ಪಾಕಿಸ್ತಾನಿ ಕಲಾವಿದರಿಗೆ ನಿಷೇಧ ಹೇರಲು ಸುಪ್ರೀಂ ನಕಾರ: ಸಂಕುಚಿತ ಮನಸ್ಸು ಬೇಡ ಎಂದು ಅರ್ಜಿದಾರರಿಗೆ ಬುದ್ಧಿವಾದ

ಪಾಕಿಸ್ತಾನಿ ಕಲಾವಿದರನ್ನು ನೇಮಿಸಿಕೊಳ್ಳದಂತೆ ಅಥವಾ ಅವರಿಂದ ಯಾವುದೇ ಕೆಲಸ ಮಾಡಿಸದಂತೆ ಇಲ್ಲವೇ ಪ್ರದರ್ಶನ ನಡೆಸದಂತೆ ಭಾರತೀಯರನ್ನು ನಿಷೇಧಿಸಬೇಕು ಎಂದು ಮನವಿಯಲ್ಲಿ ಕರೆ ನೀಡಲಾಗಿತ್ತು.
ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ

ಪಾಕಿಸ್ತಾನಿ ಕಲಾವಿದರನ್ನು ಭಾರತದಲ್ಲಿ ನೇಮಿಸಿಕೊಳ್ಳದಂತೆ ಸಂಪೂರ್ಣವಾಗಿ ನಿಷೇಧಿಸಬೇಕೆಂದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ಈ ಸಂಬಂಧ ಬಾಂಬೆ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ ವಿ ಎನ್‌ ಭಟ್ಟಿ ಅವರಿದ್ದ ಪೀಠ ಎತ್ತಿಹಿಡಿದಿದೆ. ಪಾಕಿಸ್ತಾನಿ ಕಲಾವಿದರನ್ನು ನೇಮಿಸಿಕೊಳ್ಳುವುದರಿಂದ ಅಥವಾ ಅವರಿಂದ ಯಾವುದೇ ಕೆಲಸ ಅಥವಾ ಪ್ರದರ್ಶನಕ್ಕೆ ಕೋರುವುದರಿಂದ ಭಾರತೀಯರಿಗೆ ನಿಷೇಧ ವಿಧಿಸಬೇಕು ಎಂದು ಮನವಿ ಕೋರಿತ್ತು.

ಪ್ರಕರಣವನ್ನು ವಜಾಗೊಳಿಸಿದ ನ್ಯಾ. ಖನ್ನಾ " ಅರ್ಜಿದಾರರು ಇಷ್ಟು ಸಂಕುಚಿತ ಮನೋಭಾವ ಹೊಂದಬಾರದು" ಎಂದು ಬುದ್ಧಿವಾದ ಹೇಳಿದರು.

ಬಾಂಬೆ ಹೈಕೋರ್ಟ್ ಈ ಹಿಂದೆ ಅಕ್ಟೋಬರ್‌ನಲ್ಲಿ ಅರ್ಜಿಯನ್ನು ವಜಾಗೊಳಿಸಿದ್ದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಅರ್ಜಿ ಪ್ರತಿಗಾಮಿ ಹೆಜ್ಜೆ ಇಡಲು ಬಯಸಿದ್ದು ಸಾಂಸ್ಕೃತಿಕ ಸಾಮರಸ್ಯ, ಏಕತೆ ಮತ್ತು ಶಾಂತಿಗೆ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ಅದಕ್ಕೆ ಅರ್ಹತೆ ಇಲ್ಲ ಎಂದು ಹೈಕೋರ್ಟ್‌ ಹೇಳಿತ್ತು. ವಿಶೇಷವೆಂದರೆ, ಭಾರತದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಭಾಗವಹಿಸಿದ್ದನ್ನು ಪ್ರಸ್ತಾಪಿಸಿದ್ದ ಹೈಕೋರ್ಟ್‌ "ಒಟ್ಟಾರೆ ಶಾಂತಿ ಮತ್ತು ಸೌಹಾರ್ದತೆಯ ದೃಷ್ಟಿಯಿಂದ ಭಾರತ ಸರ್ಕಾರ ಕೈಗೊಂಡ ಪ್ರಶಂಸನೀಯ ಸಕಾರಾತ್ಮಕ ಕ್ರಮಗಳಿಂದಾಗಿ ಇದು ಸಾಧ್ಯವಾಯಿತು" ಎಂದು ಅಭಿಪ್ರಾಯಪಟ್ಟಿತ್ತು.

ಅರ್ಜಿದಾರರ ದೇಶಭಕ್ತಿಯ ಕಲ್ಪನೆ ತಪ್ಪಾಗಿದೆ. ಅಲ್ಲದೆ, ಹಾಗೆ ನಿಷೇಧ ವಿಧಿಸುವುದರಿಂದ ವ್ಯಾಪಾರ ವ್ಯವಹಾರ ನಡೆಸುವ ಭಾರತೀಯರ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಹೈಕೋರ್ಟ್ ಹೇಳಿತ್ತು.

ಸ್ವಯಂ ಘೋಷಿತ ಸಿನಿಮಾ ಕಾರ್ಮಿಕ ಫೈಜ್ ಅನ್ವರ್ ಖುರೇಷಿ ಈ ಅರ್ಜಿ ಸಲ್ಲಿಸಿದ್ದರು. ಭಾರತೀಯ ಚಲನಚಿತ್ರೋದ್ಯಮದಲ್ಲಿ ಪಾಕಿಸ್ತಾನಿ ಕಲಾವಿದರನ್ನು ನೇಮಿಸಿಕೊಳ್ಳದಿರಲು ನಿರ್ಧರಿಸಿದ್ದ ಅಖಿಲ ಭಾರತ ಸಿನಿ ಕಾರ್ಮಿಕರ ಸಂಘ (ಎಐಸಿಡಬ್ಲ್ಯೂಎ) ನಿಷೇಧವನ್ನು ಅವರು ಉಲ್ಲೇಖಿಸಿದ್ದರು.

ಎಐಸಿಡಬ್ಲ್ಯೂಎ ನಿರ್ಣಯವನ್ನು ವಿವಿಧ ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಲಾಗಿತ್ತು.

ತಾನು ಕೋರಿದ ಪರಿಹಾರ ನೀಡದಿದ್ದರೆ ಪಾಕಿಸ್ತಾನದಲ್ಲಿ ಅನುಕೂಲಕರ ವಾತಾವರಣ ಹೊಂದಿರದ ಭಾರತೀಯ ಕಲಾವಿದರ ವಿರುದ್ಧ ತಾರತಮ್ಯ ಎಸಗಿದಂತಾಗುತ್ತದೆೆ ಎಂದು ಖುರೇಷಿ ಹೇಳಿದ್ದರು.

ಪಾಕಿಸ್ತಾನಿ ಕಲಾವಿದರು ಭಾರತದಲ್ಲಿನ ವಾಣಿಜ್ಯ ಅವಕಾಶ ಬಳಸಿಕೊಳ್ಳಲು ಯತ್ನಿಸುತ್ತಿದ್ದು, ಇದು ಭಾರತೀಯರಿಗೆ ಅಂತಹ ಅವಕಾಶ ಕಡಿಮೆ ಮಾಡುವ ಮೂಲಕ ಅಥವಾ ವಂಚಿತರನ್ನಾಗಿ ಮಾಡುವ ಮೂಲಕ ಪೂರ್ವಾಗ್ರಹಕ್ಕೊಳಪಡಿಸಬಹುದು ಎಂದು ಅವರು ವಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com