ಇಪ್ಪತ್ತೇಳು ವಾರಗಳ ಭ್ರೂಣದ ಗರ್ಭಪಾತ: ಒಂದು ವಾರದ ಸಮಾಲೋಚನೆ ಬಳಿಕ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಭ್ರೂಣ ಅಸಹಜವಾಗಿದ್ದರೆ ಅಥವಾ ಗರ್ಭಿಣಿಯ ಜೀವ ಉಳಿಸುವ ಸಂದರ್ಭದಲ್ಲಿ ಮಾತ್ರ 24 ವಾರಗಳ ನಂತರವೂ ಗರ್ಭಪಾತಕ್ಕೆ ಅನುಮತಿಸಬಹುದಾಗಿದ್ದು ಈ ಕಾನೂನನ್ನು ಮೀರುವಂತಿಲ್ಲ ಎಂದು ಪೀಠ ತಿಳಿಸಿತು.
Pregnant woman and Supreme Court
Pregnant woman and Supreme Court

ವೈದ್ಯಕೀಯ ಗರ್ಭಪಾತ ಕಾಯಿದೆ- 1971ರ ಪ್ರಕಾರ (ಎಂಟಿಪಿ ಕಾಯಿದೆ) ವಿಧಿಸಲಾದ 24 ವಾರಗಳ ಮಿತಿ ದಾಟಿ ಬೆಳೆದಿರುವ ಭ್ರೂಣದ ಗರ್ಭಪಾತ ಮಾಡಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ, ಭ್ರೂಣ ಆರೋಗ್ಯಕರವಾಗಿದೆ ಎಂಬ ವೈದ್ಯಕೀಯ ವರದಿ ಆಧರಿಸಿ ಸೋಮವಾರ ತಿರಸ್ಕರಿಸಿದೆ.

ಭ್ರೂಣ ಅಸಹಜವಾಗಿದ್ದರೆ ಅಥವಾ ಗರ್ಭಿಣಿಯ ಜೀವ ಉಳಿಸುವ ಸಂದರ್ಭದಲ್ಲಿ ಮಾತ್ರ 24 ವಾರಗಳ ನಂತರವೂ ಗರ್ಭಪಾತಕ್ಕೆ ಅನುಮತಿಸಬಹುದಾಗಿದ್ದು ಈ ಕಾನೂನನ್ನು ಮೀರುವಂತಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿತು. ಸಲ್ಲಿಸಲಾದ ಮನವಿ ಯಾವುದೇ ವಿನಾಯಿತಿಗಳ ವ್ಯಾಪ್ತಿಗೆ ಒಳಪಡುವುದಿಲ್ಲವಾದ್ದರಿಂದ ಅದು ಮನವಿಯನ್ನು ತಿರಸ್ಕರಿಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 11ರಂದು ವಿಭಾಗೀಯ ಪೀಠ ಭಿನ್ನ ತೀರ್ಪು ನೀಡಿತ್ತು. ನ್ಯಾ. ಹಿಮಾ ಕೊಹ್ಲಿ ಅವರು ಗರ್ಭಪಾತಕ್ಕೆ ಅವಕಾಶ ನೀಡಬಾರದು ಎಂದು ತೀರ್ಪಿತ್ತರೆ ಗರ್ಭಾವಸ್ಥೆ ಅಂತ್ಯಗೊಳಿಸುವುದಕ್ಕೆ ಸಂಬಂಧಿಸಿದಂತೆ ಮಹಿಳೆಯ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ನ್ಯಾ. ಬಿ ವಿ ನಾಗರತ್ನ ಅಭಿಪ್ರಾಯಪಟ್ಟಿದ್ದರು.  ಇದಾದ ಸುಮಾರು ಒಂದು ವಾರದ ನಂತರ ನ್ಯಾಯಾಲಯ ಇಂದು ಮಧ್ಯಾಹ್ನ ತೀರ್ಪು ನೀಡಿದೆ.

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಎಐಐಎಂಎಸ್) ಮಗುವಿನ ಹೆರಿಗೆ ಮಾಡಬೇಕು ನ್ಯಾಯಾಲಯ  ಸೂಚಿಸಿದ್ದು  ಮಗುವಿನ ಪಾಲಕರು  ಅದನ್ನು ದತ್ತು ನೀಡಲು ಬಯಸಿದರೆ ಹಾಗೆ ಮಾಡಲು ಅವರು ಸ್ವತಂತ್ರರು ಎಂದು ಕೂಡ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯಾ ಭಾಟಿ, ಹಿರಿಯ ನ್ಯಾಯವಾದಿ ಕಾಲಿನ್ ಗೊನ್ಸಾಲ್ವೆಸ್ ವಾದ ಮಂಡಿಸಿದರು.

ಗರ್ಭಪಾತಕ್ಕೆ ಅನುಮತಿಸಿ ಇಬ್ಬರು ನ್ಯಾಯಮೂರ್ತಿಗಳು ನೀಡಿದ್ದ ಆದೇಶದಂತೆಯೇ ತೀರ್ಪು ನೀಡಲು ಕೇಂದ್ರ ಸರ್ಕಾರ ಸಿಜೆಐ ಚಂದ್ರಚೂಡ್‌ ನೇತೃತ್ವದ ಪೀಠಕ್ಕೆ ಮೌಖಿಕ ಮನವಿ ಮಾಡಿದ ಹಿನ್ನೆಲೆಯಲ್ಲಿ ವಿಭಾಗೀಯ ಪೀಠ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಇದರಿಂದಾಗಿ ಪ್ರಕರಣ ವಿವಾದದ ಬಣ್ಣ ಪಡೆದಿತ್ತು.

ಅಕ್ಟೋಬರ್ 11ರಂದು ಭಿನ್ನ ತೀರ್ಪು ಬಂದ ಹಿನ್ನೆಲೆಯಲ್ಲಿ ಅಂತಿಮ ತೀರ್ಪು ನೀಡಲು ರಚಿಸಲಾದ  ತ್ರಿಸದಸ್ಯ ಪೀಠದ ಭಾಗವಾಗಿ ಪ್ರಕರಣ ಆಲಿಸಲು ಸಿಜೆಐ ಬಳಿಕ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ರಚಿಸಿದ್ದರು.

Related Stories

No stories found.
Kannada Bar & Bench
kannada.barandbench.com