ಆಂಧ್ರಪ್ರದೇಶದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಹಗರಣ ಪ್ರಕರಣದಲ್ಲಿ (ನಾರಾ ಚಂದ್ರಬಾಬು ನಾಯ್ಡು ವಿರುದ್ಧ ಆಂಧ್ರಪ್ರದೇಶ ಮತ್ತು ಎಎನ್ಆರ್) ತನ್ನ ವಿರುದ್ಧ ದಾಖಲಾದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠವು ಮ್ಯಾಜಿಸ್ಟ್ರೇಟ್ ಹೊರಡಿಸಿದ ರಿಮಾಂಡ್ ಆದೇಶ ಮತ್ತು ರದ್ದತಿ ಅರ್ಜಿಯನ್ನು ವಜಾಗೊಳಿಸಿದ ಆಂಧ್ರಪ್ರದೇಶ ಹೈಕೋರ್ಟ್ ನಿರ್ಧಾರವನ್ನು ಎತ್ತಿಹಿಡಿದಿದೆ.
ಆದರೆ ಮುಖ್ಯವಾಗಿ ಸಾರ್ವಜನಿಕ ಸೇವಕರನ್ನು ಅವರ ಅಧಿಕೃತ ಕಾರ್ಯ ಅಥವಾ ಕರ್ತವ್ಯಗಳ ನಿರ್ವಹಣೆಯಲ್ಲಿ ಮಾಡಲಾದ ಕೆಲಸಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸುವಾಗ ಸರ್ಕಾರದ ಪೂರ್ವಾನುಮತಿ ಅಗತ್ಯ ಎನ್ನುವ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ವ್ಯಾಖ್ಯಾನದ ಬಗ್ಗೆ ಇಬ್ಬರೂ ನ್ಯಾಯಾಮೂರ್ತಿಗಳು ಭಿನ್ನ ತೀರ್ಪು ನೀಡಿದರು.
ಮುಖ್ಯವಾಗಿ, ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ವ್ಯಾಖ್ಯಾನದ ಬಗ್ಗೆ ಇಬ್ಬರೂ ನ್ಯಾಯಾಧೀಶರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು. ಸೆಕ್ಷನ್ 17ಎ ಸಾರ್ವಜನಿಕ ಸೇವಕನನ್ನು ಅವರ ಅಧಿಕೃತ ಕಾರ್ಯಗಳು ಅಥವಾ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಮಾಡಿದ ಕೃತ್ಯಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಲು ಸರ್ಕಾರದ ಪೂರ್ವಾನುಮತಿಯನ್ನು ಕಡ್ಡಾಯಗೊಳಿಸುತ್ತದೆ.
ಸೆಕ್ಷನ್ 17ಎ ಅಡಿಯಲ್ಲಿ ಪೂರ್ವಾನುಮತಿ ಕಡ್ಡಾಯ ಎನ್ನುವುದನ್ನು ಪಾಲಿಸುವುದು ಅವಶ್ಯಕವಾಗಿದ್ದು ಸೆಕ್ಷನ್ 17ಎ ಸೇರ್ಪಡೆಯಾದ 2018ಕ್ಕಿಂತ ಮುಂಚಿನ ಕೃತ್ಯಗಳಿಗೆ ಕೂಡ ಅಂತಹ ಅನುಮತಿಯನ್ನು ಪಡೆಯುವುದು ಅಗತ್ಯ ಎಂದು ನ್ಯಾಯಮೂರ್ತಿ ಅನಿರುದ್ಧ ಬೋಸ್ ಹೇಳಿದರು.
ಇದು ಅನುಮೋದನೆ ಪಡೆಯುವ ಆಯ್ಕೆಯನ್ನು ಮುಂಚಿತವಾಗಿ ಮುಚ್ಚುವುದಿಲ್ಲ ಮತ್ತು ಇದು ಸರಿಪಡಿಸಬಹುದಾದ ದೋಷವಾಗಿದೆ. ಆದ್ದರಿಂದ, ಅಂತಹ ಅನುಮೋದನೆ ಇಲ್ಲದಿರುವುದು ಮ್ಯಾಜಿಸ್ಟ್ರೇಟ್ ಹೊರಡಿಸಿದ ರಿಮಾಂಡ್ ಆದೇಶವನ್ನು ನಿಷ್ಕ್ರಿಯಗೊಳಿಸುವುದಿಲ್ಲ ಎಂದು ಅವರು ತೀರ್ಪು ನೀಡಿದರು.
2018ರಲ್ಲಿ ಸೇರಿಸಲಾದ ಸೆಕ್ಷನ್ 17ಎಯ ಅನ್ವಯಿಸುವಿಕೆ ಭವಿಷ್ಯವರ್ತಿಯಾಗಿದ್ದು ಅಪ್ರಾಮಾಣಿಕ ಸಾರ್ವಜನಿಕ ಸೇವಕರನ್ನು ರಕ್ಷಿಸುವುದಕ್ಕೆ ಇದನ್ನು ಬಳಸುವಂತಿಲ್ಲ ಎಂದು ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಹೇಳಿದರು.
"ಸೆಕ್ಷನ್ 17ಎ ವ್ಯಾಖ್ಯಾನವನ್ನು ನಾನು ಒಪ್ಪುವುದಿಲ್ಲ. ಇದನ್ನು ತಿದ್ದುಪಡಿ ಮಾಡಿದ ಅಪರಾಧಗಳಿಗೆ ಮಾತ್ರ ಅನ್ವಯಿಸಬೇಕಿದ್ದು ಇದನ್ನು ಗಣನೀಯ ತಿದ್ದುಪಡಿ ಎಂದು ಪರಿಗಣಿಸುವ ಅಗತ್ಯವಿರುವುದರಿಂದ ಪೂರ್ವಾನ್ವಯ ಮಾಡುವಂತಿಲ್ಲ" ಎಂದು ಅವರು ಹೇಳಿದರು.
ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಈ ಕಾಯಿದೆಯ ಉದ್ದೇಶವಾಗಿದ್ದು ಸಾರ್ವಜನಿಕ ಹುದ್ದೆಯಲ್ಲಿರುವ ಪ್ರಾಮಾಣಿಕರನ್ನು ಕಿರುಕುಳದಿಂದ ರಕ್ಷಿಸುವುದು ಸೆಕ್ಷನ್ 17ಎಯ ಗುರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ಸೆಕ್ಷನ್ 17ಎ ವ್ಯಾಖ್ಯಾನದ ವಿಚಾರವಾಗಿ ನ್ಯಾಯಾಲಯ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿತು.
ಕೌಶಲ್ಯಾಭಿವೃದ್ಧಿ ಯೋಜನೆಗಾಗಿ ಮೀಸಲಿಟ್ಟ ಸರ್ಕಾರಿ ಹಣವನ್ನು ನಕಲಿ ಬಿಲ್ ಸೃಷ್ಟಿಸಿ ವಿವಿಧ ಬೇನಾಮಿ ಕಂಪೆನಿಗಳಿಗೆ ವರ್ಗಾಯಿಸಿದ್ದಕ್ಕೆ ಸಂಬಂಧಿಸಿದ ಹಗರಣ ಇದಾಗಿದ್ದು ನಾಯ್ಡು ಅವರನ್ನು ಕೆಲ ತಿಂಗಳುಗಳ ಕಾಲ ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಅವರು ಈಚೆಗೆ ಬಿಡುಗಡೆಯಾಗಿದ್ದರು. ಆಂಧ್ರಪ್ರದೇಶ ಹೈಕೋರ್ಟ್ ನೀಡಿದ ಜಾಮೀನನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇದೆ.
ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಹರೀಶ್ ಸಾಳ್ವೆ ಹಾಗೂ ಸಿದ್ಧಾರ್ಥ್ ಲೂತ್ರಾ ಸೇರಿದಂತೆ ಹಿರಿಯ ವಕೀಲರು ನಾಯ್ಡು ಅವರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.
ಆಂಧ್ರಪ್ರದೇಶ ಸರ್ಕಾರದ ಪರವಾಗಿ ಹಿರಿಯ ವಕೀಲರಾದ ರಂಜಿತ್ ಕುಮಾರ್ ಮತ್ತು ಮುಕುಲ್ ರೋಹಟ್ಗಿ ವಾದಿಸಿದ್ದರು.