ವಿವಿಪ್ಯಾಟ್ ಮತ್ತು ಇವಿಎಂ ಮತಗಳ ಎಣಿಕೆ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಪ್ರತಿ ವರ್ಷವೂ ಹೊಸದಾಗಿ ಅರ್ಜಿ ಸಲ್ಲಿಸಲಾಗುತ್ತಿದೆ ಎಂದ ಪೀಠ, ಅರ್ಜಿದಾರರು ಚುನಾವಣಾ ಪ್ರಕ್ರಿಯೆಯ ಬಗ್ಗೆ ಹೆಚ್ಚು ಅನುಮಾನ ಪಡಬಾರದು ಎಂದು ಕಿವಿಮಾತು ಹೇಳಿತು.
ವಿವಿಪ್ಯಾಟ್ ಮತ್ತು ಇವಿಎಂ ಮತಗಳ ಎಣಿಕೆ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ವೋಟರ್-ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಸ್ಲಿಪ್‌ಗಳನ್ನು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ಗಳ (ಇವಿಎಂ) ಮೂಲಕ ಚಲಾಯಿಸಿದ ಮತಗಳೊಂದಿಗೆ ತಾಳೆ ಮಾಡಬೇಕು ಎಂದು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ತುರ್ತಾಗಿ ಆಲಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ [ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಮತ್ತು ಭಾರತೀಯ ಚುನಾವಣಾ ಆಯೋಗ ಮತ್ತಿತರರ ನಡುವಣ ಪ್ರಕರಣ].

ಅರ್ಜಿದಾರರು ಚುನಾವಣಾ ಪ್ರಕ್ರಿಯೆಯ ಬಗ್ಗೆ ಹೆಚ್ಚು ಅನುಮಾನಿಸಬಾರದು ಎಂದು ಬುದ್ಧಿಮಾತು ಹೇಳಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ ವಿ ಎನ್ ಭಟ್ಟಿ ಅವರಿದ್ದ ಪೀಠ ನವೆಂಬರ್‌ನಲ್ಲಿ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿತು.

Also Read
ಲೋಕಸಭಾ ಚುನಾವಣೆ: ಹೊಸದಾಗಿ ಮೊದಲ ಹಂತದ ಇವಿಎಂ, ವಿವಿಪ್ಯಾಟ್‌ ಪರಿಶೀಲನೆ ಕೋರಿದ್ದ ಕಾಂಗ್ರೆಸ್‌ ನಾಯಕನ ಅರ್ಜಿ ವಜಾ

ಪ್ರಕರಣವನ್ನು ಆರು ತಿಂಗಳಿಗೊಮ್ಮೆ ಪ್ರಸ್ತಾಪಿಸಲಾಗುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವಿಲ್ಲ. ಸೂಕ್ತ ಸಮಯದಲ್ಲಿ ವಿಚಾರಣೆ ನಡೆಸಲಾಗುವುದು. ಪ್ರತಿ ವರ್ಷ ಈ ಬಗ್ಗೆ ಹೊಸದಾಗಿ ಅರ್ಜಿ ಸಲ್ಲಿಸಲಾಗುತ್ತದೆ. ಬೇರೆ ತುರ್ತು ಪ್ರಕರಣಗಳಿವೆ. ಯಾವುದೇ ಮಧ್ಯಂತರ ಚುನಾವಣೆ ನಡೆಯುವುದಿದ್ದರೆ ನಡೆಯಲಿ. ಇದು ಕ್ರಿಮಿನಲ್‌ ಪ್ರಕರಣವಲ್ಲ ಎಂದು  ವಿವರಿಸಿತು.

ವಿವಿಪ್ಯಾಟ್‌ ಸ್ಲಿಪ್‌ಗಳನ್ನು ಇವಿಎಂ ಮೂಲಕ ಚಲಾಯಿಸಿದ ಮತಗಳೊಂದಿಗೆ ತಾಳೆ ಮಾಡಿದರೆ ʼಚಲಾವಣೆಗೆ ತಕ್ಕಂತೆ ತಮ್ಮ ಮತಗಳ ಎಣಿಕೆಯಾಗಿದೆʼ ಎಂದು ನಾಗರಿಕರಿಗೆ ದೃಢವಾಗುತ್ತದೆ ಎಂದು ಸರ್ಕಾರೇತರ ಸಂಸ್ಥೆ ಎಡಿಆರ್‌ ಅರ್ಜಿ ಸಲ್ಲಿಸಿತ್ತು.  

ಇಂದು ಸುಪ್ರೀಂ ಕೋರ್ಟ್‌ಗೆ ಎಡಿಆರ್‌ ಪರ ಹಾಜರಾದ ವಕೀಲ ಪ್ರಶಾಂತ್ ಭೂಷಣ್, ಕೆಲವು ರಾಜ್ಯಗಳಿಗೆ ನವೆಂಬರ್‌ನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಹೀಗಾಗಿ ಎರಡು ವಾರಗಳ ನಂತರ ಈ ಪ್ರಕರಣದ ವಿಚಾರಣೆ ನಡೆಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ ನ್ಯಾಯಾಲಯ ಪ್ರಕರಣದ ತುರ್ತು ವಿಚಾರಣೆಗೆ ನಿರಾಕರಿಸಿತು.

Related Stories

No stories found.
Kannada Bar & Bench
kannada.barandbench.com