ಬಿಹಾರ ಜಾತಿಗಣತಿಗೆ ವಿಧಿಸಲಾಗಿದ್ದ ತಡೆ ತೆರವಿಗೆ ಸುಪ್ರೀಂ ನಕಾರ; ಇದು ಸಮೀಕ್ಷೆಯೇ ವಿನಾ ಗಣತಿಯಲ್ಲ ಎಂದ ರಾಜ್ಯ ಸರ್ಕಾರ

ಪಾಟ್ನಾ ಹೈಕೋರ್ಟ್ ಜುಲೈ 3ರಂದು ಅಂತಿಮ ವಿಚಾರಣೆ ನಡೆಸಲಿದೆ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠ ಬಿಹಾರ ಸರ್ಕಾರಕ್ಕೆ ಪರಿಹಾರ ನಿರಾಕರಿಸಿತು.
Supreme Court, Bihar caste survey
Supreme Court, Bihar caste survey
Published on

ಬಿಹಾರ ಸರ್ಕಾರ ಜಾತಿ ಗಣತಿ ನಡೆಸದಂತೆ  ಪಾಟ್ನಾ ಹೈಕೋರ್ಟ್ ವಿಧಿಸಿದ್ದ ತಡೆಯಾಜ್ಞೆಯನ್ನು ಹಿಂಪಡೆಯಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ [ಬಿಹಾರ ಸರ್ಕಾರ ಇನ್ನಿತರರು ಮತ್ತು ಯೂತ್‌ ಫಾರ್‌ ಈಕ್ವಾಲಿಟಿ ಮತ್ತಿತರರ ನಡುವಣ ಪ್ರಕರಣ].

ಪಾಟ್ನಾ ಹೈಕೋರ್ಟ್ ಜುಲೈ 3 ರಂದು ಅಂತಿಮ ವಿಚಾರಣೆಗೆ ಪ್ರಕರಣವನ್ನು ಪಟ್ಟಿ ಮಾಡಿರುವುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠ ಬಿಹಾರ ಸರ್ಕಾರಕ್ಕೆ ಪರಿಹಾರ ನೀಡಲು ನಿರಾಕರಿಸಿತು. ಒಂದು ವೇಳೆ ಜುಲೈ 3ರಂದು ಹೈಕೋರ್ಟ್‌ ವಿಚಾರಣೆ ಪ್ರಾರಂಭಿಸದಿದ್ದರೆ ಜುಲೈ 14ರಂದು ಪ್ರಕರಣ ಕೈಗೆತ್ತಿಕೊಳ್ಳಲು ಅದು ಸಮ್ಮತಿ ಸೂಚಿಸಿತು.

ಸರ್ಕಾರ ಕೈಗೊಳ್ಳಲು ಮುಂದಾಗಿದ್ದ ಜಾತಿ ಗಣತಿಗೆ ಜುಲೈ 3ರವರೆಗೆ ತಡೆ ನೀಡಿ ಪಾಟ್ನಾ ಹೈಕೋರ್ಟ್ ಮೇ 4ರಂದು ಆದೇಶ ಹೊರಡಿಸಿತ್ತು. ಜಾತಿ ಸಮೀಕ್ಷೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಈ ಆದೇಶ ನೀಡಿತ್ತು.

ಆದರೆ ಮಧ್ಯಂತರ ಹಂತದಲ್ಲಿ ಪ್ರಕರಣದ ಅರ್ಹತೆ ಕುರಿತು ಹೈಕೋರ್ಟ್‌ ತಪ್ಪು ನಿರ್ಧಾರ ತಳೆದಿದ್ದು ಶಾಸಕಾಂಗಕ್ಕೆ ಸಂಬಂಧಿಸಿದ ವಿಚಾರವನ್ನು ಸ್ಪರ್ಶಿಸಿದೆ ಎಂದು ಬಿಹಾರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿಯಲ್ಲಿ ದೂರಿತ್ತು.

ಜಾತಿಗಣತಿಗೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಯನ್ನು ಶಾಸಕರೊಂದಿಗೆ ಹಂಚಿಕೊಳ್ಳಲಾಗುತ್ತದೆ ಎಂಬ ವಾದವನ್ನು ಹೈಕೋರ್ಟ್‌ ತಪ್ಪಾಗಿ ಮಾನ್ಯಮಾಡಿದೆ. ಈ ಹಂತದಲ್ಲಿ ಸಮೀಕ್ಷೆ ನಿಲ್ಲಿಸಿದರೆ ಸರ್ಕಾರದ ಬೊಕ್ಕಸಕ್ಕೆ ಭಾರಿ ಹೊಡೆತ ಬೀಳುತ್ತದೆ ಎಂದು ವಾದಿಸಲಾಗಿತ್ತು.

ಇಂದಿನ ವಿಚಾರಣೆ ವೇಳೆ ಬಿಹಾರ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಶ್ಯಾಮ್‌ ದಿವಾನ್‌ ಜಾತಿ ಗಣತಿ ಮತ್ತು ಸಮೀಕ್ಷೆ ನಡುವೆ ವ್ಯತ್ಯಾಸವಿದೆ ಎಂದು ಪ್ರತಿಪಾದಿಸಿದರು. ಇದು ಜಾತಿಗಣತಿಯಲ್ಲ, ಬದಲಿಗೆ ಸ್ವಯಂಪ್ರೇರಿತವಾಗಿ ನಡೆಯುತ್ತಿರುವ ಸಮೀಕ್ಷೆ ಎಂದು ವಾದಿಸಿದರು.

ಆದರೆ  ಸುಪ್ರೀಂ ಕೋರ್ಟ್‌ “ಹೈಕೋರ್ಟ್‌ ಈ ವಿಚಾರಗಳ ಕುರಿತು ವಿಚಾರಣೆ ನಡೆಸಿದೆ” ಎಂದಿತು. ಆಗ ಸಮೀಕ್ಷೆಗಾಗಿ ಅನುದಾನ ಬಿಡುಗಡೆಯಾಗಿದೆ. ಜನರನ್ನು ನಿಯೋಜಿಸಲಾಗಿದೆ. ಈ ಸಂದರ್ಭವನ್ನು ಯಾರೂ ಪ್ರಶ್ನಿಸುತ್ತಿಲ್ಲ. ಇಂತಹ ಸಮೀಕ್ಷೆಗಳನ್ನು ಉಳಿದ ರಾಜ್ಯಗಳೂ ಮಾಡಿವೆ. ಹೀಗಾಗಿ ಸಮೀಕ್ಷೆ ನಿಲ್ಲಿಸಲಾಗದು ಎಂದು ದಿವಾನ್‌ ವಾದಿಸಿದರು.

ಇದನ್ನು ನ್ಯಾಯಾಲಯ ಪರಿಗಣಿಸುವ ಅಗತ್ಯವಿದೆ ಎಂಬುದನ್ನು ಸುಪ್ರೀಂ ಕೋರ್ಟ್‌ ಒಪ್ಪಿತು. ಆದರೆ ಮಧ್ಯಂತರ ಆದೇಶದಲ್ಲಿ ಹೈಕೋರ್ಟ್‌ ಮಾಡಿರುವ ಪ್ರಾಥಮಿಕ ಅವಲೋಕನಗಳಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಅದು ಹೇಳಿತು.

Kannada Bar & Bench
kannada.barandbench.com