ಎಲ್ಲ ವಿವಿಪ್ಯಾಟ್‌ ಚೀಟಿಗಳನ್ನು ಇವಿಎಂ ಮತಗಳೊಂದಿಗೆ ತಾಳೆ ನೋಡಲು ಕೋರಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ವಿಚಾರಣೆಯ ಸಂದರ್ಭದಲ್ಲಿ, ಕೇವಲ ಹ್ಯಾಕಿಂಗ್ ಮತ್ತು ತಿರಿಚುವಿಕೆಯ ಅನುಮಾನಗಳ ಆಧಾರದ ಮೇಲೆ ಇವಿಎಂಗಳಿಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ನೀಡಬಹುದೇ ಎಂದು ನ್ಯಾಯಾಲಯ ಅರ್ಜಿದಾರರನ್ನು ಪ್ರಶ್ನಿಸಿತ್ತು.
EVM VVPAT and SC
EVM VVPAT and SC

ಚುನಾವಣಾ ಸಂದರ್ಭದಲ್ಲಿ ಮತದಾನದ ವೇಳೆ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೂಲಕ ಚಲಾವಣೆಯಾದ ಮತಗಳೊಂದಿಗೆ ಎಲ್ಲಾ ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಚೀಟಿಗಳನ್ನು ತಾಳೆ ಮಾಡಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ಇವಿಎಂಗಳ ಬದಲಿಗೆ ಮತಪತ್ರಗಳ ಹಳೆಯ ವಿಧಾನಕ್ಕೆ (ಪೇಪರ್ ಬ್ಯಾಲಟ್‌) ಹಿಂತಿರುಗಲು ಕೋರಿದ್ದ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿತು.

ಪೀಠವು ತನ್ನ ಆದೇಶದಲ್ಲಿ "ನಾವು ಮತಪತ್ರಗಳ ಮೂಲಕ ಮತದಾನ ನಡೆಸಬೇಕೆನ್ನುವ ಕೋರಿಕೆಯನ್ನು ಹಾಗೂ ಸಂಪೂರ್ಣ ಇವಿಎಂ - ವಿವಿಪ್ಯಾಟ್‌ಗಳ ತಾಳೆ ನೋಡುವಿಕೆ ಮತ್ತು ವಿವಿಪ್ಯಾಟ್‌ ಚೀಟಿಗಳನ್ನು ಭೌತಿಕವಾಗಿ ಸಂಗ್ರಹಿಸಿ ಇರಿಸಲು ಕೋರಿದ್ದ ಮನವಿಯನ್ನು ತಿರಸ್ಕರಿಸಿದ್ದೇವೆ" ಎಂದು ಹೇಳಿತು.

ಪ್ರಜಾಪ್ರಭುತ್ವವನ್ನು ಬಲಪಡಿಸಲು ನಂಬಿಕೆ ಮತ್ತು ಸಹಭಾಗಿತ್ವದ ಸಂಸ್ಕೃತಿಯನ್ನು ಪೋಷಿಸುವ ಅಗತ್ಯದ ಬಗ್ಗೆ ನ್ಯಾಯಾಲಯವು ತನ್ನ ಆದೇಶದಲ್ಲಿ ಒತ್ತಿಹೇಳಿತು. "ಸಮತೋಲಿತ ದೃಷ್ಟಿಕೋನವು ಮುಖ್ಯವಾಗಿದ್ದರೂ, ವ್ಯವಸ್ಥೆಯನ್ನು ಕುರುಡಾಗಿ ಅನುಮಾನಿಸುವುದು ಸಂದೇಹಗಳ ಹುಟ್ಟಿಗೆ ಕಾರಣವಾಗುತ್ತದೆ ಹಾಗಾಗಿ ಅರ್ಥಪೂರ್ಣ ಟೀಕೆಗಳ ಅಗತ್ಯವಿದೆ. ಅದು ನ್ಯಾಯಾಂಗ, ಶಾಸಕಾಂಗ ಇತ್ಯಾದಿ ಯಾವುದೇ ಇರಲಿ, ಪ್ರಜಾಪ್ರಭುತ್ವವೆಂದರೆ ಎಲ್ಲಾ ಸ್ತಂಭಗಳ ನಡುವೆ ಸಾಮರಸ್ಯ ಮತ್ತು ನಂಬಿಕೆಯನ್ನು ಕಾಪಾಡಿಕೊಳ್ಳುವುದಾಗಿದೆ. ನಂಬಿಕೆ ಮತ್ತು ಸಹಭಾಗಿತ್ವದ ಸಂಸ್ಕೃತಿಯನ್ನು ಪೋಷಿಸುವ ಮೂಲಕ, ನಾವು ಪ್ರಜಾಪ್ರಭುತ್ವದ ಧ್ವನಿಯನ್ನು ಬಲಪಡಿಸಬಹುದಾಗಿದೆ,” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಅಂತಿಮವಾಗಿ ನ್ಯಾಯಾಲಯವು, ಇವಿಎಂಗಳನ್ನು ದೋಷರಹಿತವಾಗಿಸುವ ಉದ್ದೇಶದಿಂದ ಭಾರತದ ಚುನಾವಣಾ ಆಯೋಗ (ಇಸಿಐ) ಮತ್ತು ಇತರ ಅಧಿಕಾರಿಗಳಿಗೆ ಈ ಕೆಳಗಿನ ನಿರ್ದೇಶನಗಳನ್ನು ನೀಡಿದೆ: -

- ಚಿಹ್ನೆಗಳನ್ನು ಮತಯಂತ್ರಕ್ಕೆ ಲೋಡ್‌ ಮಾಡುವ ಪ್ರಕ್ರಿಯೆಯು ಪೂರ್ಣಗೊಂಡ ನಂತರ ಚಿಹ್ನೆ ಭರ್ತಿ ಮಾಡುವ ಘಟಕಗಳನ್ನು (ಸಿಂಬಲ್‌ ಲೋಡಿಂಗ್ ಯುನಿಟ್ಸ್‌) ಮೊಹರು ಮಾಡಬೇಕು, ಮೊಹರು ಮಾಡಿದ ಕಂಟೇನರ್ ಅನ್ನು 45 ದಿನಗಳವರೆಗೆ ಸ್ಟ್ರಾಂಗ್ ರೂಮ್‌ಗಳಲ್ಲಿ ಇರಿಸಬೇಕು;

- ಎಲ್ಲಾ ಅಭ್ಯರ್ಥಿಗಳು ಪರಿಶೀಲನೆಯ ಸಮಯದಲ್ಲಿ ಹಾಜರಿರುವ ಆಯ್ಕೆಯನ್ನು ಹೊಂದಿರುತ್ತಾರೆ. ಜಿಲ್ಲಾ ಚುನಾವಣಾ ಅಧಿಕಾರಿಯು ಬರ್ನ್‌ ಮಾಡಲಾದ ಮೊಮೊರಿಯ ದೃಢೀಕರಣವನ್ನು ಪ್ರಮಾಣೀಕರಿಸಬೇಕು;

- ಮೈಕ್ರೋಕಂಟ್ರೋಲರ್ ಯೂನಿಟ್‌ನಲ್ಲಿನ ಬರ್ನ್‌ ಮಾಡಲಾದ ಮೊಮೊರಿಯನ್ನು ಎಂಜಿನಿಯರ್‌ಗಳ ತಂಡ ಪರಿಶೀಲಿಸಬೇಕು.

ಚುನಾವಣಾ ಸಂದರ್ಭದಲ್ಲಿ ಇವಿಎಂಗಳ ಮೂಲಕ ಚಲಾವಣೆಯಾದ ಮತಗಳೊಂದಿಗೆ ವಿವಿಪ್ಯಾಟ್ ಸ್ಲಿಪ್‌ಗಳನ್ನು ತಾಳೆ ಮಾಡಲು ನಿರ್ದೇಶನಗಳನ್ನು ಕೋರಿ ಸಲ್ಲಿಕೆಯಾಗಿದ್ದ ಮೂರು ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾ. ಸಂಜೀವ್ ಖನ್ನಾ ಮತ್ತು ನ್ಯಾ. ದೀಪಂಕರ್ ದತ್ತಾ ಅವರನ್ನೊಳಗೊಂಡ ವಿಭಾಗೀಯ ಪೀಠದಿಂದ ಈ ತೀರ್ಪು ಬಂದಿದೆ.

ಅರ್ಜಿದಾರರಲ್ಲಿ ಒಬ್ಬರು ಪ್ರತಿ ಇವಿಎಂ ಮತವನ್ನು ವಿವಿಪ್ಯಾಟ್ ಸ್ಲಿಪ್‌ಗಳ ವಿರುದ್ಧ ತಾಳೆ ಮಾಡಬೇಕೆಂದು ಪ್ರಾರ್ಥಿಸಿದ್ದರು. ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿದ ಮತ್ತೊಂದು ಮನವಿಯಲ್ಲಿ ವಿವಿಪ್ಯಾಟ್ ಸ್ಲಿಪ್‌ಗಳನ್ನು ಇವಿಎಂಗಳ ಮೂಲಕ ಚಲಾಯಿಸಿದ ಮತಗಳೊಂದಿಗೆ ತಾಳೆ ಮಾಡಬೇಕು, ಇದರಿಂದ ನಾಗರಿಕರು ತಮ್ಮ ಮತವನ್ನು 'ತಾವು ಮತ ಚಲಾಯಿಸಿದಂತೆಯೇ ಅದನ್ನು ದಾಖಲಿಸಲಾಗಿದೆ' ಹಾಗೂ ತಾವು 'ದಾಖಲಿಸಿದಂತೆಯೇ ಎಣಿಸಲಾಗಿದೆ' ಎಂದು ದೃಢೀಕರಿಸಬಹುದು ಎಂದು ವಾದಿಸಿತ್ತು.

ಏಪ್ರಿಲ್ 18ರಂದು ಸುಪ್ರೀಂ ಕೋರ್ಟ್ ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು. ವಿಚಾರಣೆಯ ಸಂದರ್ಭದಲ್ಲಿ, ಕೇವಲ ಹ್ಯಾಕಿಂಗ್ ಮತ್ತು ತಿರಿಚುವಿಕೆಯ ಅನುಮಾನಗಳ ಆಧಾರದ ಮೇಲೆ ಇವಿಎಂಗಳಿಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ನೀಡಬಹುದೇ ಎಂದು ನ್ಯಾಯಾಲಯ ಅರ್ಜಿದಾರರನ್ನು ಪ್ರಶ್ನಿಸಿತ್ತು.

Related Stories

No stories found.
Kannada Bar & Bench
kannada.barandbench.com