ಐಪಿಸಿ ಸೆಕ್ಷನ್ 120 ಬಿ ಅಡಿಯಲ್ಲಿ ಬೇರೆ ಕ್ರಿಮಿನಲ್ ಪಿತೂರಿ ಆರೋಪ ಕೇಳಿಬಂದಿದ್ದರೆ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯನ್ನು (ಪಿಎಂಎಲ್ಎ) ಯಾಂತ್ರಿಕವಾಗಿ ಅದಕ್ಕೆ ಅನ್ವಯಿಸುವಂತಿಲ್ಲ ಎಂದು 2023ರಲ್ಲಿ ತಾನು ನೀಡಿದ್ದ ತೀರ್ಪನ್ನು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ.
ಕ್ರಿಮಿನಲ್ ಪಿತೂರಿಯ ಆರೋಪದ ಮೇಲೆ ಪಿಎಂಎಲ್ಎ ಕಾಯಿದೆಯಡಿ ಪ್ರಕರಣ ಹೂಡಲು, ಪಿಎಂಎಲ್ಎ ಕಾಯಿದೆ ಅನುಸೂಚಿಯ ಭಾಗ ಎ, ಬಿ ಅಥವಾ ಸಿ ಯಲ್ಲಿ ಈಗಾಗಲೇ ಸೇರಿಸಲಾಗಿರುವ ಅಪರಾಧಗಳನ್ನೆಸಗುವ ಉದ್ದೇಶವನ್ನು ಪಿತೂರಿಯು ಹೊಂದಿರಬೇಕು ಎಂದು ನ್ಯಾಯಾಲಯ 2023ರಲ್ಲಿ ಹೇಳಿತ್ತು.
ಈ ತೀರ್ಪನ್ನು ಮರುಪರಿಶೀಲಿಸಲು ಯಾವುದೇ ಆಧಾರವಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿಥಾಲ್ ಅವರಿದ್ದ ಪೀಠ ಮರುಪರಿಶೀಲನೆ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.
"ನಾವು 2023ರ ನವೆಂಬರ್ 29ರಂದು ನೀಡಲಾದ ತೀರ್ಪನ್ನು ಪರಿಶೀಲಿಸಿದ್ದೇವೆ, ಅದನ್ನು ಪರಿಶೀಲಿಸಲು ಕೋರಲಾಗಿತ್ತು. ದಾಖಲೆಯಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ಹೀಗಾಗಿ, ಮರುಪರಿಶೀಲನೆಗೆ ಯಾವುದೇ ಆಧಾರವಿಲ್ಲ. ಮರುಪರಿಶೀಲನಾ ಅರ್ಜಿ ವಜಾಗೊಳಿಸಲಾಗಿದೆ" ಎಂದು ನ್ಯಾಯಾಲಯ ಮಾರ್ಚ್ 19ರಂದು ನೀಡಿದ ತೀರ್ಪಿನಲ್ಲಿ ತಿಳಿಸಿದೆ.
ಅಕ್ರಮ ಹಣ ವರ್ಗಾವಣೆ ಅಪರಾಧಕ್ಕೆ ಯಾವುದೇ ನಂಟಿಲ್ಲದ ಕ್ರಿಮಿನಲ್ ಪಿತೂರಿಯನ್ನು ನಿಗದಿತ ಅಪರಾಧವಾಗಲು ಅನುಮತಿಸುವುದು ಪಿಎಂಎಲ್ಎ ಉದ್ದೇಶವನ್ನು ಅರ್ಥಹೀನವಾಗಿಸುತ್ತದೆ ಎಂದು ಉನ್ನತ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ಪಿಎಂಎಲ್ಎ ತನಿಖೆ ಪ್ರಾರಂಭಿಸಲು ಐಪಿಸಿಯ ಸೆಕ್ಷನ್ 120 ಬಿ ಅಡಿಯಲ್ಲಿ ಮಾಡಲಾದ ಸ್ವತಂತ್ರ ಆರೋಪ ಸಾಕು ಎಂದುಬಿಟ್ಟರೆ, ಐಪಿಸಿ ಅಡಿಯ ಯಾವುದೇ ಹಾಗೂ ಎಲ್ಲಾ ಅಪರಾಧಗಳಿಗೂ ಪಿಎಂಎಲ್ಎ ಅನ್ವಯಿಸಬಹುದಾಗುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.
ಐಪಿಸಿಯ ಸೆಕ್ಷನ್ 120 ಬಿ ಅನ್ವಯಿಸುವ ಮೂಲಕ ಯಾವುದೇ ಅಪರಾಧವನ್ನು ನಿಗದಿತ ಅಪರಾಧವಾಗುವಂತೆ ಮಾಡುವುದು ಶಾಸಕಾಂಗದ ಉದ್ದೇಶವಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅನಗತ್ಯ ಲಾಭ (ಅಥವಾ ಅಪರಾಧ) ಉಂಟುಮಾಡುವ ಐಪಿಸಿಯಡಿ ವ್ಯಾಖ್ಯಾನಿಸಲಾದ ಉಳಿದ ಅನೇಕ ಅಪರಾಧಗಳನ್ನು ಪಿಎಂಎಲ್ಎ ಪಟ್ಟಿಯಲ್ಲಿ ಸೇರಿಸಲಾಗಿಲ್ಲ ಎಂದು ನ್ಯಾಯಾಲಯ ಗಮನಸೆಳೆದಿದೆ.
ಪಿಎಂಎಲ್ಎ ಕ್ರಿಮಿನಲ್ ಕಾನೂನಾಗಿರುವುದರಿಂದ ಅದನ್ನು ಕಟ್ಟುನಿಟ್ಟಾಗಿ ವ್ಯಾಖ್ಯಾನಿಸಬೇಕಾಗಿದೆ. ಅಂತಹ ಕಾನೂನನ್ನು ವ್ಯಾಖ್ಯಾನಿಸುವಾಗ ಎರಡು ದೃಷ್ಟಿಕೋನಗಳನ್ನು ಸಾಧ್ಯವಾದರೆ, ಹೆಚ್ಚು ಮೃದುವಾದ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು ಎಂದು ಅದು ಹೇಳಿದೆ.
ಕ್ರಿಮಿನಲ್ ಪಿತೂರಿಯ ಅಪರಾಧ ಯಾವಾಗಲೂ "ತೀಕ್ಷ್ಣ ಅಪರಾಧ" ಎಂದು ಪರಿಗಣಿಸಲಾಗುವುದಿಲ್ಲ ಮತ್ತು ಇದು ಸಂಚಿನ ಹೊಣೆಗಾರಿಕೆಯ ತತ್ವವನ್ನು ಸಂಯೋಜಿಸುವ ಉದ್ದೇಶ ಮಾತ್ರ ಹೊಂದಿದೆ ಎಂದು ಪೀಠ ವಿವರಿಸಿದೆ.
ಹಾಗಿದ್ದರೂ, ನಿಗದಿತವಲ್ಲದ ಪ್ರತಿಯೊಂದು ಅಪರಾಧವನ್ನು ಪಿಎಂಎಲ್ಎ ಅಪರಾಧವಾಗಿ ಪರಿವರ್ತಿಸಲು ಅನುಮತಿಸಿದರೆ ಆಗ ಕಾಯಿದೆ ನಿರಂಕುಶವಾಗುತ್ತದೆ ಎಂದು ಕಳೆದ ನವೆಂಬರ್‌ನಲ್ಲಿ ನೀಡಿದ್ದ ತೀರ್ಪಿನಲ್ಲಿ ತಿಳಿಸಿತ್ತು.
ವಿಶೇಷವೆಂದರೆ, ಪಿಎಂಎಲ್ಎ ಅಡಿಯ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಬಂಧಿತರಾದ ವ್ಯಕ್ತಿಗಳಿಗೆ ಬಂಧನದ ಲಿಖಿತ ಕಾರಣಗಳನ್ನು ಇ ಡಿ ಒದಗಿಸಬೇಕು ಎಂದಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸಹ ನ್ಯಾಯಾಲಯ ಇತ್ತೀಚೆಗೆ ತಿರಸ್ಕರಿಸಿದೆ .
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]