ವಕೀಲ ವೃತ್ತಿಗೆ ಪ್ರಬುದ್ಧರ ಅಗತ್ಯವಿದೆ ಎಂದ ಸುಪ್ರೀಂ: ಎಲ್‌ಎಲ್‌ಬಿ ಕೊರ್ಸ್‌ ಅವಧಿ ಇಳಿಕೆ ಕೋರಿದ್ದ ಅರ್ಜಿ ತಿರಸ್ಕಾರ

ಐದು ವರ್ಷಗಳ ಕೋರ್ಸ್ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಿದೆ ಎಂಬುದಾಗಿದ ಸಿಜೆಐ ವಿಚಾರಣೆ ವೇಳೆ ತಿಳಿಸಿದರು.
Supreme Court of India
Supreme Court of India
Published on

ಪದವಿಪೂರ್ವ ಶಿಕ್ಷಣದ ನಂತರ ಮೂರು ವರ್ಷಗಳ ಎಲ್‌ಎಲ್‌ಬಿ ವ್ಯಾಸಂಗ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ [ಅಶ್ವಿನಿ ಕುಮಾರ್‌ ಉಪಾಧ್ಯಾಯ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ವಕೀಲ ವೃತ್ತಿ ಪ್ರವೇಶಿಸುವ ಮುನ್ನ ವಿದ್ಯಾರ್ಥಿಗಳು ಕೇವಲ ಮೂರು ವರ್ಷ ಕಾನೂನು ಅಧ್ಯಯನ ಮಾಡಿದರೆ ಸಾಕು ಎಂಬ ಅಭಿಪ್ರಾಯವನ್ನು ತಾನು ಒಪ್ಪುವುದಿಲ್ಲ ಎಂದು ಸಿಜೆಐ ಡಿ ವೈ ಚಂದ್ರಚೂಡ್‌ ಹಾಗೂ ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ತಿಳಿಸಿತು.

“ಮೂರು ವರ್ಷದ ಕೋರ್ಸಾದರೂ ಯಾಕೆ ಬೇಕು. ಹೈಸ್ಕೂಲ್‌ ಮುಗಿಯುತ್ತಿದ್ದಂತೆಯೇ ಪ್ರಾಕ್ಟೀಸ್‌ ಆರಂಭಿಸಿಬಿಡಬಹುದು!" ಎಂದು ಸಿಜೆಐ ಚಂದ್ರಚೂಡ್‌ ಕುಟುಕಿದರು. ಮುಂದುವರಿದ ಅವರು, "ನನ್ನನ್ನು ಕೇಳಿದರೆ ಐದು ವರ್ಷ (ಕಾನೂನು ಅಧ್ಯಯನ) ಕೂಡ ಕಡಿಮೆಯೇ. ನಾವು ಮೂರು ವರ್ಷ ಬಿ ಎ ಪದವಿ ಅಧ್ಯಯನ ಮಾಡಿ ನಂತರ ಕಾನೂನು ವ್ಯಾಸಂಗ ಮಾಡುತ್ತಿದ್ದೆವು. ವೃತ್ತಿಗೆ ಪ್ರಬುದ್ಧರು ಬರುವ ಅಗತ್ಯವಿದೆ… ಐದು ವರ್ಷಗಳ ಕೋರ್ಸ್ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಿದೆ” ಎಂದು ಸಿಜೆಐ ಹೇಳಿದರು.

ಅಂತಿಮವಾಗಿ ಪಿಐಎಲ್ ಹಿಂಪಡೆಯಲು ಅರ್ಜಿದಾರರಿಗೆ ನ್ಯಾಯಾಲಯ ಅನುಮತಿ ನೀಡಿತು.

ಪ್ರಸ್ತುತ ಇರುವ ನಿಯಮದಂತೆ ಪದವಿ ಪೂರ್ವ ಶಿಕ್ಷಣ ಪಡೆದ ಬಳಿಕ ನೇರವಾಗಿ ಎಲ್‌ಎಲ್‌ಬಿ ಪದವಿ ಬಯಸುವವರು ಪ್ರಸ್ತುತ ಐದು ವರ್ಷ ಅಧ್ಯಯನ (ಐದು ವರ್ಷಗಳ BA/BCom/BBA LL.B.). ಮಾಡಬೇಕಾಗುತ್ತದೆ. ಆದರೆ ಪದವಿ ಪಡೆದು ಎಲ್‌ಎಲ್‌ಬಿಗೆ ಸೇರ್ಪಡೆಯಾದವರು ಮೂರು ವರ್ಷಗಳಲ್ಲಿ ಕೋರ್ಸ್‌ ಪೂರ್ಣಗೊಳಿಸಬಹುದಾಗಿದೆ.  

ಮೂರು ವರ್ಷಗಳ ಕೋರ್ಸ್‌ಗೆ ತಕ್ಷಣ ಅನುಮತಿ ನೀಡುವ ಕಾರ್ಯಸಾಧ್ಯತೆ ಕುರಿತು ನಿರ್ಣಯಿಸಲು ತಜ್ಞರ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ವಕೀಲರ ಪರಿಷತ್‌ಗೆ ನಿರ್ದೇಶನ ನೀಡಬೇಕೆಂದು  ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಕೋರಿದ್ದರು. ಕಾನೂನು ಕ್ಷೇತ್ರದಲ್ಲಿನ ಅತ್ಯುತ್ತಮ ಪ್ರತಿಭೆಗಳನ್ನುಸೆಳೆಯುವುದಕ್ಕಾಗಿ ವಿವರವಾದ ಮಾರ್ಗಸೂಚಿಯನ್ನು ಸಿದ್ಧಪಡಿಸಲು ಕೇಂದ್ರ ಸರ್ಕಾರ ಭಾರತೀಯ ವಕೀಲರ ಪರಿಷತ್‌ ಹಾಗೂ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟಕ್ಕೆ ನಿರ್ದೇಶಿಸಬೇಕು ಎಂದು ಕೂಡ ಅರ್ಜಿ ವಿನಂತಿಸಿತ್ತು.

Kannada Bar & Bench
kannada.barandbench.com