Supreme Court, Divya Spandana, Vishweshwar Bhatt & Asianet News
Supreme Court, Divya Spandana, Vishweshwar Bhatt & Asianet News facebook

ಸುವರ್ಣ ಸುದ್ದಿ ವಾಹಿನಿ, ಪತ್ರಕರ್ತ ವಿಶ್ವೇಶ್ವರ ಭಟ್‌ ವಿರುದ್ಧದ ಮಾನಹಾನಿ ಪ್ರಕರಣ ರದ್ದುಪಡಿಸಲು ಸುಪ್ರೀಂ ನಕಾರ

ರಮ್ಯಾ ಅಲಿಯಾಸ್‌ ದಿವ್ಯಾ ಸ್ಪಂದನಾ ಅವರ ಚಿತ್ರ ಸಮೇತ ಸುದ್ದಿ ಪ್ರಸಾರ ಮಾಡಲಾಗಿರುವುದರಿಂದ ದೂರು ವಜಾ ಮಾಡಲಾಗದು ಎಂದು ನ್ಯಾಯಾಲಯ ಹೇಳಿದೆ.
Published on

ಕ್ರಿಕೆಟ್‌ ಬೆಟ್ಟಿಂಗ್‌ ಮತ್ತು ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಸುದ್ದಿ ಬಿತ್ತರಿಸುವ ಮೂಲಕ ತನ್ನ ವರ್ಚಸ್ಸಿಗೆ ಹಾನಿ ಮಾಡಲಾಗಿದೆ ಎಂದು ನಟಿ, ರಾಜಕಾರಣಿ ದಿವ್ಯ ಸ್ಪಂದನಾ ಅಲಿಯಾಸ್‌ ರಮ್ಯಾ ಅವರು ಕನ್ನಡದ ಏಷ್ಯಾನೆಟ್‌ ಸುವರ್ಣ ಸುದ್ದಿ ವಾಹಿನಿ, ಅದರ ಮಾತೃ ಸಂಸ್ಥೆ ಹಾಗೂ ವಾಹಿನಿಯ ಮಾಜಿ ಸಂಪಾದಕ ವಿಶ್ವೇಶ್ವರ ಭಟ್‌ ವಿರುದ್ಧ ದಾಖಲಿಸಿದ್ದ ಮಾನಹಾನಿ ಪ್ರಕರಣ ರದ್ದುಪಡಿಸಿಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ರಮ್ಯಾ ಸಲ್ಲಿಸಿದ್ದ ಖಾಸಗಿ ದೂರಿನ ಸಂಜ್ಞೇಯ ಪರಿಗಣಿಸಿರುವ ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಏಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್‌ ಪ್ರೈ. ಲಿ., ಏಷ್ಯಾನೆಟ್‌ ಸುವರ್ಣಾ ನ್ಯೂಸ್‌ ಮತ್ತು ವಿಶೇಶ್ವರ ಭಟ್‌ ಅಲಿಯಾಸ್‌ ವಿ ಭಟ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರ ತ್ರಿಸದಸ್ಯ ಪೀಠ ನಡೆಸಿತು.

“ನೀವು ಪ್ರಸಾರ ಮಾಡಿರುವ ಸುದ್ದಿಯಲ್ಲಿ ಆಕೆಯ ವಿಡಿಯೋ ಮತ್ತು ಚಿತ್ರಗಳನ್ನು ಬಿತ್ತರಿಸಲಾಗಿದೆ. ಹೀಗಾಗಿ, ದೂರನ್ನು ವಜಾ ಮಾಡಲಾಗದು. ಧನ್ಯವಾದ, ನಾವು ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ” ಎಂದು ನ್ಯಾಯಾಲಯ ಹೇಳಿತು.

ಕಳೆದ ಮಾರ್ಚ್‌ನಲ್ಲಿ ಸುವರ್ಣಾ ಸುದ್ದಿ ವಾಹಿನಿ ಮತ್ತು ವಿಶ್ವೇಶ್ವರ್‌ ಭಟ್‌ ವಿರುದ್ಧ ಮಾನಹಾನಿ ಪ್ರಕರಣ ವಜಾ ಮಾಡಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

Also Read
ಏಷ್ಯಾನೆಟ್‌ ಸುವರ್ಣ, ವಿಶ್ವೇಶ್ವರ್‌ ಭಟ್‌ ವಿರುದ್ಧ ರಮ್ಯಾ ಹೂಡಿರುವ ಮಾನಹಾನಿ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಕಾರ

ಪ್ರಕರಣದ ಹಿನ್ನೆಲೆ: 2013ರ ಮೇ 31ರಂದು ಕನ್ನಡ ಸಿನಿಮಾ ನಟಿಯರು ಕ್ರಿಕೆಟ್‌ ಬೆಟ್ಟಿಂಗ್‌ ಮತ್ತು ಸ್ಪಾಟ್‌ ಫಿಕ್ಸಿಂಗ್‌ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಗಳು ಸುದ್ದಿ ಬಿತ್ತರಿಸಿದ್ದು, ಪದೇಪದೇ ತಮ್ಮ ಚಿತ್ರ ಮತ್ತು ವಿಡಿಯೊ ಪ್ರಸಾರ ಮಾಡಿದ್ದಾರೆ. ತಾನು ಹಗರಣದಲ್ಲಿ ಭಾಗಿಯಾಗಿದ್ದೇನೆ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ಆರೋಪಿಗಳ ನಡೆಯಿಂದ ತಮ್ಮ ಘನತೆಗೆ ಗಂಭೀರ ಹಾನಿಯಾಗಿದ್ದು, ಸುದ್ದಿಯ ಖಚಿತತೆಯ ಬಗ್ಗೆ ಚಿತ್ರರಂಗದ ಹಲವು ಪ್ರಶ್ನಿಸಿದ್ದರು ಎಂದು ದೂರಿದ್ದರು.

ಇದರ ಆಧಾರದಲ್ಲಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ರಮ್ಯಾ ಅವರು ಆರೋಪಿಗಳ ವಿರುದ್ಧ ಮಾನಹಾನಿಗೆ ಅನ್ವಯಿಸುವ ಐಪಿಸಿ ಸೆಕ್ಷನ್‌ 500ರ ಅಡಿ ಕ್ರಮಕೈಗೊಳ್ಳುವಂತೆ ಖಾಸಗಿ ದೂರು ದಾಖಲಿಸಿದ್ದರು. ರಮ್ಯಾ ಅವರ ಹೇಳಿಕೆ ದಾಖಲಿಸಿಕೊಂಡಿದ್ದ ವಿಚಾರಣಾಧೀನ ನ್ಯಾಯಾಲಯವು 2016ರ ಜೂನ್‌ 13ರಂದು ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡಿತ್ತು. 

Kannada Bar & Bench
kannada.barandbench.com