ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ವಿರೋಧಿಸಿದ್ದ ಅರ್ಜಿ ವಜಾ; ರಾಷ್ಟ್ರಮಟ್ಟದ ನಾಯಕರಾಗಿ ಬೆಳೆಯಲು ಅನುಕೂಲ ಎಂದ ಸುಪ್ರೀಂ

ವ್ಯಕ್ತಿಯೊಬ್ಬರು ಒಂದಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದು ಅಸಾಂವಿಧಾನಿಕವಲ್ಲ. ಇದು ಶಾಸನಾತ್ಮಕ ನೀತಿಯ ವಿಚಾರ ಎಂದು ನ್ಯಾಯಾಲಯ ಹೇಳಿದೆ.
Election
Election
Published on

ಏಕಕಾಲಕ್ಕೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಕ್ಕೆ ನಿರ್ಬಂಧಿಸುವಂತೆ ಕೋರಿ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ಗುರುವಾರ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ವಿಭಿನ್ನ ಕ್ಷೇತ್ರಗಳಿಂದ ಸ್ಪರ್ಧೆ ಮಾಡದಂತೆ ವ್ಯಕ್ತಿಯೊಬ್ಬರನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್‌ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಿತು.

“ಈ ರೀತಿ ಸ್ಪರ್ಧೆ ಮಾಡುವ ಮೂಲಕ ರಾಜಕಾರಣಿಯೊಬ್ಬರು ರಾಷ್ಟ್ರಮಟ್ಟದ ನಾಯಕರಾಗಿ ರೂಪುಗೊಳ್ಳಲು ಪ್ರಯತ್ನಿಸಬಹುದು” ಎಂದು ಸಿಜೆಐ ಚಂದ್ರಚೂಡ್‌ ಹೇಳಿದರು.

“ವಿಧಾನಸಭಾ ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಅಭ್ಯರ್ಥಿಯಾಗಲು ಅನುಮತಿಸುವುದು ಶಾಸನಾತ್ಮಕ ನೀತಿಯ ಭಾಗವಾಗಿದ್ದು, ಅಂಥ ಆಯ್ಕೆ ನೀಡುವ ಮೂಲಕ ಸಂಸದೀಯ ಪ್ರಜಾಪ್ರಭುತ್ವವನ್ನು ವಿಸ್ತರಿಸಬೇಕೆನ್ನುವುದು ಸಂಸತ್‌ನ ಇಚ್ಛೆಗೆ ಬಿಟ್ಟ ವಿಚಾರ” ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಗೋಪಾಲ್‌ ಶಂಕರನಾರಾಯಣನ್‌ ಅವರು “ಒಂದಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ಮತದಾರರು ಮತ್ತು ಸಾರ್ವಜನಿಕ ಬೊಕ್ಕಸದ ಮೇಲೆ ಉಂಟಾಗುವ ಪರಿಣಾಮವನ್ನು ಪರಿಗಣಿಸಬೇಕು. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಕ್ಕೆ ಅನುಮತಿಸುವುದು ಸಂವಿಧಾನದ 19 ಮತ್ತು 21ನೇ ವಿಧಿಯ ಉಲ್ಲಂಘನೆಯಾಗಿದೆ” ಎಂದರು.

ಇದಕ್ಕೆ ಸಿಜೆಐ ಅವರು “ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದರೂ ಎರಡೂ ಕ್ಷೇತ್ರಗಳಿಂದ ಚುನಾಯಿತರಾಗುತ್ತಾರೆ ಎಂಬ ಖಾತರಿ ಇರುವುದಿಲ್ಲ. ಹಲವು ಕಾರಣಗಳಿಗೆ ಹೀಗೆ ಮಾಡಲಾಗುತ್ತದೆ. ಇದರಲ್ಲಿ ತಪ್ಪೇನಿದೆ? ಇದು ರಾಜಕೀಯ ಪ್ರಜಾಪ್ರಭುತ್ವ” ಎಂದರು.

ಇದಕ್ಕೆ ಶಂಕರನಾರಾಯಣನ್‌ ಅವರು “ಮತದಾರರು ಅಥವಾ ಸಾರ್ವಜನಿಕ ಬೊಕ್ಕಸದ ಮೇಲಿನ ಪರಿಣಾಮವನ್ನು ಪರಿಗಣಿಸಬೇಕು. ಇದು ಸಂವಿಧಾನದ 19 ಮತ್ತು 21ನೇ ವಿಧಿಯ ಉಲ್ಲಂಘನೆಯಾಗಿದೆ” ಎಂದರು.

ಇದಕ್ಕೆ ಸಿಜೆಐ ಅವರು ಇದನ್ನು ಸಂಸತ್ತು ನಿರ್ಧರಿಸಬೇಕೆ ವಿನಾ ಸುಪ್ರೀಂ ಕೋರ್ಟ್‌ ಅಲ್ಲ ಎಂದರು. ಆಗ ನ್ಯಾ. ನರಸಿಂಹ ಅವರು “ಇದರಲ್ಲಿ ಸಾಂವಿಧಾನಿಕ ಅನೈತಿಕತೆ ಇಲ್ಲವೇ ಇಲ್ಲ. ಇದಕ್ಕೆ ಇತಿಹಾಸದಲ್ಲಿ ನಿದರ್ಶನಗಳಿವೆ” ಎಂದರು.

ಅಂತಿಮವಾಗಿ ಪೀಠವು “ಹಲವು ಕಾರಣಗಳಿಗಾಗಿ ವಿಭಿನ್ನ ಕ್ಷೇತ್ರಗಳಿಂದ ಸ್ಪರ್ಧೆ ಮಾಡಲಾಗುತ್ತದೆ. ಇದು ಸಂಸದೀಯ ಪ್ರಜಾಪ್ರಭುತ್ವ ವಿಸ್ತರಿಸುತ್ತದೆಯೇ ಎಂಬುದು ಶಾಸನ ಸಭೆಗೆ ಸೇರಿದ ವಿಚಾರವಾಗಿದೆ. ಸಂವಿಧಾನದ 14 ಮತ್ತು 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಕಾಣದ ಸಂದರ್ಭದಲ್ಲಿ ಈ ನಿಬಂಧನೆಯನ್ನು ಅಸಾಂವಿಧಾನಿಕ ಎಂದು ನ್ಯಾಯಾಲಯ ತಳ್ಳಿಹಾಕಲಾಗದು. ಇದು ಸಂಸದೀಯ ಸಾರ್ವಭೌಮತ್ವಕ್ಕೆ ಸೇರಿದ ವಿಚಾರವಾಗಿದೆ” ಎಂದು ಹೇಳಿ, ಅರ್ಜಿ ವಜಾ ಮಾಡಿತು.

ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 33(7) ಗೆ ತಿದ್ದುಪಡಿ ಮಾಡುವಂತೆ ಪ್ರಧಾನ ಮಂತ್ರಿಗಳಿಗೆ 2004ರ ಜುಲೈ 5ರಂದು ಮುಖ್ಯ ಚುನಾವಣಾ ಆಯುಕ್ತರು ಕೋರಿದ್ದನ್ನು ಆಧರಿಸಿ ಅರ್ಜಿ ಸಲ್ಲಿಸಲಾಗಿತ್ತು. ಸೆಕ್ಷನ್‌ 33(7)ಕ್ಕೆ ತಿದ್ದುಪಡಿ ಮಾಡಿದರೆ ವ್ಯಕ್ತಿಯೊಬ್ಬರು ಒಂದಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಅವಕಾಶವಾಗುವುದಿಲ್ಲ ಎಂದು ಕಾನೂನು ಆಯೋಗವು 255ನೇ ವರದಿಯಲ್ಲಿ ಹೇಳಿತ್ತು.

Kannada Bar & Bench
kannada.barandbench.com