ಈ ವರ್ಷದ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ರದ್ದುಗೊಳಿಸಿದ್ದ ಚುನಾವಣಾ ಬಾಂಡ್ ಯೋಜನೆಯಡಿ ನಡೆದಿರುವ ಮಾರಾಟ ಮತ್ತು ಖರೀದಿ ಕುರಿತಾದ ತನಿಖೆಯ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ [ಕಾಮನ್‌ಕಾಸ್ ಮತ್ತು ಇತರರು v. ಯೂನಿಯನ್ ಆಫ್ ಇಂಡಿಯಾ].
ಸಿಜೆಐ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ನ್ಯಾ. ಜೆ ಬಿ ಪರ್ದಿವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ನಿರ್ದಿಷ್ಟವಾಗಿ ಚುನಾವಣಾ ಬಾಂಡ್‌ಗಳ ಯೋಜನೆಯ ದುರುಪಯೋಗದ ಬಗ್ಗೆ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆಗೆ ಕೋರಿದ ಅರ್ಜಿಗಳನ್ನು ವಜಾಗೊಳಿಸಿತು. ವಿಶೇಷವಾಗಿ ದಾನಿಗಳು ಮತ್ತು ರಾಜಕೀಯ ಪಕ್ಷಗಳ ನಡುವೆ ಕೊಡುಕೊಳ್ಳುವಿಕೆ ನಡೆದಿದೆ ಎನ್ನುವ ಆರೋಪವನ್ನು ಅರ್ಜಿಗಳು ಮಾಡಿದ್ದವು.
ಅರ್ಜಿಗಳನ್ನು ವಜಾಗೊಳಿಸುವ ವೇಳೆ ನ್ಯಾಯಾಲಯವು, ‘‘ಸಂವಿಧಾನದ 32ನೇ ಪರಿಚ್ಛೇದದ ಅಡಿಯಲ್ಲಿ ನಮ್ಮ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸಲು ನಾವು ನಿರಾಕರಿಸುತ್ತೇವೆ’’ ಎಂದು ಆದೇಶ ಮಾಡಿತು.
ಚುನಾವಣಾ ಬಾಂಡ್‌ಗಳನ್ನು ಖರೀದಿಸುವ ದಿನಾಂಕದಂದಿನಂತೆ, ಅಂತಹ ಖರೀದಿಗೆ ಮತ್ತು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದಕ್ಕೆ ಸಂಸತ್ತಿನಿಂದ ಜಾರಿಗೆ ತಂದ ಶಾಸನಬದ್ಧ ಕಾಯಿದೆ ಇತ್ತು ಎನ್ನುವ ಅಂಶವನ್ನು ನ್ಯಾಯಾಲಯವು ಪರಿಗಣಿಸಿತು. ಈ ಹಂತದಲ್ಲಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದರ ಹಿಂದೆ ಕೊಡುಕೊಳ್ಳುವಿಕೆ ಇದೆ ಎಂಬ ಊಹೆಗಳು ಮಾತ್ರ ಇವೆ ಎನ್ನುವುದನ್ನು ಅದು ಗಮನಿಸಿತು.
ಈ ಕುರಿತು ತನ್ನ ಆದೇಶದಲ್ಲಿ ಪೀಠವು, ಗುತ್ತಿಗೆಗಳನ್ನು ನೀಡುವಾಗ ಅಥವಾ ನೀತಿನಿಯಮಗಳ ವಿಚಾರದಲ್ಲಿ ಬದಲಾವಣೆಯನ್ನು ಮಾಡುವಾಗ ಕೊಡುಕೊಳ್ಳುವಿಕೆ ನಡೆದಿತ್ತು ಹಾಗೂ ತನಿಖಾ ಸಂಸ್ಥೆಯ ಕೆಲವು ಅಧಿಕಾರಿಗಳು ಸಹ ಭಾಗಿಯಾಗಿದ್ದರು ಎನ್ನುವ ಎರಡು ಊಹೆಗಳ ಆಧಾರದಲ್ಲಿ ತನಿಖೆಯು ನ್ಯಾಯಯುತ ಅಥವಾ ಸ್ವತಂತ್ರವಾಗಿರುವುದಿಲ್ಲ ಎಂದು ಅರ್ಜಿಗಳಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ. ಚುನಾವಣಾ ಬಾಂಡ್‌ಗಳ ಖರೀದಿ, ರಾಜಕೀಯ ಪಕ್ಷಗಳಿಗೆ ನೀಡಿದ ದೇಣಿಗೆಗಳ ವಿಚಾರದಲ್ಲಿ ನ್ಯಾಯಾಲಯವು ತನಿಖೆಗೆ ಪ್ರವೇಶಿಸುವ ಅಗತ್ಯವಿದೆ ಎಂದು ಸೂಚಿಸಲು ಈ ಊಹೆಗಳನ್ನು ಆಧರಿಸಲಾಗಿದೆ ಎಂದು ವಿವರಿಸಿತು.
ಆದರೆ, ಪ್ರತ್ಯೇಕ ಪ್ರಕರಣಗಳಿಗೆ ಕಾನೂನಿನಡಿಯಲ್ಲಿ ಸೂಕ್ತ ಪರಿಹಾರಗಳು ಲಭ್ಯವಿದ್ದು ಅದನ್ನು ಅನ್ವೇಷಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. "ತನಿಖೆಗೆ ನಿರಾಕರಿಸಿದ್ದರೆ ಅಥವಾ ಮುಕ್ತಾಯದ ವರದಿಯನ್ನು ಸಲ್ಲಿಸಿದ್ದರೆ ಅಪರಾಧ ಪ್ರಕ್ರಿಯೆಗಳ ಕಾನೂನಿನ ಅಡಿಯಲ್ಲಿ ಸೂಕ್ತ ಪರಿಹಾರಗಳನ್ನು ಪಡೆಯಬಹುದು ಅಥವಾ ಪ್ರಕರಣವು 226 ರ ಅಡಿಯಲ್ಲಿ ಪರಿಹಾರ ಕಂಡುಕೊಳ್ಳಬಹುದು" ಎಂದು ನ್ಯಾಯಾಲಯ ವಿವರಿಸಿತು.
ಕಾನೂನಿನಡಿಯಲ್ಲಿ ಲಭ್ಯವಿರುವ ಪರಿಹಾರಗಳನ್ನು ಪಡೆಯಲು ಮುಂದಾಗದಿದ್ದಾಗ ಸಂವಿಧಾನದ 32ನೇ ವಿಧಿಯಡಿ ನ್ಯಾಯಾಲಯವು ಮಧ್ಯಪ್ರವೇಶಿಸುವುದು ಅಕಾಲಿಕ ಮತ್ತು ಅನುಚಿತವಾಗಲಿದೆ ಎಂದು ಪೀಠವು ಸ್ಪಷ್ಟಪಡಿಸಿತು.