ಸಾಬರಮತಿ ಪುನಾರಭಿವೃದ್ಧಿ ಯೋಜನೆ ಪ್ರಶ್ನಿಸಿ ತುಷಾರ್ ಗಾಂಧಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪುನರಾಭಿವೃದ್ಧಿ ಯೋಜನೆಯು ₹1,200 ಕೋಟಿ ವೆಚ್ಚದ್ದಾಗಿದ್ದು, ಆಶ್ರಮದ ಸರಳತೆಯನ್ನು ಅಳಿಸಿಹಾಕುತ್ತದೆ. ಅದನ್ನು ಗಾಂಧಿ ಮೌಲ್ಯಗಳಿಂದ ದೂರವಾದ ಸರ್ಕಾರಿ ನಿಯಂತ್ರಿತ ಸ್ಮಾರಕವಾಗಿ ಪರಿವರ್ತಿಸುತ್ತದೆ ಎಂದು ತುಷಾರ್‌ ಗಾಂಧಿ ಆಕ್ಷೇಪಿಸಿದ್ದರು.
 Mahatma Gandhi
Mahatma Gandhi
Published on

ಗಾಂಧೀಜಿಯವರು ಸ್ಥಾಪಿಸಿದ ಸಾಬರಮತಿ ಆಶ್ರಮವನ್ನು ಪುನರಾಭಿವೃದ್ಧಿಗೊಳಿಸುವ ಯೋಜನೆಯನ್ನು ಎತ್ತಿಹಿಡಿದ ಗುಜರಾತ್ ಹೈಕೋರ್ಟ್‌ನ 2022ರ ತೀರ್ಪಿನ ವಿರುದ್ಧ ಮಹಾತ್ಮ ಗಾಂಧಿಯವರ ಮೊಮ್ಮಗ ತುಷಾರ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್‌ ಮತ್ತು ರಾಜೇಶ್ ಬಿಂದಾಲ್ ಅವರ ಪೀಠವು ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ನಿರಾಕರಿಸಿತು.

ಒಟ್ಟು ₹1,200 ಕೋಟಿ ವೆಚ್ಚದ ಯೋಜನೆಯು ಆಶ್ರಮದ ಸರಳತೆಯನ್ನು ಅಳಿಸಿಹಾಕುತ್ತದೆ. ಅದನ್ನು ಗಾಂಧಿ ಮೌಲ್ಯಗಳಿಂದ ದೂರವಾದ ಸರ್ಕಾರಿ ನಿಯಂತ್ರಿತ ಸ್ಮಾರಕವಾಗಿ ಪರಿವರ್ತಿಸುತ್ತದೆ ಎಂದು ತುಷಾರ್‌ ಗಾಂಧಿ ತಮ್ಮ ಅರ್ಜಿಯಲ್ಲಿ ದೂರಿದ್ದರು.

ಯೋಜನೆ ಗಾಂಧಿ ಪರಂಪರೆಗೆ ಮಾಡಿದ ದ್ರೋಹವಾಗಿದೆ. ಮೂಲ ಆಶ್ರಮದ ಚಹರೆ ಬದಲಾಯಿಸುವುದರ ಜೊತೆಗೆ  ವಸ್ತುಸಂಗ್ರಹಾಲಯ, ಬಯಲು ರಂಗಮಂದಿರ ಹಾಗೂ ಆಹಾರ ಕೇಂದ್ರಗಳೊಂದಿಗೆ ಆಧುನೀಕೃತ ತಾಣವಾಗಿ ಮರುರೂಪಿಸಲು ಸರ್ಕಾರ ಯತ್ನಿಸುತ್ತಿದೆ. ಗಾಂಧಿವಾದಿ ಚಿಂತನೆಗೆ ಯೋಜನೆಯಲ್ಲಿ ಕಿಮ್ಮತ್ತಿಲ್ಲ ಎಂದು ಅವರು ಆರೋಪಿಸಿದ್ದರು.

ಯೋಜನೆಯಡಿ 40 ಕಟ್ಟಡಗಳನ್ನು ಸಂರಕ್ಷಿಸಲಾಗುತ್ತಿದ್ದು ಉಳಿದ 200 ನಿರ್ಮಿತಿಗಳನ್ನು ನಾಶ ಪಡಿಸಲಾಗುತ್ತಿದೆ ಇಲ್ಲವೇ ಮರುನಿರ್ಮಾಣ ಮಾಡಲಾಗುತ್ತಿದೆ. ಹರಿಜನ ಕುಟುಂಬಗಳನ್ನು ಸ್ಥಳಾಂತರಿಸಿ ಪ್ರಸ್ತುತ ಈ ಪ್ರದೇಶದ ಮೇಲ್ವಿಚಾರಣೆ ಮಾಡುತ್ತಿರುವ ಗಾಂಧಿವಾದಿ ಟ್ರಸ್ಟ್‌ಗಳನ್ನು ಮೂಲೆಗುಂಪಾಗಿಸುತ್ತದೆ ಎಂದು ತುಷಾರ್‌ ಗಾಂಧಿ ಆಕ್ಷೇಪಿಸಿದ್ದರು.

ಘನಶ್ಯಾಮದಾಸ್ ಬಿರ್ಲಾ ಅವರಿಗೆ ಗಾಂಧೀಜಿಯವರ 1933ರಲ್ಲಿ ಬರೆದ ಪತ್ರದಲ್ಲಿ ಆಶ್ರಮವನ್ನು ಹರಿಜನರಿಗೆ ವರ್ಗಾಯಿಸುವ ಇಂಗಿತ ವ್ಯಕ್ತಪಡಿಸಿದ್ದರು. ಅವರ ಇಚ್ಛೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತಾಗಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದರು.

Kannada Bar & Bench
kannada.barandbench.com