ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ನಡೆಸುತ್ತಿರುವ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಗಳನ್ನು (ಸಿಎ ಪರೀಕ್ಷೆ) ಮುಂದೂಡುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಸಿಎ ಪರೀಕ್ಷೆಗಳು ಮೇ 2 ರಿಂದ ಪ್ರಾರಂಭವಾಗಲಿದ್ದು, ಮೇ 17 ರವರೆಗೆ ನಡೆಯಲಿವೆ. ಕೆಲವು ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮೇ 7 ಮತ್ತು ಮೇ 13ರಂದು ಮತದಾನ ನಡೆಯಲಿರುವುದರಿಂದ ಮೇ 8 ಮತ್ತು ಮೇ 14ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಮತ್ತೊಂದು ದಿನಕ್ಕೆ ನಿಗದಿಗೊಳಿಸಲು ಅನೇಕ ವಿದ್ಯಾರ್ಥಿಗಳು ಮನವಿ ಮಾಡಿದ್ದರು.
ಪರೀಕ್ಷಾ ದಿನಾಂಕ ಬದಲಿಸಿದರೆ ಈಗಾಗಲೇ ಪರೀಕ್ಷೆಗಳನ್ನು ನಡೆಸಲು ಮಾಡಿಕೊಂಡ ವ್ಯಾಪಕ ವ್ಯವಸ್ಥೆಗೆ ಅಡ್ಡಿಪಡಿಸಿದಂತಾಗುತ್ತದೆ ಮತ್ತು ಇದು ಕೆಲವು ವಿದ್ಯಾರ್ಥಿಗಳಿಗೆ ಗಂಭೀರ ಅನ್ಯಾಯ ಉಂಟುಮಾಡಬಹುದು ಎಂದು ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ತಿಳಿಸಿದೆ.
ಕೆಲವು ಪರೀಕ್ಷೆಗಳಿಂದ ಆಯ್ಕೆಯ ಮೂಲಕ ಹೊರಗುಳಿಯುವ ಅವಕಾಶ ಒದಗಿಸಿದರೆ ಒಂದೇ ಯತ್ನದಲ್ಲಿ ಪರೀಕ್ಷೆ ತೇರ್ಗಡೆಯಾಗಲು ಚಿಂತಿಸುತ್ತಿರುವ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ನ್ಯಾಯಾಲಯ ಹೇಳಿದೆ.
ಸಿಎ ಪರೀಕ್ಷೆ ಬರೆಯುತ್ತಿರುವವರ ಪರವಾಗಿ ಹಿರಿಯ ವಕೀಲೆ ಮಾಧವಿ ದಿವಾನ್ ವಾದ ಮಂಡಿಸಿದರು. ಆದರೆ, ಪರೀಕ್ಷೆ ಮುಂದೂಡುವ ಅವರ ಪ್ರಸ್ತಾಪವನ್ನು ಐಸಿಎಐ ಪರ ವಕೀಲರು ವಿರೋಧಿಸಿದರು.
ಪರೀಕ್ಷೆ ನಡೆಸಲು ಈಗಾಗಲೇ ಸಮಗ್ರ ವ್ಯವಸ್ಥೆ ಮಾಡಲಾಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಕೋವಿಡ್‌ನಂತಹ ಅಸಾಧಾರಣ ಸಂದರ್ಭಗಳಲ್ಲಷ್ಟೇ ಪರೀಕ್ಷೆ ಮುಂದೂಡಲಾಗಿತ್ತು. ಮತದಾನದ ದಿನಾಂಕ ಹಾಗೂ ಪರೀಕ್ಷೆ ದಿನಾಂಕ ಒಟ್ಟಿಗೇ ಬರದಂತೆ ನೋಡಿಕೊಳ್ಳಲಾಗಿದೆ ಎಂದರು.
ಕಡೆಗೆ ಐಸಿಎಐ ವಾದದಲ್ಲಿ ಹುರುಳಿರುವುದನ್ನು ಕಂಡುಕೊಂಡ ನ್ಯಾಯಾಲಯ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು.