ಆಂಧ್ರ, ತೆಲಂಗಾಣದಿಂದ ಹೊರಗೆ ಜಗನ್ ಭ್ರಷ್ಟಾಚಾರ ಪ್ರಕರಣ ವಿಚಾರಣೆಗೆ ಕೋರಿಕೆ: ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಹೈಕೋರ್ಟ್ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದು ವಿಚಾರಣಾ ನ್ಯಾಯಾಲಯದ ಎದುರು ನಿತ್ಯ ವಿಚಾರಣೆಗೂ ನಿರ್ದೇಶಿಸಿದೆ. ಹೀಗಾಗಿ ಪ್ರಕರಣದ ವರ್ಗಾವಣೆ ಸಮರ್ಥನೀಯವಲ್ಲ ಎಂದ ಪೀಠ.
YS Jagan Mohan Reddy
YS Jagan Mohan ReddyTwitter
Published on

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆಯನ್ನು ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಹೊರಗೆ ಅದರಲ್ಲಿಯೂ ದೆಹಲಿಯಲ್ಲಿ ವಿಚಾರಣೆ ನಡೆಸುವಂತೆ ಕೋರಿ ಆಂಧ್ರಪ್ರದೇಶ ಉಪ ಸ್ಪೀಕರ್ ರಘು ರಾಮ ಕೃಷ್ಣರಾಜು ಅವರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ [ರಘು ರಾಮ ಕೃಷ್ಣರಾಜು ಮತ್ತು ಸಿಬಿಐ ನಡುವಣ ಪ್ರಕರಣ]

ಹೈಕೋರ್ಟ್ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದು ವಿಚಾರಣಾ ನ್ಯಾಯಾಲಯದ ಎದುರು ನಿತ್ಯ ವಿಚಾರಣೆಗೂ ನಿರ್ದೇಶಿಸಿದೆ. ಹೀಗಾಗಿ ಪ್ರಕರಣದ ವರ್ಗಾವಣೆ ಸಮರ್ಥನೀಯವಲ್ಲ ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ತಿಳಿಸಿತು.

Also Read
ಅಮರಾವತಿ ಭೂ ಹಗರಣ: ಆಂತರಿಕ ತನಿಖೆ ಬಳಿಕ ನ್ಯಾ. ಎನ್‌ ವಿ ರಮಣ ವಿರುದ್ಧದ ಸಿಎಂ ಜಗನ್‌ ದೂರು ವಜಾ ಮಾಡಿದ ಸುಪ್ರೀಂ

“ಸಂಬಂಧಿತ ಸಿಬಿಐ ನ್ಯಾಯಾಲಯದ ಎದುರಿರುವ ಪ್ರಕರಣವನ್ನು ಹೈಕೋರ್ಟ್‌ ಮೇಲ್ವಿಚಾರಣೆ ಮಾಡುತ್ತಿದ್ದು ನಿತ್ಯದ ವಿಚಾರಣೆಗೆ ನಿರ್ದೇಶಿಸಿದೆ. ಹೈಕೋರ್ಟ್‌ ಹೀಗೆ ಹೇಳಿರುವಾಗ ಅರ್ಜಿದಾರರು ಪ್ರಾಸಿಕ್ಯೂಷನ್‌ ಮತ್ತು ವಿಚಾರಣೆ ವಿಳಂಬವಾಗುತ್ತಿರುವುದರಿಂದ ವರ್ಗಾವಣೆ ಅಗತ್ಯವಿದೆ ಎನ್ನುತ್ತಿದ್ದಾರೆ. ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವಿರುದ್ಧದ ಪ್ರಕರಣ ವರ್ಗಾಯಿಸುವ ಅಗತ್ಯವಿದೆ ಎಂದು ಅನ್ನಿಸುವುದಿಲ್ಲ” ಎಂಬುದಾಗಿ ನ್ಯಾಯಾಲಯ ವಿವರಿಸಿತು.

ಗಮನಾರ್ಹ ಆಂಶವೆಂದರೆ, ವೈಎಸ್‌ಆರ್‌ ಕಾಂಗ್ರೆಸ್‌ ಸಂಸದ ರಘು ರಾಮಕೃಷ್ಣ ರಾಜು ಅವರು 2023ರಲ್ಲಿ ತಮ್ಮದೇ ಪಕ್ಷದ ಅಧ್ಯಕ್ಷರಾದ ಮುಖ್ಯಮಂತ್ರಿ ಜಗನ್ ವಿರುದ್ಧ ಸಲ್ಲಿಸಿರುವ ಅರ್ಜಿ ಇದಾಗಿದೆ. ನಂತರ ಪಕ್ಷ ಬದಲಿಸಿದ್ದ ರಾಜು ಮಾರ್ಚ್ 2024ರಲ್ಲಿ ತೆಲುಗು ದೇಶಂ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. 2024ರ ವಿಧಾನಸಭಾ ಚುನಾವಣೆಯಲ್ಲಿ ಉಂಡಿ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.

ಆಂಧ್ರದ ಅಂದಿನ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರ ವಿಚಾರಣಾ ಪ್ರಕ್ರಿಯೆ ವಿಳಂಬಗೊಳಿಸುವ ಮೂಲಕ ಮುಖ್ಯಮಂತ್ರಿ ಅವರ ಪರವಾಗಿ ಕೆಲಸ ಮಾಡುತ್ತಿದೆ ಎಂದು ರಾಜು ಆರೋಪಿಸಿದ್ದು ಅವರು ಪ್ರಕರಣದ ವಿಚಾರಣೆಯನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದ ಹೊರಗೆ ಇರುವ ನ್ಯಾಯಾಲಯದಲ್ಲಿ ನಡೆಸಬೇಕು ಎಂದು ಅವರು ಕೋರಿದ್ದರು.

ಮುಖ್ಯಮಂತ್ರಿ  ಜಗನ್‌ ಅವರು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದರಿಂದ ವಿನಾಯಿತಿ ನೀಡಿದ ಹೈಕೋರ್ಟ್ ತೀರ್ಪನ್ನು ಸಿಬಿಐ ಕೂಡ ಪ್ರಶ್ನಿಸಿಲ್ಲ. ಕಳೆದ 10 ವರ್ಷಗಳಿಂದ ವಿಚಾರಣೆ ವಿಳಂಬ ಮಾಡಲಾಗುತ್ತಿದ್ದು ಆರೋಪವನ್ನು ಕೂಡ ನಿಗದಿಪಡಿಸಿಲ್ಲ ಎಂದು ಅವರು ದೂರಿದ್ದರು.

Also Read
ಜಗನ್ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಆಂಧ್ರದಿಂದ ಹೊರಗೆ ನಡೆಸಲು ಕೋರಿಕೆ; ಸಿಬಿಐ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆಗಾಗಿ ಮತ್ತು ಸಿಬಿಐ ಹಾಗೂ ಜಗನ್‌ ಶಾಮೀಲಾಗುವುದನ್ನು ತಪ್ಪಿಸುವುದಕ್ಕಾಗಿ ರಾಜ್ಯದಿಂದ ಹೊರಗೆ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಅವರು ಮನವಿ ಮಾಡಿದ್ದರು.

ಜಗನ್‌ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದ್ದರು. ರಾಜು ಅವರನ್ನು ವಕೀಲರಾದ ಬಾಲಾಜಿ ಶ್ರೀನಿವಾಸನ್ ಮತ್ತು ರೋಹನ್ ದಿವಾನ್ ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com