ನ್ಯಾಯಾಲಯ ಪುನಾರಂಭ: ಸಿಜೆಐಗೆ ಪುಟ್ಟ ಹುಡುಗಿ ಬರೆದ ಪತ್ರ ಆಧರಿಸಿ ಪಿಐಎಲ್ ದಾಖಲಿಸಿಕೊಂಡ ಸುಪ್ರೀಂ

ಸಿಜೆಐ ಅವರನ್ನು ಅಭಿನಂದಿಸಲು ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಆಯೋಜಿಸಿದ್ದ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿನೀತ್ ಸರಣ್ ಈ ವಿಚಾರ ಬಹಿರಂಗಪಡಿಸಿದರು.
CJI NV Ramana and Supreme Court
CJI NV Ramana and Supreme Court
Published on

ಕೋರ್ಟ್‌ಗಳಲ್ಲಿ ಭೌತಿಕ ವಿಚಾರಣೆಯನ್ನು ಮರು ಆರಂಭಿಸುವ ಸಂಬಂಧ ಎದುರಾಗಿರುವ ಸಮಸ್ಯೆಗಳ ಕುರಿತು ಸುಪ್ರೀಂ ಕೋರ್ಟ್‌ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದನ್ನು ದಾಖಲಿಸಿಕೊಂಡಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಮುಚ್ಚಿದ್ದ ಶಾಲೆಗಳು ಇದಾಗಲೇ ಪುನಾರಂಭಗೊಂಡಿವೆ, ಹಾಗಿದ್ದರೂ ನ್ಯಾಯಾಲಯಗಳು ಭೌತಿಕ ವಿಚಾರಣೆ ಆರಂಭಿಸುವುದಕ್ಕೆ ಉತ್ಸುಕತೆ ತೋರುತ್ತಿಲ್ಲ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಅವರಿಗೆ ಪುಟ್ಟ ಹುಡುಗಿಯೊಬ್ಬಳು ಬರೆದ ಪತ್ರವನ್ನು ಆಧರಿಸಿ ಸುಪ್ರೀಂಕೋರ್ಟ್‌ ಈ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿಕೊಂಡಿದೆ.

ಸಿಜೆಐ ಅವರನ್ನು ಅಭಿನಂದಿಸುವ ಸಲುವಾಗಿ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಆಯೋಜಿಸಿದ್ದ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿನೀತ್ ಸರಣ್ ಈ ವಿಚಾರ ಬಹಿರಂಗಪಡಿಸಿದರು.

"ಶಾಲೆಗಳನ್ನು ತೆರೆದಾಗ ನ್ಯಾಯಾಲಯಗಳನ್ನು ಏಕೆ ತೆರೆಯಬಾರದು ಎಂದು ಒಬ್ಬ ಚಿಕ್ಕ ಹುಡುಗಿ ನಿನ್ನೆ ಸಿಜೆಐಗೆ ಪತ್ರ ಬರೆದಿದ್ದಳು. ಸಿಜೆಐ ಇದನ್ನು ಪಿಐಎಲ್ ಆಗಿ ಪರಿಗಣಿಸಿದ್ದು ಶೀಘ್ರದಲ್ಲೇ ವಿಚಾರಣೆ ಆರಂಭವಾಗಲಿದೆ" ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಮಾರ್ಚ್ 2020ರಲ್ಲಿ ಕೋವಿಡ್‌ ಬಿಕ್ಕಟ್ಟು ಆರಂಭವಾದಾಗಿನಿಂದ ಭಾರತದಲ್ಲಿ ನ್ಯಾಯಾಲಯಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯನಿರ್ವಹಿಸುತ್ತಿವೆ. ಅನೇಕ ಹೈಕೋರ್ಟ್‌ಗಳು ಮಾತ್ರವಲ್ಲದೆ ಸುಪ್ರೀಂ ಕೋರ್ಟ್ ಕೂಡ ಸೀಮಿತ ನೆಲೆಯಲ್ಲಿ ಭೌತಿಕ (ನೇರ) ವಿಚಾರಣೆ ಆರಂಭಿಸಿದರೂ, ಬಹುತೇಕ ಪ್ರಕರಣಗಳ ವಿಚಾರಣೆ ಇನ್ನೂ ವರ್ಚುವಲ್ ವಿಧಾನದ ಮೂಲಕ ನಡೆಯುತ್ತಿದೆ.

ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 1ರಂದು ಹೈಬ್ರಿಡ್ ಕಾರ್ಯವಿಧಾನದ ಮೂಲಕ ಸೀಮಿತ ಭೌತಿಕ ವಿಚಾರಣೆ ಆರಂಭಿಸಿತ್ತು. ಅದರಂತೆ ವಕೀಲರಿಗೆ ನಿರ್ದಿಷ್ಟ ಪ್ರಕರಣದಲ್ಲಿ ವರ್ಚುವಲ್ ಅಥವಾ ಭೌತಿಕ ವಿಧಾನವನ್ನು ಆಯ್ಕೆ ಮಾಡುವ ಆಯ್ಕೆ ಇರುತ್ತದೆ. ಭೌತಿಕ ವಿಧಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹುಪಾಲು ವಕೀಲರು ತಮ್ಮ ಪ್ರಕರಣಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಾದಿಸಲು ಬಯಸುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆಯೇ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಈ ಹಿಂದೆ ಸಲ್ಲಿಸಲಾಗಿದ್ದು ಸಂವಿಧಾನದ 19 (1) (ಎ) ಮತ್ತು (ಜಿ) ವಿಧಿಗಳಡಿ ವರ್ಚುವಲ್‌ ವಿಧಾನದ ಮೂಲಕ ನ್ಯಾಯಾಲಯ ಕಲಾಪಗಳಲ್ಲಿ ಭಾಗಿಯಾಗುವ ಹಕ್ಕು ವಕೀಲರಿಗೆ ಇದೆ ಎಂದು ವಾದಿಸಲಾಗಿದೆ.

Kannada Bar & Bench
kannada.barandbench.com