

ಬೆಂಗಳೂರಿನ 81ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿರುವ ತಮ್ಮ ವಿರುದ್ಧದ ಎರಡು ಅತ್ಯಾಚಾರ ಪ್ರಕರಣಗಳನ್ನು ಬೇರೆ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ.
ವಿಚಾರಣಾ ನ್ಯಾಯಾಧೀಶರು ಈ ಹಿಂದೆ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ತಮ್ಮನ್ನು ದೋಷಿ ಎಂದು ಘೋಷಿಸಿದ್ದರು. ಅವರು ತಮ್ಮ ವಿರುದ್ಧ ಪಕ್ಷಪಾತದಿಂದ ನಡೆದುಕೊಳ್ಳುವ ಸಾಧ್ಯತೆಯಿದೆ ಎಂಬ ಆತಂಕ ಪ್ರಜ್ವಲ್ ಅವರದ್ದಾಗಿತ್ತು. ಅದರಲ್ಲಿಯೂ ಆ ಪ್ರಕರಣದಲ್ಲಿ ನ್ಯಾಯಧೀಶರ ಕೆಲ ಟಿಪ್ಪಣಿಗಳನ್ನು ಅವರು ಉಲ್ಲೇಖಿಸಿದ್ದರು.
ಆದರೆ ಪ್ರಕರಣದ ಸಾಕ್ಷ್ಯಗಳನ್ನು ಆಧರಿಸಿ ಹಾಗೂ ಕರ್ನಾಟಕ ಹೈಕೋರ್ಟ್ ನೀಡಿದ್ದ ಗಮನಾರ್ಹ ಅಭಿಪ್ರಾಯಗಳನ್ನು ಪರಿಗಣಿಸಿ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿಹಾಗೂ ವಿಪುಲ್ ಎಂ. ಪಂಚೋಲಿ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ತಿಳಿಸಿದೆ.
ವಿಚಾರಣಾ ನ್ಯಾಯಾಧೀಶರು ಮಾಡಿದ ಆ ಟಿಪ್ಪಣಿಗಳ ಆಧಾರದಲ್ಲಿ ನ್ಯಾಯಾಧೀಶರು ಪಕ್ಷಪಾತಿಯಾಗಿದ್ದಾರೆಂದು ಹೇಳುವುದಕ್ಕೆ ಅಥವಾ ಪ್ರಕರಣವು ಪೂರ್ವ ನಿರ್ಧರಿತವಾಗಿದೆ ಎನ್ನುವುದಕ್ಕೆ ಆಧಾರವಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸೆಪ್ಟೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್ ತಮ್ಮ ವರ್ಗಾವಣೆ ಅರ್ಜಿಯನ್ನು ವಜಾಗೊಳಿಸಿದ ನಂತರ ಪ್ರಜ್ವಲ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಪ್ರಜ್ವಲ್ ರೇವಣ್ಣ ಮಹಿಳೆಯರ ವಿರುದ್ಧ ದೌರ್ಜನ್ಯ ಎಸಗಿದ್ದಾರೆ ಎಂದು ಬಿಂಬಿಸುವ 2,900ಕ್ಕೂ ಹೆಚ್ಚು ವಿಡಿಯೋಗಳು ಹರಿದಾಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್ 376(2)(ಎನ್), 354 ಎ, 354 ಬಿ, 354 ಸಿ, 506, 201 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ 66 ಇ ಅಡಿ ನಾಲ್ಕು ಪ್ರಕರಣ ದಾಖಲಾಗಿತ್ತು.
ಮನೆಗೆಲಸದಾಕೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಪ್ರಜ್ವಲ್ ತಪ್ಪಿತಸ್ಥ ಎಂದು ಕಳೆದ ಆಗಸ್ಟ್‌ನಲ್ಲಿ ಅಡಿಷನಲ್ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ಆಜೀವ ಶಿಕ್ಷೆ ವಿಧಿಸಿದ್ದರು. ಈ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಹೈಕೋರ್ಟ್‌ನಲ್ಲಿ ಬಾಕಿ ಇದೆ.
ಇಂದಿನ ವಿಚಾರಣೆ ವೇಳೆ ರೇವಣ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ನ್ಯಾಯಾಧೀಶರ ಟಿಪ್ಪಣಿಯನ್ನು ಪ್ರಶ್ನಿಸಿದರು. ಆದರೆ ಸುಪ್ರೀಂ ಕೋರ್ಟ್ ವಕೀಲರ ವರ್ತನೆಯೇ ಸಮಸ್ಯೆ ತಂದೊಡ್ಡಿದ ಉದಾಹರಣೆಗಳಿವೆ ಎಂದ ಸಿಜೆಐ ವಕೀಲರು ನಿರಂತರ ಬದಲಾಯಿಸಿದ್ದಕ್ಕೆ ವಿಚಾರಣಾ ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯ ಸೂಕ್ತವಾಗಿಯೇ ಇದೆ ಎಂದರು.
ವಕೀಲರ ವಿರುದ್ಧದ ಟಿಪ್ಪಣಿಗಳನ್ನು ತೆಗೆದುಹಾಕುವಂತೆ ಪ್ರಕರಣದಲ್ಲಿ ವಾದ ಮಂಡಿಸುತ್ತಿರುವ ಮತ್ತೊಬ್ಬ ಹಿರಿಯ ನ್ಯಾಯವಾದಿ ದುಷ್ಯಂತ್ ದವೆ ಅವರು ಕೋರಿದರು. ಇದಕ್ಕೆ ಲೂತ್ರಾ ಕೂಡ ದನಿಗೂಡಿಸಿದರು. ಆದರೆ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಲಿಲ್ಲ. ವಕೀಲರು ನ್ಯಾಯಾಂಗದ ಮೇಲೆ ಒತ್ತಡ ಹೇರುವಂತಿಲ್ಲ ಎಂದು ನ್ಯಾ. ಬಾಗ್ಚಿ ಹೇಳಿದರೆ ವಕೀಲರು ಹೈಕೋರ್ಟ್ ಎದುರು ಕ್ಷಮೆ ಯಾಚಿಸಬಹುದು ಎಂದು ಸಿಜೆಐ ಕಾಂತ್ ಹೇಳಿದರು.
ಅಂತೆಯೇ ವಿಚಾರಣೆ ವರ್ಗಾಯಿಸಲು ನ್ಯಾಯಸಮ್ಮತ ಕಾರಣ ಕಂಡುಬರುತ್ತಿಲ್ಲ ಎಂದ ಪೀಠ ಅರ್ಜಿಯನ್ನು ತಿರಸ್ಕರಿಸಿತು.