ಯಾವುದೇ ರಾಜಕೀಯ ವರ್ಗವನ್ನು ಮೆಚ್ಚಿಸಲು ನಾವಿಲ್ಲಿ ಇಲ್ಲ; ಏಕರೂಪ ವಿವಾಹ ವಯೋಮಿತಿ ಮನವಿ ತಿರಸ್ಕರಿಸಿದ ಸುಪ್ರೀಂ

ಮದುವೆಯ ಕನಿಷ್ಠ ವಯೋಮಿತಿ ಮಹಿಳೆಯರಿಗೆ ಮತ್ತು ಪುರುಷರಿಗೆ ಅನುಕ್ರಮವಾಗಿ 18 ವರ್ಷ ಮತ್ತು 21 ವರ್ಷಗಳು ಎಂದು ಪ್ರಸ್ತುತ ಕಾನೂನು ತಿಳಿಸುತ್ತದೆ.
CJI Chandrachud, Justices PS Narasimha and JB Pardiwala and SC
CJI Chandrachud, Justices PS Narasimha and JB Pardiwala and SC

ಪುರುಷ ಮತ್ತು ಮಹಿಳೆಯರಿಗೆ ಏಕರೂಪದ ವಿವಾಹ ವಯೋಮಿತಿಯನ್ನು ಕೋರಿ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ [ಅಶ್ವಿನಿ ಕುಮಾರ್ ಉಪಾಧ್ಯಾಯ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಮದುವೆಯ ಕನಿಷ್ಠ ವಯೋಮಿತಿ ಮಹಿಳೆಯರಿಗೆ ಮತ್ತು ಪುರುಷರಿಗೆ ಅನುಕ್ರಮವಾಗಿ 18 ವರ್ಷ ಮತ್ತು 21 ವರ್ಷಗಳು ಎಂದು ಪ್ರಸ್ತುತ ಕಾನೂನು ಇದೆ.

ಅರ್ಜಿದಾರರು ಪುರುಷ ಮತ್ತು ಮಹಿಳೆ ಇಬ್ಬರಿಗೂ ವಿವಾಹದ ವಯಸ್ಸು ಕನಿಷ್ಠ 21 ವರ್ಷ ಇರಬೇಕೆಂದು ಹೇಳಿದ್ದರೂ ಅವರು ತಮ್ಮ ಅರ್ಜಿಯ ಕೋರಿಕೆಯಲ್ಲಿ ಮದುವೆಯ ಕನಿಷ್ಠ ವಯೋಮಿತಿಯನ್ನು ಸೂಚಿಸುವ ನಿಬಂಧನೆಯನ್ನು ರದ್ದುಗೊಳಿಸುವಂತೆ ಕೋರಿದ್ದಾರೆ ಎನ್ನುವುದನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಗಮನಿಸಿತು. ಹೀಗೆ ನಿಬಂಧನೆಯನ್ನು ಸಾರಾಸಗಟಾಗಿ ರದ್ದುಗೊಳಿಸುವುದರಿಂದ ಮಹಿಳೆಯರಿಗೆ ಕನಿಷ್ಠ ವಿವಾಹ ವಯೋಮಿತಿ ಇಲ್ಲದ ಪರಿಸ್ಥಿತಿ ಉಂಟಾಗುತ್ತದೆ ಎಂದು ನ್ಯಾಯಾಲಯ ತಿಳಿಸಿತು.

“18 ವರ್ಷ ವಯೋಮಿತಿ ನಿಗದಿಪಡಿಸುವ ನಿಬಂಧನೆಯನ್ನು ರದ್ದುಗೊಳಿಸುವುದರಿಂದ ಮಹಿಳೆಯರಿಗೆ ಕನಿಷ್ಠ ವಿವಾಹದ ವಯೋಮಿತಿ ಇರುವುದಿಲ್ಲ. ಈ ನ್ಯಾಯಾಲಯಕ್ಕೆ ಕಾನೂನು ರೂಪಿಸಲಾಗಲೀ ಸಂಸತ್ತಿಗೆ ಕಾನೂನು ರೂಪಿಸುವಂತೆ ಸೂಚಿಸುವುದಾಗಲೀ ಸಾಧ್ಯವಿಲ್ಲ” ಎಂದು ನ್ಯಾಯಾಲಯ ಒತ್ತಿ ಹೇಳಿತು.   

ಹಾಗಾದರೆ ಹೈಕೋರ್ಟ್‌ ಪ್ರಕರಣವನ್ನು ನಿರ್ಧರಿಸುತ್ತದೆ ಎಂದು ಉಪಾಧ್ಯಾಯ ಅವರು ಹೇಳಿದ್ದು ನ್ಯಾಯಾಲಯವನ್ನು ಕೆರಳಿಸಿತು.

"ನಮಗೆ ನಿಮ್ಮ ಅನಪೇಕ್ಷಿತ ಟೀಕೆಗಳ ಅಗತ್ಯವಿಲ್ಲ. ನಿಮ್ಮನ್ನು ಅಥವಾ ರಾಜಕೀಯದ ಯಾವುದೇ ವರ್ಗವನ್ನು ಮೆಚ್ಚಿಸಲು ನಾವು ಇಲ್ಲಿ ಕುಳಿತಿಲ್ಲ. ನೀವು ನನಗೆ ಅನಪೇಕ್ಷಿತ ಪ್ರತಿಕ್ರಿಯೆ ನೀಡಬೇಡಿ. ಇದು ರಾಜಕೀಯ ವೇದಿಕೆಯಲ್ಲ. ನಾವು ನಿಮಗೆ ವಿವರಣೆ ನೀಡಬೇಕಾಗಿಲ್ಲ" ಎಂದು ಸಿಜೆಐ ಗುಡುಗಿದರು.

ಮದುವೆಗೆ ನಿರ್ದಿಷ್ಟ ವಯಸ್ಸನ್ನು ಸೂಚಿಸುವ ಬೇರೆ ಬೇರೆ ಧರ್ಮಾಧಾರಿತ ಕಾನೂನುಗಳಿದ್ದು ಇದು ಸಂವಿಧಾನದ 14 ಮತ್ತು 21ನೇ ನಿಯಮದಡಿ ತಾರತಮ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಪುರುಷ ಮತ್ತು ಮಹಿಳೆ ಇಬ್ಬರಿಗೂ ಕನಿಷ್ಠ ವಿವಾಹ ವಯಸ್ಸನ್ನು 21ಕ್ಕೆ ನಿಗದಿಪಡಿಸಬೇಕು ಎಂದು ಉಪಾಧ್ಯಾಯ ಅರ್ಜಿಯಲ್ಲಿ ಕೋರಿದ್ದರು.

ಇದೇ ವಿಚಾರವಾಗಿ ದೆಹಲಿ ಮತ್ತು ರಾಜಸ್ಥಾನ ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ತನಗೆ ವರ್ಗಾಯಿಸಿಕೊಳ್ಳಬೇಕು ಎಂದು ಅವರು ಕೋರಿದ್ದರು. ಕಳೆದ ತಿಂಗಳು ಅಂದರೆ ಜನವರಿ 2023ರಲ್ಲಿ, ದೆಹಲಿ ಹೈಕೋರ್ಟ್‌ನಲಿ ಬಾಕಿ ಉಳಿದಿದ್ದ ಪ್ರಕರಣಗಳನ್ನು ತನಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

ಆದರೂ ಈ ಸಮಸ್ಯೆ ಸಂಸತ್ತಿನ ವ್ಯಾಪ್ತಿಗೆ ಒಳಪಟ್ಟಿದ್ದು ಶಾಸಕಾಂಗವೇ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಇಂದು  ನ್ಯಾಯಾಲಯ ತಿಳಿಸಿತು. "ನಾವೊಬ್ಬರೇ ಸಂವಿಧಾನದ ವಿಶೇಷ ರಕ್ಷಕರಲ್ಲ. ಸಂಸತ್ತು ಕೂಡ ಆ ಕೆಲಸ ಮಾಡಬಹುದು. ಸೂಕ್ತ ಕಾನೂನು ರೂಪಿಸಿ, ನಿರ್ಧಾರ ಕೈಗೊಳ್ಳಬಹುದು" ಎಂದು ಪೀಠ  ಹೇಳಿತು. ಆದ್ದರಿಂದ ಈ ಅರ್ಜಿಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸುತ್ತಿರುವುದಾಗಿ ತಿಳಿಸಿದ ಪೀಠ ಅರ್ಜಿದಾರರು ತಮಗೆ ಲಭ್ಯವಿರುವ ಪರಿಹಾರಗಳನ್ನು ಪಡೆಯಬಹುದು ಎಂದು ತಿಳಿಸಿ ಮನವಿಯನ್ನು ವಜಾಗೊಳಿಸಿತು.

ಡಿಸೆಂಬರ್ 2021ರಲ್ಲಿ, ಕೇಂದ್ರ ಸಂಪುಟವು ಮಹಿಳೆಯರ ವಿವಾಹದ ಕಾನೂನುಬದ್ಧ ವಯೋಮಿತಿಯನ್ನು 18ರಿಂದ 21 ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನು ಅನುಮೋದಿಸಿತ್ತು.

Related Stories

No stories found.
Kannada Bar & Bench
kannada.barandbench.com