ಉದಯಪುರ ಫೈಲ್ಸ್ ಚಿತ್ರ ತಡೆಗೆ ಸುಪ್ರೀಂ ನಕಾರ: ಕನ್ಹಯ್ಯಾ ಲಾಲ್ ಕೊಲೆ ಆರೋಪಿಗಳಿಗೆ ಇಲ್ಲ ಮಧ್ಯಂತರ ಪರಿಹಾರ

ಬೇಸಿಗೆ ರಜೆಯ ನಂತರ ಜುಲೈ 14ರಂದು ಸುಪ್ರೀಂ ಕೋರ್ಟ್ ಕಾರ್ಯಾರಂಭ ಮಾಡಲಿದ್ದು ಸೂಕ್ತ ಪೀಠದೆದುರು ಪ್ರಕರಣ ಉಲ್ಲೇಖಿಸಬಹುದು ಎಂದು ನ್ಯಾಯಾಲಯ ಹೇಳಿದೆ.
Udaipur Files and Supreme Court
Udaipur Files and Supreme Court
Published on

ರಾಜಸ್ಥಾನದಲ್ಲಿ ನಡೆದ ದರ್ಜಿ ಕನ್ಹಯ್ಯಾ ಲಾಲ್ ತೇಲಿ ಹತ್ಯೆ ಆಧರಿಸಿದ 'ಉದಯಪುರ ಫೈಲ್ಸ್' ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆ ನಡೆಸಿ ಪರಿಹಾರ ಒದಗಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.

ಕನ್ಹಯ್ಯಾ ಲಾಲ್ ಹತ್ಯೆಯ ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ಜಾವೇದ್ ಸಲ್ಲಿಸಿರುವ ಅರ್ಜಿಯನ್ನು ಬೇಸಿಗೆ ರಜೆಯ ನಂತರ ಜುಲೈ 14ರಂದು ಕಾರ್ಯಾರಂಭ ಮಾಡಲಿರುವ ಸುಪ್ರೀಂ ಕೋರ್ಟ್‌ನ ಸೂಕ್ತ ಪೀಠದೆದುರು ಉಲ್ಲೇಖಿಸಬಹುದು ಎಂದು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ರಜಾಕಾಲೀನ ಪೀಠ ಹೇಳಿದೆ.

Also Read
ಉದಯಪುರ ಹತ್ಯೆ: ಎಲ್ಲಾ ಆರೋಪಿಗಳನ್ನು 10 ದಿನಗಳ ಕಾಲ ಎನ್ಐಎ ವಶಕ್ಕೆ ಒಪ್ಪಿಸಿದ ವಿಶೇಷ ನ್ಯಾಯಾಲಯ

ಈ ಮಧ್ಯೆ ಸಿನಿಮಾ ಬಿಡುಗಡೆ ಮಾಡಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಚಿತ್ರ ನಾಡಿದ್ದು ಜುಲೈ 11ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

ಪ್ರಕರಣದ ಎಂಟನೇ ಆರೋಪಿಯಾದ ಜಾವೇದ್ ಸಲ್ಲಿಸಿರುವ ಅರ್ಜಿಯಲ್ಲಿ, ಸಿನಿಮಾದಿಂದಾಗಿ ಧಾರ್ಮಿಕ ಸಾಮರಸ್ಯ ಕದಡುತ್ತದೆ. ಜೊತೆಗೆ ಆರೋಪಿಗಳಿಗೆ ಇನ್ನೂ ಶಿಕ್ಷೆಯಾಗಿಲ್ಲ. ತಮ್ಮನ್ನು ತಪ್ಪಿತಸ್ಥರೆಂದು ಬಿಂಬಿಸುವ ಸಿನಿಮಾದಿಂದ ಪ್ರಕರಣದ ವಿಚಾರಣೆಗೆ ಅಡ್ಡಿಯುಂಟಾಗುತ್ತದೆ ಎಂದು ಹೇಳಿತ್ತು.

ಚಿತ್ರ ಆರೋಪಿಗಳ ಬಗ್ಗೆ ಏಕಪಕ್ಷೀಯ ಧೋರಣೆಯನ್ನು ಬಿಂಬಿಸಲಿದ್ದು ನ್ಯಾಯಯುತ ವಿಚಾರಣೆಯ ಹಕ್ಕಿಗೆ ಧಕ್ಕೆ ಉಂಟುಮಾಡುತ್ತದೆ ಎಂದು ಅರ್ಜಿದಾರನ ಪರ ವಕೀಲರು ವಾದಿಸಿದರು.

Also Read
ಉದಯಪುರ ಹತ್ಯೆ: ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ ಎನ್ಐಎ

ಆದರೆ ಸುಪ್ರೀಂ ಕೋರ್ಟ್‌ ಜುಲೈ 14ರಂದು ಕಾರ್ಯಾರಂಭ ಮಾಡುವುದನ್ನು ಪ್ರಸ್ತಾಪಿಸಿದ ನ್ಯಾಯಾಲಯ ಚಿತ್ರ ಬಿಡುಗಡೆಯಾಗಲಿ ಎಂದು ತಿಳಿಸಿತು. ಪ್ರಕರಣದ ತುರ್ತು ವಿಚಾರಣೆಗೆ ನಿರಾಕರಿಸಿತು.

ರಾಜಸ್ಥಾನದ ಉದಯಪುರದಲ್ಲಿ ಇಸ್ಲಾಂವಾದಿಗಳು ಕನ್ಹಯ್ಯಾ ಲಾಲ್ ಅವರ ಶಿರಚ್ಛೇದ ಮಾಡಿದ ಆರೋಪ ಕೇಳಿಬಂದಿತ್ತು. ದಾಳಿಕೋರರು ದಾಳಿಯ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದರು. ಪ್ರವಾದಿ ಮುಹಮ್ಮದ್ ವಿರುದ್ಧ ಟೀಕೆಗಳನ್ನು ಮಾಡಿದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಆರೋಪದ ಮೇಲೆ ಲಾಲ್ ಅವರನ್ನು ಕೊಲ್ಲಲಾಗಿತ್ತು. ತನಿಖೆ ಎನ್‌ಐಎಗೆ ವರ್ಗಾವಣೆಯಾಗಿ 11 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಚಿತ್ರದ ವಿರುದ್ಧ ಜಮಾತೇ ಉಲೇಮಾ-ಇ-ಹಿಂದ್ ಸಲ್ಲಿಸಿರುವ ಮತ್ತೊಂದು ಅರ್ಜಿ ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ ಎದುರು ನೋಡುತ್ತಿದೆ.

ಸಿಬಿಎಫ್‌ಸಿ ಸೂಚನೆಯಂತೆ ಆಕ್ಷೇಪಾರ್ಹ ಭಾಗಗಳನ್ನು ಕೈಬಿಟ್ಟ ಚಿತ್ರ ತಂಡ

ಇದೇ ವೇಳೆ ಚಿತ್ರಕ್ಕೆ ಸಂಬಂಧಿಸಿದ ಮತ್ತೊಂದು ಬೆಳವಣಿಗೆಯಲ್ಲಿ, 'ಉದಯಪುರ ಫೈಲ್ಸ್' ಚಿತ್ರದಲ್ಲಿನ ಕೆಲವು ಆಕ್ಷೇಪಾರ್ಹ ಭಾಗಗಳನ್ನು ತೆಗೆದುಹಾಕಲಾಗಿದೆ ಎಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಬುಧವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ [ಮೌಲಾನಾ ಅರ್ಷದ್ ಮದನಿ Vs ಯೂನಿಯನ್ ಆಫ್ ಇಂಡಿಯಾ & ಅದರ್ಸ್].

ಜಾಮಿಯತ್ ಉಲಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರು ಚಲನಚಿತ್ರವನ್ನು ನಿಷೇಧಿಸುವಂತೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್‌) ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಅನೀಶ್ ದಯಾಳ್ ಅವರ ವಿಭಾಗೀಯ ಪೀಠದ ಮುಂದೆ ಸಿಬಿಎಫ್‌ಸಿ ಈ ಹೇಳಿಕೆಯನ್ನು ಸಲ್ಲಿಸಿತು.

ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡುವುದಕ್ಕೂ ಮುನ್ನ ತಾನು ಸೂಚಿಸಿರುವಂತೆ ಚಿತ್ರದ ಕೆಲವೊಂದ ಭಾಗಗಳನ್ನು ಕತ್ತರಿಸಲಾಗಿದೆ ಎನ್ನುವ ಸಿಬಿಎಫ್‌ಸಿ ಹೇಳಿಕೆಯನ್ನು ಪೀಠವು ತನ್ನ ಆದೇಶದಲ್ಲಿ ದಾಖಲಿಸಿಕೊಂಡಿತು. ಚಿತ್ರ ನಿರ್ಮಾಪಕರನ್ನು ಪ್ರತಿನಿಧಿಸಿದ ವಕೀಲರು ಚಿತ್ರವನ್ನು ಸೆನ್ಸಾರ್‌ ಮಾಡಿರುವ ಬಗ್ಗೆ ದೃಢಪಡಿಸಿದರು.

ಈ ವೇಳೆ ನ್ಯಾಯಾಲಯವು, ಪ್ರಕರಣಕ್ಕೆ ಸಂಬಂಧಿಸಿದ ವಕೀಲರಿಗೆ - ಮದನಿ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಸಿಬಿಎಫ್‌ಸಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಚೇತನ್ ಶರ್ಮಾ - ಟ್ರೇಲರ್‌ ಹಾಗೂ ಚಲನಚಿತ್ರವನ್ನು ವೀಕ್ಷಿಸಲು ಅನುವಾಗುವಂತೆ ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲು ನಿರ್ಮಾಪಕರಿಗೆ ನಿರ್ದೇಶನ ನೀಡಿತು.

Kannada Bar & Bench
kannada.barandbench.com