ಆಂಧ್ರಪ್ರದೇಶದಲ್ಲಿ ಅಂಚೆ ಮತಗಳ ಎಣಿಕೆಗೆ ಸಂಬಂಧಿಸಿದ ಹೊಸ ನಿಯಮಾವಳಿ ಜಾರಿ ಪ್ರಶ್ನಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಯಾವುದೇ ಪರಿಹಾರ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಅರ್ಜಿ ಸಲ್ಲಿಸಬಹುದಾಗಿರುವುದರಿಂದ ಪಕ್ಷಕ್ಕೆ ಪರಿಹಾರ ನಿರಾಕರಿಸಿದ್ದ ಆಂಧ್ರ ಪ್ರದೇಶ ಹೈಕೋರ್ಟ್‌ನ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠ ಅಭಿಪ್ರಾಯಪಟ್ಟಿದೆ.
ಆಂಧ್ರಪ್ರದೇಶದಲ್ಲಿ ಅಂಚೆ ಮತಪತ್ರ ಎಣಿಕೆ ಗುರುತಿಸಲು ಇದ್ದ ನಿಯಮಾವಳಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಸಡಿಲಿಸಿರುವುದನ್ನು ಪ್ರಶ್ನಿಸಿ ಪಕ್ಷ ಈ ಹಿಂದೆ ಹೈಕೋರ್ಟ್ ಮೆಟ್ಟಿಲೇರಿತ್ತು.
ನಿರ್ದಿಷ್ಟವಾಗಿ, ನಿಯಮಾವಳಿ ಪ್ರಕಾರ ನಮೂನೆ 13A ಯಲ್ಲಿ ದೃಢೀಕರಣ ಅಧಿಕಾರಿಯ ಹೆಸರು ಮತ್ತು ಹುದ್ದೆಯನ್ನು ಕಡ್ಡಾಯವಾಗಿ ಉಲ್ಲೇಖಿಸಬೇಕಾಗಿತ್ತು. ಆದರೆ ಈಗ ಈಗ ಅಂತಹ ಎಲ್ಲಾ ಅಧಿಕಾರಿಗಳ ಮಾದರಿ ಸಹಿ ಹಾಕುವಂತೆ ಮಾತ್ರ ಹೇಳಲಾಗುತ್ತಿದೆ. ಕಾನೂನಿನ ಕಡ್ಡಾಯ ಅವಶ್ಯಕತೆಗಳಿಗೆ ಬದ್ಧವಾಗಿರದ ಅಂಚೆ ಮತಪತ್ರಗಳನ್ನು ಮಾನ್ಯಗೊಳಿಸುವ ಏಕೈಕ ಉದ್ದೇಶಕ್ಕಾಗಿ ಇದನ್ನು ಮಾಡಲಾಗಿದೆ ಎಂದು ಪಕ್ಷ ದೂರಿತ್ತು.
ರಿಟ್ ಅರ್ಜಿ ವ್ಯಾಪ್ತಿಯಲ್ಲಿ ಪರಿಹಾರ ಕೋರುವ ಬದಲು ಚುನಾವಣಾ ಅರ್ಜಿ ಸಲ್ಲಿಸುವಂತೆ ಸೂಚಿಸಿ ಜೂನ್ 1ರಂದು ಹೈಕೋರ್ಟ್ ಯಾವುದೇ ಪರಿಹಾರವನ್ನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪಕ್ಷ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು.
ವೈಎಸ್ ಆರ್ ಕಾಂಗ್ರೆಸ್ ಪರ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳೆರಡರಲ್ಲೂ ವಾದ ಮಂಡಿಸಿದ್ದರು.