ನವಲಾಖಾ ಅವರನ್ನು ಜೈಲಿನಿಂದ ಗೃಹ ಬಂಧನಕ್ಕೆ ಸ್ಥಳಾಂತರಿಸುವುದನ್ನು ಪ್ರಶ್ನಿಸಿದ್ದ ಎನ್‌ಐಎ ಅರ್ಜಿ ವಜಾಗೊಳಿಸಿದ ಸುಪ್ರೀಂ

ಗೃಹ ಬಂಧನವನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲವು ಹೆಚ್ಚುವರಿ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್‌ ಮತ್ತು ಹೃಷಿಕೇಶ್‌ ರಾಯ್‌ ಅವರ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
Gautam Navlakha, NIA and Supreme Court
Gautam Navlakha, NIA and Supreme Court
Published on

ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಗೌತಮ್‌ ನವಲಾಖಾ ಅವರನ್ನು ಜೈಲಿನ ಬದಲಿಗೆ ಗೃಹ ಬಂಧನದಲ್ಲಿಡಲು ಆದೇಶಿಸಿದ್ದ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ಇದೇ ವೇಳೆ ಒಂದು ದಿನದ ಒಳಗೆ ತನ್ನ ಆದೇಶದ ಪಾಲನೆಯಾಗಬೇಕು ಎಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್‌ ಮತ್ತು ಹೃಷಿಕೇಶ್‌ ರಾಯ್‌ ಅವರ ನೇತೃತ್ವದ ಪೀಠವು ಕಟ್ಟುನಿಟ್ಟಿನ ಆದೇಶಿಸಿದೆ. ಗೃಹ ಬಂಧನವನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲವು ಹೆಚ್ಚುವರಿ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಪೀಠ ಹೇಳಿದೆ.

ನವಲಾಖಾ ಅವರನ್ನು ತಮ್ಮನ್ನು ಗೃಹ ಬಂಧನದಲ್ಲಿ ಇಡಬೇಕು ಎಂದು ಬಯಸುತ್ತಿರುವ ಸ್ಥಳವು ಭಾರತೀಯ ಕಮ್ಯುನಿಸ್ಟ್‌ ಪಕ್ಷಕ್ಕೆ ಸೇರಿದ್ದಾಗಿದೆ ಎಂದು ವಿಚಾರಣೆಯ ಸಂದರ್ಭದಲ್ಲಿ ಎನ್‌ಐಎ ಪರ ವಕೀಲರು ವ್ಯಕ್ತಪಡಿಸಿದ ಅಳುಕನ್ನು ಪೀಠವು ತಿರಸ್ಕರಿಸಿತು.

“ಕಮ್ಯುನಿಸ್ಟ್‌ ಪಕ್ಷವು ಭಾರತದ ನೋಂದಾಯಿತ ಪಕ್ಷ. ಇದರಲ್ಲಿ ಸಮಸ್ಯೆ ಏನಿದೆ?” ಎಂದು ಎನ್‌ಐಎ ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರನ್ನು ಪೀಠ ಪ್ರಶ್ನಿಸಿತು.

ಅದಕ್ಕೆ ಮೆಹ್ತಾ ಅವರು “ಇದು ನಿಮಗೆ ಆಘಾತ ಉಂಟು ಮಾಡಲಿಲ್ಲ ಎಂದಾದರೆ ನಾನು ಏನು ಹೇಳಲಿ” ಎಂದರು. ಇದಕ್ಕೆ ಪೀಠವು “ಇಲ್ಲ, ಇದು ನಮಗೆ ಆಘಾತ ಉಂಟು ಮಾಡಿಲ್ಲ” ಎಂದಿತು.

ಇದೇ ವೇಳೆ, ಪೀಠವು ಗೃಹ ಬಂಧನವು ದುರುಪಯೋಗವಾದಂತೆ ನೋಡಿಕೊಳ್ಳಲು ಹೆಚ್ಚುವರಿ ಭದ್ರತಾ ಬೇಡಿಕೆಗಳನ್ನು ಮನ್ನಿಸಿತು. “ನಿವಾಸದಿಂದ ಹೊರಹೋಗುವುದಕ್ಕೆ ಅಡುಗೆ ಮನೆಯಿಂದ ಇರುವ ಬಾಗಿಲನ್ನು ಮುಚ್ಚಲು ತಮ್ಮ ಆಕ್ಷೇಪವಿಲ್ಲ ಎಂಬ ನವಲಾಖಾ ಅವರ ವಾದವನ್ನು ದಾಖಲಿಸಿಕೊಳ್ಳಲಾಗಿದೆ. ಹೊರಹೋಗಲು ಅಡುಗೆ ಮನೆಯ ಒಳಗಿನಿಂದ ಇರುವ ಬಾಗಿಲನ್ನು ಮುಚ್ಚಲು ಎನ್‌ಐಎ ಸ್ವತಂತ್ರವಾಗಿದೆ. ಇನ್ನು ಹಜಾರ ಮತ್ತು ಅಡುಗೆ ಮನೆ ನಡುವಣ ಬಾಗಿಲನ್ನು ಎನ್‌ಐಎ ಮುಚ್ಚುವಂತಿಲ್ಲ. ತೆಗೆಯಬಹುದಾದ ಜಾಲರಿ (ಗ್ರಿಲ್‌) ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ. ಅಂಥ ಜಾಲರಿಯನ್ನು ನಿರ್ಬಂಧಿಸಿ, ಅದರ ಕೀಲಿ ಕೈ ಅನ್ನು ಅದನ್ನು ಅವರ ಬಳಿಯೇ ಇಟ್ಟುಕೊಳ್ಳಬಹುದು. ದಕ್ಷಿಣ ಭಾಗದಲ್ಲಿ ಮತ್ತೊಂದು ಸಿಸಿಟಿವಿ ಅಳವಡಿಸಲು ಅನುಮತಿಸಲಾಗಿದೆ. ನವೆಂಬರ್‌ 10ರ ಆದೇಶವನ್ನು 24 ತಾಸುಗಳಲ್ಲಿ ಜಾರಿಗೆ ತರಬೇಕು” ಎಂದು ಪೀಠ ಕಠಿಣವಾಗಿ ಆದೇಶಿಸಿತು.

ಅಲ್ಲದೆ, ಇಂಟರ್‌ನೆಟ್‌ ಬಳಸದಂತೆ ವಿಧಿಸಿರುವ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪುನರುಚ್ಚರಿಸಿತು. ಒಂದು ವೇಳೆ ಅಂತಹ ಉಲ್ಲಂಘನೆ ಕಂಡುಬಂದರೆ ಎನ್‌ಐಎ ನ್ಯಾಯಾಲಯವನ್ನು ಎಡತಾಕಲು ಸ್ವತಂತ್ರವಾಗಿದೆ ಎಂದು ತಿಳಿಸಿತು.

Kannada Bar & Bench
kannada.barandbench.com