ಈಶಾನ್ಯ ಭಾರತದ ಭೂಗೋಳ ಮತ್ತು ಇತಿಹಾಸದ ಬಗ್ಗೆ ಪಠ್ಯದಲ್ಲಿ ಸೇರಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ವಿಚಾರಣೆ ನಡೆಸಲು ಶುಕ್ರವಾರ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಜನಾಂಗೀಯ ತಾರತಮ್ಯ ತಪ್ಪಿಸಲು ಕಾನೂನಿನಲ್ಲಿ ಬದಲಾವಣೆ ಮಾಡಬೇಕು ಎಂದು ಕೋರಿ ಜ್ಯೋತಿ ಜೊಂಗ್ಲುಜು ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಇಂಥ ಪ್ರಕರಣಗಳು ಕಾರ್ಯಾಂಗ ಮತ್ತು ಸಂಸತ್ ವ್ಯಾಪ್ತಿಗೆ ಒಳಪಡುತ್ತವೆ. ನ್ಯಾಯಾಲಯವು ಯಾವುದೇ ಆದೇಶ ಮಾಡಲಾಗದು ಎಂದು ಪೀಠ ಹೇಳಿದೆ.
“ಜನಾಂಗೀಯ ತಾರತಮ್ಯ ತಪ್ಪಿಸಲು ಪೊಲೀಸರ ಮೊರೆ ಹೋಗಿ. ಇತಿಹಾಸ ಮತ್ತು ಭೂಗೋಳದಲ್ಲಿ ಅಧ್ಯಾಯ ಸೇರಿಸುವ ವಿಚಾರವು ನೀತಿಯ ಭಾಗವಾಗಿದ್ದು, ಮಕ್ಕಳಿಗೆ ಸಾಧ್ಯವಾದಷ್ಟು ಕಡಿಮೆ ಬೋಧನೆ ಮಾಡಬೇಕು. ಈಗಾಗಲೇ ಮಾಹಿತಿ ಪೂರವೇ ಇದ್ದು, ಸಮಾಜದಲ್ಲಿನ ಪ್ರತಿಯೊಂದು ಲೋಪಕ್ಕೂ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು” ಎಂದು ಪೀಠ ಹೇಳಿದೆ. ಹೀಗಾಗಿ, ಶಾಸಕಾಂಗಕ್ಕೆ ಆದೇಶ ಮಾಡಲಾಗದು ಎಂದು ನ್ಯಾಯಾಲಯ ಹೇಳಿದೆ.
ಇತಿಹಾಸ ಮತ್ತು ಭೂಗೋಳಕ್ಕೆ ಸಂಬಂಧಿಸಿದ ಅಧ್ಯಾಯದ ವಿಚಾರವು ಶೈಕ್ಷಣಿಕ ನೀತಿಯ ಭಾಗವಾಗಿದೆ. ಜನಾಂಗೀಯ ತಾರತಮ್ಯ ಕುರಿತಾದ ಯೂಟ್ಯೂಬ್ ವಿಡಿಯೊಗಳ ಕುರಿತು ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆ ಸೂಕ್ತ. ಹೀಗಾಗಿ, ಅರ್ಜಿ ವಜಾ ಮಾಡಲಾಗಿದೆ” ಎಂದು ಪೀಠ ಆದೇಶದಲ್ಲಿ ಹೇಳಿದೆ.
ಕೋವಿಡ್ ಸಂದರ್ಭದಲ್ಲಿ ಈಶಾನ್ಯ ಭಾರತದ ಜನರು ಜನಾಂಗೀಯ ತಾರತಮ್ಯಕ್ಕೆ ತುತ್ತಾಗಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ಪೀಠದ ಗಮನಸೆಳೆದರು. ಅದಕ್ಕೆ ಪೀಠವು “ನೀವು ಐಪಿಸಿ ನಿಬಂಧನೆಗಳಿಗೆ ಬದಲಾವಣೆ ಮಾಡಲು ಬಯಸುತ್ತಿದ್ದೀರಿ. ಆದರೆ, ನಾವು ಅದನ್ನು ಮಾಡಲಾಗದು. ಹೀಗಾಗಿ, ಅರ್ಜಿ ವಜಾ ಮಾಡಲಾಗಿದೆ” ಎಂದು ಹೇಳಿತು.