ಅಸಮ್ಮತಿಯ ಅಸ್ವಾಭಾವಿಕ ಲೈಂಗಿಕ ಕೃತ್ಯಗಳಿಗೆ (ಸೊಡೊಮಿ) ಶಿಕ್ಷೆ ವಿಧಿಸುವ ನಿಬಂಧನೆಯನ್ನು ಭಾರತೀಯ ನ್ಯಾಯ ಸಂಹಿತೆಯಿಂದ (ಬಿಎನ್ಎಸ್) ಹೊರಗಿಟ್ಟಿರುವುದನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಇದು ಸಂಸತ್ತಿನ ವ್ಯಾಪ್ತಿಗೆ ಬರುವ ವಿಚಾರವಾಗಿದ್ದು ಬಿಎನ್‌ಎಸ್ ಅಡಿ ನಿರ್ದಿಷ್ಟ ಕಾಯಿದೆಯಡಿ ಅಪರಾಧವನ್ನು ತರಬೇಕೆಂದು ನ್ಯಾಯಾಲಯ ನಿರ್ದೇಶಿಸಲಾಗದು ಎಂದು ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ತಿಳಿಸಿತು.
ವಿಚಾರಣೆ ವೇಳೆ ಸಿಜೆಐ ಡಿ ವೈ ಚಂದ್ರಚೂಡ್ ಅವರು, "ಈ ವಿಚಾರ ಹೊಸ ಕಾನೂನಿನಲ್ಲಿ ಇಲ್ಲ... ಆದರೆ, ನಾವು (ನ್ಯಾಯಾಲಯ) ಹೊಸದಾಗಿ ಅಪರಾಧವನ್ನು (ಕಾನೂನಿನಡಿ) ಸೃಷ್ಟಿಸಲಾಗದು. ಅದು ಸಂಸತ್ತಿನ ವ್ಯಾಪ್ತಿಗೆ ಬರುವ ವಿಷಯ. ಒಂದೊಮ್ಮೆ ಅರ್ಜಿದಾರರು ಕಾನೂನಿನಲ್ಲಿ ಈ ಕುರಿತು ನಿರ್ವಾತವಿದೆ ಎಂದು ಭಾವಿಸಿದರೆ ಅವರು ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು," ಎಂದು ಮೌಖಿಕವಾಗಿ ಹೇಳಿದರು.
ಆದರೆ ಬಿಎನ್ಎಸ್‌ನಲ್ಲಿ ಲೋಪವಿದ್ದರೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಅರ್ಜಿದಾರರಿಗೆ ನ್ಯಾಯಾಲಯ ಸ್ವಾತಂತ್ರ್ಯ ಕಲ್ಪಿಸಿತು.
ಈಗ ರದ್ದಗಾಗಿರುವ ಐಪಿಸಿ ಸೆಕ್ಷನ್ 377ರ ಪ್ರಕಾರ ಪ್ರಕೃತಿಯ ನಿಯಮಕ್ಕೆ ವಿರುದ್ಧವಾಗಿ ಯಾವುದೇ ಪುರುಷ, ಸ್ತ್ರೀ ಅಥವಾ ಪ್ರಾಣಿಯೊಂದಿಗೆ ಸ್ವಇಚ್ಛೆಯಿಂದ ದೈಹಿಕ ಸಂಭೋಗ ನಡೆಸುವ ಯಾವುದೇ ವ್ಯಕ್ತಿಗೆ ಜೀವಾವಧಿ ಶಿಕ್ಷೆ ಇಲ್ಲವೇ ಹತ್ತು ವರ್ಷಗಳ ಸಜೆ ಅಥವಾ ಎರಡರಲ್ಲಿ ಒಂದು ಬಗೆಯ ಸೆರೆವಾಸ ವಿಧಿಸಲಾಗುತ್ತಿತ್ತು. ಅಂತಹ ವ್ಯಕ್ತಿಗೆ ಜುಲ್ಮಾನೆಯನ್ನು ಸಹ ವಿಧಿಸಲಾಗುತ್ತಿತ್ತು.
ನವತೇಜ್ ಸಿಂಗ್ ಜೋಹರ್ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಸೆಕ್ಷನ್ 377 ಐಪಿಸಿ ಅಡಿಯಲ್ಲಿ ಸಮ್ಮತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲ ಎಂದು ಹೇಳಿತ್ತು.
ಐಪಿಸಿ ಬದಲು ಕಳೆದ ಜುಲೈನಿಂದ ಬಿಎನ್‌ಎಸ್ ಜಾರಿಯಲ್ಲಿದ್ದು ಅದರಲ್ಲಿ ಅಸ್ವಾಭಾವಿಕ ಲೈಂಗಿಕ ಕೃತ್ಯಗಳಿಗೆ ಶಿಕ್ಷೆ ವಿಧಿಸುವ ನಿಬಂಧನೆ ಇಲ್ಲ.
ಪುರುಷ ಮತ್ತು ತೃತೀಯ ಲಿಂಗಿ ವ್ಯಕ್ತಿ ಅತ್ಯಾಚಾರಕ್ಕೀಡಾದರೂ ಆರೋಪಿಗಳನ್ನು ಶಿಕ್ಷಿಸಲು ಐಪಿಸಿ ಸೆಕ್ಷನ್ 377ಕ್ಕೆ ಸಮಾನವಾದ ಸೆಕ್ಷನ್ ಬಿಎನ್‌ಎಸ್‌ನಲ್ಲಿ ಇಲ್ಲ ಎಂದು ತಜ್ಞರು ಈಗಾಗಲೇ ಟೀಕಿಸಿದ್ದಾರೆ.
ಇದೇ ಬಗೆಯ ಮನವಿಯನ್ನು ಆಗಸ್ಟ್ 28 ರಂದು ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಅಸ್ವಾಭಾವಿಕ ಲೈಂಗಿಕ ಕೃತ್ಯಗಳ ಶಿಕ್ಷೆಯ ವಿಚಾರವಾಗಿ ಶೀಘ್ರವೇ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಅಪರಾಧ ಕುರಿತಂತೆ ನಿರ್ವಾತದ ಸ್ಥಿತಿ ಇರುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ಹೇಳಿತ್ತು.