ಉದ್ಯೋಗಕ್ಕಾಗಿ ಭೂಮಿ ಹಗರಣ: ವಿಚಾರಣೆಗೆ ತಡೆ ನೀಡಲು ಕೋರಿದ್ದ ಲಾಲು ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ಈ ನಡುವೆ, ವಿಚಾರಣಾ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವುದರಿಂದ ಲಾಲು ಅವರಿಗೆ ವಿನಾಯಿತಿ ನೀಡಲು ಪೀಠವು ಸೂಚಿಸಿದೆ.
Lalu Prasad Yadav
Lalu Prasad Yadav
Published on

ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣದಲ್ಲಿ ತಮ್ಮ ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ಕೇಂದ್ರ ತನಿಖಾ ದಳವು 2022ರಲ್ಲಿ ತಮ್ಮ ವಿರುದ್ಧ ದಾಖಲಿಸಿದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ರದ್ದುಗೊಳಿಸುವಂತೆ ಕೋರಿ ಲಾಲು ಯಾದವ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯ ಸಮಯದಲ್ಲಿ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಬೇಕೆಂದು ಲಾಲು ಪರ ವಕೀಲರು ವಾದ ಮಂಡಿಸಿದರು.

ಪ್ರಕರಣದ ವಿಚಾರಣೆ ನಡೆಸಿದ್ದ, ಹೈಕೋರ್ಟ್ ಸಿಬಿಐಗೆ ಮೇ 29 ರಂದು ನೋಟಿಸ್ ನೀಡಿತ್ತು. ಆದರೆ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಲು ಯಾವುದೇ ಬಲವಾದ ಕಾರಣಗಳಿಲ್ಲ ಎಂದು ಲಾಲು ಮನವಿಯನ್ನು ತಿರಸ್ಕರಿಸಿತ್ತು. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17 ಎ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ವಿಚಾರಣೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಯಾದವ್ ನಂತರ ಉನ್ನತ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಯಾದವ್ ಅವರ ಅರ್ಜಿಯಲ್ಲಿನ ಸಂಕ್ಷಿಪ್ತ ವಾದಗಳನ್ನು ಆಲಿಸಿದ ನಂತರ ನ್ಯಾಯಮೂರ್ತಿ ಎಂ ಎಂ ಸುಂದರೇಶ್‌ ಮತ್ತು ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು ಸಿಬಿಐ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿರುವ ಮುಖ್ಯ ಅರ್ಜಿಯನ್ನು ತ್ವರಿತವಾಗಿ ನಿರ್ಧರಿಸಲು ಹೈಕೋರ್ಟ್‌ಗೆ ನಿರ್ದೇಶನ ನೀಡಿತು.

ಈ ನಡುವೆ, ವಿಚಾರಣಾ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವುದರಿಂದ ಲಾಲು ಅವರಿಗೆ ವಿನಾಯಿತಿ ನೀಡಲು ಪೀಠವು ಸೂಚಿಸಿತು.

ಲಾಲು ಪ್ರಸಾದ್‌ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ, ಬಿಹಾರದ ನಿವಾಸಿಗಳಿಗೆ ಉದ್ಯೋಗದ ಆಮಿಷ ನೀಡಿ ಭೂಮಿ ಪಡೆದಿರುವ ಆರೋಪವನ್ನು ಮಾಡಲಾಗಿದೆ. 2004-2009ರ ಅವಧಿಯಲ್ಲಿ ಬಿಹಾರದ ವಿವಿಧ ನಿವಾಸಿಗಳು ಅಥವಾ ಅವರ ಕುಟುಂಬ ಸದಸ್ಯರು ಆಗಿನ ರೈಲ್ವೆ ಸಚಿವರಾಗಿದ್ದ ಲಾಲು ಪ್ರಸಾದ್ ಯಾದವ್ ಅವರ ಕುಟುಂಬ ಸದಸ್ಯರ ಹೆಸರಿಗೆ ತಮ್ಮ ಭೂಮಿಯನ್ನು ವರ್ಗಾಯಿಸಿದ ನಂತರ ಅವರಿಗೆ ಉದ್ಯೋಗಗಳನ್ನು ನೀಡಲಾಗಿದೆ ಎಂದು ಅದು ಆರೋಪಿಸಿದೆ.

ಲಾಲು ಅವರು ಸುಪ್ರೀಂ ಕೋರ್ಟ್ ಮುಂದೆ ಮಂಡಿಸಿರುವ ವಾದದಲ್ಲಿ, "ತಮ್ಮವಿರುದ್ಧ ಎಫ್‌ಐಆರ್‌ ದಾಖಲಿಸಲು ಸಿಬಿಐಗೆ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ/ಅನುಮೋದನೆ ಅಗತ್ಯವಿದೆ" ಆದರೆ, "ಸಿಬಿಐ ಹಾಗೆ ಮಾಡುವ ಮೊದಲು ಕಾನೂನು ಬದ್ಧ ಅನುಮತಿಯನ್ನು ಪಡೆಯುವಲ್ಲಿ ವಿಫಲವಾಗಿದೆ" ಎಂದಿದ್ದಾರೆ.

ಎಫ್‌ಐಆರ್ ಅನ್ನು 2022 ರಲ್ಲಿ ದಾಖಲಿಸಲಾಗಿದೆ. ಆದರೆ, ಇದೇ ರೀತಿಯ ಆರೋಪಗಳ ವಿರುದ್ಧ ತಮ್ಮ ವಿರುದ್ಧ ಈಗಾಗಲೇ 2009 ಮತ್ತು 2014 ರ ನಡುವೆ ಸಂಬಂಧಿತ ತನಿಖಾ ಸಂಸ್ಥೆಗಳು ತನಿಖೆಯನ್ನು ನಡೆಸಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ ಎಂದು ಲಾಲು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಮುಂದುವರೆದು, ತಮ್ಮ ವಿರುದ್ಧದ ದುರುದ್ದೇಶದಿಂದ ಕೂಡಿದ ದೂರಿನಿಂದಾಗಿ ತಾವು ನಲುಗಿರುವುದುದಾಗಿ ಅವರು ತಿಳಿಸಿದ್ದಾರೆ.

ಅಲ್ಲದೆ, ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಪ್ರತಿಪಾದಿಸಲಾದ ನ್ಯಾಯಯುತ ತನಿಖೆಯನ್ನು ಹೊಂದುವ ಮೂಲಭೂತ ಹಕ್ಕನ್ನು ಪ್ರಸಕ್ತ ಪ್ರಕರಣವು ತಮ್ಮ ವಿಚಾರದಲ್ಲಿ ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ.

Kannada Bar & Bench
kannada.barandbench.com