ಇ ಡಿ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣ: ಕಲ್ಕತ್ತಾ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ನಕಾರ

ಆದರೂ, ಕಲ್ಕತ್ತಾ ಹೈಕೋರ್ಟ್‌ ಮಾರ್ಚ್ 5ರಂದು ನೀಡಿದ ಆದೇಶದಲ್ಲಿ ಪಶ್ಚಿಮ ಬಂಗಾಳ ಪೊಲೀಸರ ವಿರುದ್ಧ ಮಾಡಿದ್ದ ಪ್ರತಿಕೂಲ ಅವಲೋಕನಗಳನ್ನು ಸುಪ್ರೀಂ ಕೋರ್ಟ್ ತೆಗೆದುಹಾಕಿತು.
ಸಿಬಿಐ, ಪಶ್ಚಿಮ ಬಂಗಾಳ, ಸುಪ್ರೀಂ ಕೋರ್ಟ್
ಸಿಬಿಐ, ಪಶ್ಚಿಮ ಬಂಗಾಳ, ಸುಪ್ರೀಂ ಕೋರ್ಟ್

ಅಮಾನತುಗೊಂಡ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶಹಜಹಾನ್ ಶೇಖ್‌ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಲು ತೆರಳಿದ್ದ ಜಾರಿ ನಿರ್ದೇಶನಾಲಯದ (ಇ ಡಿ) ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕಲ್ಕತ್ತಾ ಹೈಕೋರ್ಟ್ ನೀಡಿದ್ದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ (ಪಶ್ಚಿಮ ಬಂಗಾಳ ಸರ್ಕಾರ ಮತ್ತಿತರರು ಹಾಗೂ ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ).

ಇದೇ ವೇಳೆ ಶೇಖ್ ಅವರನ್ನು ಬಂಧಿಸಲು ವಿಳಂಬ ಮಾಡಿದ್ದಕ್ಕಾಗಿ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಸ್ಥಳೀಯ ಪೊಲೀಸರ ವಿರುದ್ಧ ಹೈಕೋರ್ಟ್ ಮಾಡಿದ ಅವಲೋಕನಗಳನ್ನು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ತೆಗೆದುಹಾಕಿತು.

ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಗವಾಯಿ ಅವರು ಶೇಖ್‌ ಅವರನ್ನು ಕೂಡಲೇ ಏಕೆ ಬಂಧಿಸಲಿಲ್ಲ ಎಂದು ಪ್ರಶ್ನಿಸಿದರು.

ಪ್ರಕರಣವನ್ನು ಪಶ್ಚಿಮ ಬಂಗಾಳ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಿದ ಹೈಕೋರ್ಟ್ ಆದೇಶಕ್ಕೆ ಸಂಬಂಧಿಸಿದಂತೆ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ ಎಂದು ನ್ಯಾಯಾಲಯ ಹೇಳಿತು.

ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ
ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ

ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್ ವಿ ರಾಜು ಅವರು ಹೇಳಿಕೆಗಳನ್ನು ತೆಗೆದುಹಾಕುವ ಕೋರಿಕೆಗೆ ವಿರೋಧ ವ್ಯಕ್ತಪಡಿಸಲಿಲ್ಲ. ಈ ಹಿನ್ನೆಲೆಯಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನ್ಯಾಯಾಲಯ ತೆಗೆದುಹಾಕಿತು. ಪಶ್ಚಿಮ ಬಂಗಾಳ ಸರ್ಕಾರವನ್ನು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಪ್ರತಿನಿಧಿಸಿದ್ದರು.

ಕಳೆದ ಅಕ್ಟೋಬರ್‌ನಲ್ಲಿ ಪಡಿತರ ವಿತರಣಾ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಮಾಜಿ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಅವರೊಂದಿಗೆ ಶಹಜಹಾನ್ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದೆ. ಈ ವರ್ಷದ ಜನವರಿ 5ರಂದು, ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಅಕುಂಜಿಪಾರಾದಲ್ಲಿರುವ ಶಹಜಹಾನ್ ಅವರ ನಿವಾಸದ ಮೇಲೆ ದಾಳಿ ನಡೆಸಲು ಆಗಮಿಸಿದ ಇ ಡಿ ಅಧಿಕಾರಿಗಳನ್ನು ಸುಮಾರು 200 ಸ್ಥಳೀಯರು ಸುತ್ತುವರಿದು ಘೇರಾವ್ ಹಾಕಿದ ಆರೋಪ ಕೇಳಿ ಬಂದಿತ್ತು.

ನಂತರದ ಘರ್ಷಣೆಯಲ್ಲಿ ಇ ಡಿ ಅಧಿಕಾರಿಗಳು ಗಾಯಗೊಂಡಿದ್ದರು. ಘಟನೆ ಹಿನ್ನೆಲೆಯಲ್ಲಿ ಶಹಜಹಾನ್‌ ಅವರನ್ನು ಬಂಧಿಸುವಂತೆ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ ವಿ ಆನಂದ್‌ ಬೋಸ್‌ ಸೂಚಿಸಿದ್ದರು.

Related Stories

No stories found.
Kannada Bar & Bench
kannada.barandbench.com