರ್ಗೇನ್‌ ಕಂದಾಯ ಸಬ್ ಇನ್‌ಸ್ಪೆಕ್ಟರ್‌ ಆಗಿದ್ದ ಭಾನು ಪ್ರತಾಪ್ ಪ್ರಸಾದ್ ಅವರು ಅಕ್ರಮವಾಗಿ ಆಸ್ತಿ ಸ್ವಾಧೀನಪಡಿಸಿಕೊಳ್ಳಲು ಉಳಿದ ಆರೋಪಿಗಳೊಂದಿಗೆ ಸಕ್ರಿಯವಾಗಿ ಪಿತೂರಿ ನಡೆಸಿದ್ದಾರೆ ಎಂದು ಇ ಡಿ ವಿವರಿಸಿದೆ.

ಫೋನ್‌ ಕರೆ ಮತ್ತು ಸಂದೇಶಗಳ ಬಗ್ಗೆ ತನಿಖೆ ನಡೆಸಿದಾಗ ಪ್ರಸಾದ್‌ ಅವರು ಸೊರೇನ್‌ ಅವರೊಂದಿಗೆ ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ ಎಂದು ಇಡಿ ತಿಳಿಸಿದೆ.

ಆರೋಪಗಳನ್ನು ನಿರಾಕರಿಸಿರುವ ಹೇಮಂತ್‌ ಸೊರೇನ್‌ ಅವರು ಬರ್ಗೇನ್‌ನಲ್ಲಿರುವ ಭೂಮಿ ತನ್ನದು ಎಂದು ಸುಳ್ಳೇ ಆರೋಪಿಸಲಾಗಿದೆ ಎಂದಿದ್ದಾರೆ. ಈ ಜಮೀನು 'ಭುಯಿನ್ಹಾರಿ ಭೂಮಿ'ಯಾಗಿದ್ದು ಅದನ್ನು ಯಾವುದೇ ರೀತಿಯಲ್ಲಿ ಮಾರಾಟ ಮಾಡಲು ಅಥವಾ ಪರಭಾರೆ ಮಾಡಲು ಸಾಧ್ಯವಿಲ್ಲ ಮತ್ತು ತಾನಾಗಲೀ ತನ್ನ ಕುಟುಂಬವಾಗಲೀ ಈ ಜಮೀನನ್ನು ಪಡೆದಿಲ್ಲ ಎಂದಿದ್ದಾರೆ.

ಆದರೆ ಅಕ್ರಮ ಆಸ್ತಿಯ ಸ್ವಾಧೀನ, ಒಡೆತನ ಹಾಗೂ ಅನುಭೋಗದಲ್ಲಿ ಹೇಮಂತ್‌ ನೇರವಾಗಿ ಭಾಗಿಯಾಗಿದ್ದಾರೆ ಎಂದು ಇ ಡಿ ಆರೋಪಿಸಿದೆ. ಮೂಲ ದಾಖಲೆಗಳನ್ನು ಮರೆಮಾಚುವುದಕ್ಕಾಗಿ ಭಾನು ಪ್ರತಾಪ್ ಪ್ರಸಾದ್ ಅವರೊಂದಿಗೆ ಹೇಮಂತ್‌ ಉದ್ದೇಶಪೂರ್ವಕವಾಗಿ ಶಾಮೀಲಾಗಿದ್ದಾರೆ. ಹೇಮಂತ್‌ ಒಡೆತನದ ಆಸ್ತಿಗಳ ದಾಖಲೆಗಳ ಉಲ್ಲೇಖವಿರುವ ರಿಜಿಸ್ಟರ್‌ಗಳನ್ನು ಪ್ರಸಾದ್ ಮರೆಮಾಚಿದ್ದಾರೆ ಎಂದು ಇ ಡಿ ನುಡಿದಿದೆ.

ಸೊರೇನ್‌ ಅವರ ದೆಹಲಿ ನಿವಾಸದಲ್ಲಿ ನಡೆಸಿದ ಶೋಧದಲ್ಲಿ, ತನಿಖೆಗೆ ಸಂಬಂಧಿಸಿದ ಇತರ ದಾಖಲೆಗಳೊಂದಿಗೆ 36 ಲಕ್ಷ ರೂಪಾಯಿಗಿಂತ ಹೆಚ್ಚು ಹಣ ವಶಪಡಿಸಿಕೊಳ್ಳಲಾಗಿದೆ. ಹೇಮಂತ್‌ ಅವರು ಹಣ ಅಕ್ರಮ ವರ್ಗಾವಣೆ ಕೃತ್ಯದಲ್ಲಿ ತಪ್ಪಿತಸ್ಥರು ಎಂದು ನಂಬಲು ಸಾಕಷ್ಟು ಕಾರಣಗಳಿವೆ ಎಂದು ಅದು ಸ್ಥಳೀಯ ನ್ಯಾಯಾಲಯಕ್ಕೆ ವಿವರಿಸಿದೆ. ಹಣ ಮತ್ತು ಆಸ್ತಿ ಮೂಲದ ತನಿಖೆಗಾಗಿ ಹೇಮಂತ್‌ ಅವರನ್ನು 10 ದಿನಗಳ ಕಾಲ ತನ್ನ ವಶಕ್ಕೆ ನೀಡಬೇಕು ಎಂದು ಇ ಡಿ ತಿಳಿಸಿದೆ.

ಮತ್ತೊಂದೆಡೆ ಬಂಧನ ಪ್ರಶ್ನಿಸಿ ಸೊರೇನ್‌ ಅವರಿಗೆ ಪರಿಹಾರ ನೀಡಲು ಸುಪ್ರೀಂ ಕೋರ್ಟ್‌ ಶುಕ್ರವಾರ ನಿರಾಕರಿಸಿತ್ತು.

Related Stories

No stories found.
Kannada Bar & Bench
kannada.barandbench.com