ಅಂತರ್ಜಾಲ ಸ್ಥಗಿತ ಕುರಿತು ಮಾರ್ಗಸೂಚಿ: ಅರ್ಜಿ ತಿರಸ್ಕರಿಸಿದ ಸುಪ್ರೀಂ; ತಪ್ಪಾಗಿ ನೋಟಿಸ್‌ ನೀಡಿದ್ದಾಗಿ ಹೇಳಿಕೆ

ಅನುರಾಧಾ ಭಾಸಿನ್ ಪ್ರಕರಣದಲ್ಲಿ ತಾನು ನೀಡಿದ್ದ ತೀರ್ಪನ್ನು ಜಾರಿಗೆ ತರದೆ ಇದ್ದರೆ ಅರ್ಜಿದಾರರಿಗೆ ಬೇರೆ ಪರಿಹಾರಗಳು ದೊರೆಯುತ್ತವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಭಾರತದ ಸರ್ವೋಚ್ಚ ನ್ಯಾಯಾಲಯ
ಭಾರತದ ಸರ್ವೋಚ್ಚ ನ್ಯಾಯಾಲಯ
Published on

ಸರ್ಕಾರದ ಹೇರಿಕೆಯಿಂದ ಉಂಟಾಗುವ ಅಂತರ್ಜಾಲ ಸ್ಥಗಿತಗೊಳಿಸುವಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಾರ್ಗಸೂಚಿ ಜಾರಿಗೊಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಮಿಸಲೇನಿಯಸ್‌ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.

ಅನುರಾಧಾ ಭಾಸಿನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಒಂದು ವೇಳೆ ಜಾರಿಗೆ ತರದೆ ಇದ್ದರೂ ಅರ್ಜಿದಾರರಿಗೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಬೇರೆ ಕಾನೂನಾತ್ಮಕ ಪರಿಹಾರಗಳು ಲಭ್ಯವಿವೆ ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ದೀಪಂಕರ್ ದತ್ತಾಹಾಗೂ ಅರವಿಂದ್ ಕುಮಾರ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ಅರ್ಜಿದಾರ ವಕೀಲರು ತಮ್ಮ ವಾದ ಮುಕ್ತಾಯಗೊಳಿಸುವ ವೇಳೆ, ನ್ಯಾ. ದತ್ತಾ ಅವರು ಪ್ರತಿಕ್ರಿಯಿಸಿ "ಸಂವಿಧಾನದ 144ನೇ ವಿಧಿ (ಭಾರತದ ವ್ಯಾಪ್ತಿಯಲ್ಲಿ ಇರುವ ಎಲ್ಲ ನಾಗರಿಕ ಮತ್ತು ನ್ಯಾಯಾಂಗ ಪ್ರಾಧಿಕಾರಗಳು ಸುಪ್ರೀಂ ಕೋರ್ಟ್‌ನ ನೆರವಿಗೆ ಕಾರ್ಯತತ್ಪರವಾಗಿರುತ್ತವೆ) ಇರುವಾಗ, ನೀವು ಹೆಚ್ಚಿನ ನಿರ್ದೇಶನ ಹೇಗೆ ಕೇಳುತ್ತೀರಿ?" ಎಂದು ಪ್ರಶ್ನಿಸಿದರು.

"ಅನೇಕ ಜನ (ಭಾಸಿನ್‌ ಪ್ರಕರಣದ ತೀರ್ಪು ಜಾರಿ ಬಗ್ಗೆ) ಆತಂಕ ಹೊಂದಿರಬಹುದು. ಆದರೆ ಮಿಸಿಲೇನಿಯಸ್‌ ಅರ್ಜಿ ನಿರ್ವಹಣಾ ಯೋಗ್ಯವೇ? ಇದು ನಿಷ್ಕ್ರಿಯವಾಗಿದೆ" ಎಂದು ನ್ಯಾಯಮೂರ್ತಿ ಕುಮಾರ್ ಅಭಿಪ್ರಾಯಪಟ್ಟರು.

ಆಗ ನ್ಯಾಯಮೂರ್ತಿ ಗವಾಯಿ ಅವರು "ಸಿವಿಲ್ ಅರ್ಜಿಗಳ ಮೂಲಕ ವಿಲೇವಾರಿ ಮಾಡಿದ ಪ್ರಕರಣಗಳನ್ನು ಮತ್ತೆ ತೆರೆಯುವುದನ್ನು ನಾವು ಖಂಡಿಸುತ್ತೇವೆ. ಧನ್ಯವಾದಗಳು. ಅರ್ಜಿ ವಜಾ ಮಾಡಲಾಗಿದೆ. ನೋಟಿಸ್ ನೀಡುವ ಮೂಲಕ ನಾವು ತಪ್ಪು ಮಾಡಿದ್ದೇವೆ." ಎಂದರು.

ನಂತರ ನ್ಯಾಯಾಲಯ ಅರ್ಜಿದಾರರಿಗೆ ತಮ್ಮ ಅರ್ಜಿಯನ್ನು ಹಿಂತೆಗೆದುಕೊಳ್ಳಲು ಅನುಮತಿಸಿತು.

ಈ ವರ್ಷದ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಪ್ರರಕಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿ ನೋಟಿಸ್‌ ನೀಡಿತ್ತು. ಸುಪ್ರೀಂ ಕೋರ್ಟ್‌ ಆದೇಶದ ಅನುಪಾಲನೆಯ ಬಗ್ಗೆ ಅರ್ಜಿದಾರರು ಮಾಹಿತಿ ಕೋರಿದ್ದರು. ಆದರೆ, ನ್ಯಾಯಾಲಯದ ತೀರ್ಪಿನ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇಲ್ಲ ಎನ್ನುವುದು ಅರ್ಜಿಗೆ ದೊರೆತ ಪ್ರತಿಕ್ರಿಯೆಯಿಂದ ತಿಳಿದು ಬಂದಿತ್ತು ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿತ್ತು.

ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದ ಸಂದರ್ಭದಲ್ಲಿ ಹೇರಲಾಗಿದ್ದ ಇಂಟರ್‌ನೆಟ್‌ ನಿರ್ಬಂಧ ಪ್ರಶ್ನಿಸಿ 2019ರ ಆಗಸ್ಟ್ 10 ರಂದು ‘ಕಾಶ್ಮೀರ ಟೈಮ್ಸ್’ ಸಂಪಾದಕಿ ಅನುರಾಧಾ ಭಾಸಿನ್ ಅವರು ಮೊದಲ ಬಾರಿಗೆ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದರು. 2019 ರ ಆಗಸ್ಟ್‌ನಲ್ಲಿ ಕಾಶ್ಮೀರ ಸ್ಥಾನಮಾನ ರದ್ದುಪಡಿಸಿದ ಬಳಿಕ ರಾಜ್ಯದಲ್ಲಿ ಅಂತರ್ಜಾಲಕ್ಕೆ ನಿರ್ಬಂದ ಹೇರಿದ್ದನ್ನು ಅರ್ಜಿ ಪ್ರಶ್ನಿಸಿತ್ತು.

ಅಂತರ್ಜಾಲದ ಮೂಲಕ ವ್ಯಕ್ತಪಡಿಸಲಾಗುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಸಂವಿಧಾನದ 19 (1) (ಎ) ವಿಧಿಯ ಭಾಗವಾಗಿದ್ದು ಸಾಂವಿಧಾನಿಕ ನಿಬಂಧನೆಯ ಅಡಿಯಲ್ಲಿ ಈ ವಿಧಿಗೆ ಇರುವ ನಿರ್ಬಂಧಗಳು ಅಂತರ್ಜಾಲದ ಅಭಿವ್ಯಕ್ತಿಗೂ ಅನ್ವಯವಾಗುತ್ತವೆ ಎಂದು ನ್ಯಾಯಾಲಯ 2019ರ ತೀರ್ಪಿನಲ್ಲಿ ಹೇಳಿತ್ತು.

ಇದಲ್ಲದೆ, ಇಂಟರ್ನೆಟ್ ಸೇವೆಗಳನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸುವ ಆದೇಶಗಳನ್ನು ಅನುಮತಿಸಲಾಗುವುದಿಲ್ಲ ಮತ್ತು ಅಂತಹ ಆದೇಶಗಳು ತಾತ್ಕಾಲಿಕವಾಗಿದ್ದು, ಪ್ರಮಾಣಾನುಗುಣತೆ ತತ್ವಕ್ಕೆ ಬದ್ಧವಾಗಿರಬೇಕು. ಜೊತೆಗೆ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು .

Kannada Bar & Bench
kannada.barandbench.com