ಬ್ರೇಕಿಂಗ್: ನೀಟ್, ಜೆಇಇ ಮುಂದೂಡುವಂತೆ ಕೋರಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಗೋಪ್ಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಬಿ ಆರ್ ಗವಾಯಿ ಮತ್ತು ಕೃಷ್ಣ ಮುರಾರಿ ನೇತೃತ್ವದ ಪೀಠವು ಅರ್ಜಿಯಲ್ಲಿ ಮಹತ್ವವಾದುದ್ದೇನು ಇಲ್ಲ ಎಂದು ಹೇಳಿದೆ.
NEET JEE EXAMS 2020
NEET JEE EXAMS 2020

ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಮತ್ತು ಜೆಇಇ (ಜಂಟಿ ಪ್ರವೇಶ ಪರೀಕ್ಷೆ) ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಆಗಸ್ಟ್ 17ರಂದು ನೀಡಿದ್ದ ತನ್ನ ತೀರ್ಪನ್ನುಕೋವಿಡ್ ಹಿನ್ನೆಲೆಯಲ್ಲಿ ಮರು ಪರಿಶೀಲಿಸಬೇಕು ಎಂದು ಕೋರಿ ವಿರೋಧ ಪಕ್ಷಗಳ ಆಡಳಿತವಿರುವ ಆರು ರಾಜ್ಯಗಳ ಸಂಪುಟ ದರ್ಜೆ ಸಚಿವರು ಸಲ್ಲಿಸಿದ್ದ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ವಜಾ ಮಾಡಿದೆ (ಮೊಲೊಯ್ ಘಟಕ್ ಮತ್ತು ಇತರರು v.ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮತ್ತು ಇತರರು).

ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಮೂಲಗಳು ದೃಢಪಡಿಸಿದ್ದು, ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಬಿ ಆರ್ ಗವಾಯಿ ಮತ್ತು ಕೃಷ್ಣ ಮುರಾರಿ ನೇತೃತ್ವದ ಪೀಠವು ವಿಚಾರಣೆ ನಡೆಸಿ ಮನವಿಯಲ್ಲಿ ಯಾವುದೇ ಮಹತ್ವದ ವಿಚಾರವಿಲ್ಲ ಎಂದು ತೀರ್ಪು ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿತು. ಪ್ರಕರಣವನ್ನು ಗೋಪ್ಯ ವಿಚಾರಣೆ (ಇನ್‌ ಚೇಂಬರ್) ಮಾಡಲಾಯಿತು.

Ashok bhushan, BR Gavai, Krishna Murari
Ashok bhushan, BR Gavai, Krishna Murari

ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸಗಢ, ರಾಜಸ್ಥಾನ, ಪಂಜಾಬ್ ಮತ್ತು ಮಹಾರಾಷ್ಟ್ರ ರಾಜ್ಯಗಳ ಆರು ಸಂಪುಟ ದರ್ಜೆ ಸಚಿವರು ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಬಳಿಕ, ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯ ಸಚಿವರು ತೀರ್ಪು ಮರುಪರಿಶೀಲನಾ ಮನವಿ ಸಲ್ಲಿಸಿದ್ದರು. ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಈ ವರ್ಷದ ನೀಟ್ ಮತ್ತು ಜೆಇಇ ಮುಂದೂಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಆಗಸ್ಟ್‌ 17ರಂದು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

ಆಗಸ್ಟ್ 17ರ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್ ಟಿಎ) ಆಗಸ್ಟ್‌ 25ರಂದು ಅಧಿಸೂಚನೆ ಹೊರಡಿಸಿದ್ದು, ಪ್ರವೇಶ ಪರೀಕ್ಷೆಗಳನ್ನು ಪರಿಷ್ಕತ ವೇಳಾಪಟ್ಟಿಯ ಅನ್ವಯ ನಡೆಸಲು ನಿರ್ಧಿರಿಸಲಾಗಿದೆ. ನೀಟ್ ಪರೀಕ್ಷೆಯನ್ನು ಸೆಪ್ಟೆಂಬರ್ 13ರಂದು ಮತ್ತು ಜೆಇಇ ಪರೀಕ್ಷೆಯನ್ನು ಸೆಪ್ಟೆಂಬರ್ 1-6ರ ಅವಧಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ವಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಸಂಪುಟದರ್ಜೆ ಸಚಿವರ ಸಲ್ಲಿಸಿದ್ದ ಅರ್ಜಿಯಲ್ಲಿ ಈ ಕೆಳಗಿನ ವಿಶಾಲವಾದ ವಾದಗಳ ಹಿನ್ನೆಲೆಯಲ್ಲಿ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಪರೀಕ್ಷೆ ನಡೆಸುವ ಆಗಸ್ಟ್‌ 17ರ ನ್ಯಾಯಾಲಯದ ಆದೇಶ ಮತ್ತು ಎನ್‌ ಟಿಎ ನಿರ್ಧಾರ ದೋಷಪೂರಿತವಾದುದು ಎಂದು ಅರ್ಜಿದಾರರು ತಿಳಿಸಿದ್ದರು:

  • ನೀಟ್/ಜೆಇಇ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ರಕ್ಷಣೆ, ಭದ್ರತೆ ಮತ್ತು ವಿದ್ಯಾರ್ಥಿಯ ಬದುಕುವ ಹಕ್ಕನ್ನು ಸಂರಕ್ಷಿಸಲು ಸರ್ಕಾರ ವಿಫಲವಾಗಿದೆ.

  • ಉದ್ದೇಶಿತ ದಿನಾಂಕದಂದು ಪರೀಕ್ಷೆಗಳನ್ನು ನಡೆಸಲು ಎದುರಾಗುವ ಸಾರಿಗೆಸಂಪರ್ಕ ತೊಂದರೆಗಳನ್ನು ನಿರ್ಲಕ್ಷಿಸಲಾಗಿದೆ.

  • ಪರೀಕ್ಷೆಯನ್ನು ನಡೆಸುವುದು ಮತ್ತು ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತ್ರಿಗೊಳಿಸುವದು ಈ ಎರಡು ಅಂಶಗಳನ್ನು ಸಮತೋಲಿತವಾಗಿ ಪರಿಗಣಿಸುವಲ್ಲಿ ಸೋತಿದೆ.

  • ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ವಿಫಲವಾಗಿದೆ.

  • ಕೋವಿಡ್ ಸೋಂಕಿತರ ಸಂಖ್ಯೆ 33.1 ಲಕ್ಷದಷ್ಟಿರುವಾಗ 25 ಲಕ್ಷ ವಿದ್ಯಾರ್ಥಿಗಳು ಎರಡೂ ಪರೀಕ್ಷೆಗಳಿಗೆ ಹಾಜರಾಗಲಿದ್ದಾರೆ.

  • ಜೆಇಇ ಪರೀಕ್ಷೆಯನ್ನು 660 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, 9.53 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರಲಿಯಲಿದ್ದಾರೆ. ಪ್ರತಿ ಜೆಇಇ ಕೇಂದ್ರದಲ್ಲಿ ಅಂದಾಜು 1,443 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

  • ನೀಟ್ ಪದವಿ ಪರೀಕ್ಷೆಯನ್ನು 3,843 ಕೇಂದ್ರಗಳಲ್ಲಿ 15.97 ಲಕ್ಷ ಮಂದಿ ಬರೆಯಲಿದ್ದಾರೆ. ಅಂದಾಜು ಪ್ರತಿ ಕೇಂದ್ರದಲ್ಲಿ 415 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

  • ಸುರಕ್ಷತೆಯಿಂದ ಯಶಸ್ವಿಯಾಗಿ ಪರೀಕ್ಷೆ ನಡೆಸಲು ಇದ್ದ ಅವಕಾಶವನ್ನು ಕೇಂದ್ರ ಸರ್ಕಾರ ಕೈಚೆಲ್ಲಿದೆ. ಏಪ್ರಿಲ್-ಸೆಪ್ಟೆಂಬರ್ 2020ಯನ್ನು ನಿಷ್ಕ್ರಿಯತೆ, ಗೊಂದಲ, ಆಲಸ್ಯ ಮತ್ತು ಜಡತ್ವದಿಂದ ಕಳೆಯಲಾಗಿದೆ.

  • ತನ್ನ ಜಡತ್ವದಿಂದ ಲಕ್ಷಾಂತರ ವಿದ್ಯಾರ್ಥಿಗಳ ತೊಂದರೆಯಾಗಲಿದೆ ಎಂಬುದನ್ನು ತಡವಾಗಿ ಅರ್ಥ ಮಾಡಿಕೊಂಡಿರುವ ಕೇಂದ್ರ ಸರ್ಕಾರವು ಕೊನೆಯ ಕ್ಷಣದ ಪ್ರಯತ್ನಗಳನ್ನು ಮಾಡುತ್ತಿದೆ. ಇದಕ್ಕಾಗಿ ಆತುರಾತುರದಲ್ಲಿ ಪರೀಕ್ಷಾ ದಿನಾಂಕ ನಿಗದಿಗೊಳಿಸಲಾಗಿದೆ. ಇದು ಸಮಸ್ಯೆಗೆ ಪರಿಹಾರವಲ್ಲ. ಇದು ಮತ್ತಷ್ಟು ಸಮಸ್ಯೆ ತಂದೊಡ್ಡಲಿದೆ.

  • ಪರೀಕ್ಷಾ ಕೇಂದ್ರಗಳಲ್ಲಿ ರೋಗ ವ್ಯಾಪಿಸುವುದನ್ನು ತಡೆಯಲು ಕೇಂದ್ರ ಸರ್ಕಾರ ನಿರತವಾಗಿದೆ. ಆದರೆ, ಪರೀಕ್ಷಾ ಕೇಂದ್ರ ತಲುಪುವ ಪ್ರಕ್ರಿಯೆಯೇ ರೋಗ ವ್ಯಾಪಿಸಲು ಕಾರಣವಾಗಬಹುದು. ಅಲ್ಲದೆ, ಪರೀಕ್ಷಾ ಕೇಂದ್ರದಲ್ಲಿ ಸಾಮಾಜಿ ಅಂತರ ಪಾಲನೆಯನ್ನು ಅನುಷ್ಠಾನಗೊಳಿಸುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲದ ಮಾತು.

  • ಪ್ರತಿ ಜಿಲ್ಲೆಯಲ್ಲಿ ಹಲವು ನೀಟ್/ಜೆಇಇ ಪರೀಕ್ಷಾ ಕೇಂದ್ರ ತೆರೆಯುವುದಕ್ಕೆ ಬದಲಾಗಿ ಒಂದು ಕೇಂದ್ರ ತೆರೆಯುವುದನ್ನು ಖಾತರಿಪಡಿಸಿಕೊಳ್ಳುವಲ್ಲಿ ಗೌರವಾನ್ವಿತ ನ್ಯಾಯಾಲಯ ವಿಫಲವಾಗಿದೆ. ಜಿಲ್ಲೆಗೊಂದು ಪರೀಕ್ಷಾ ತೆರಯುವುದರಿಂದ ಅಂತರ ಜಿಲ್ಲಾ ಪ್ರವಾಸ ಕಡಿತಗೊಳ್ಳಲಿದ್ದು, ಕೋವಿಡ್ ವ್ಯಾಪಿಸುವ ಸಾಧ್ಯತೆ ಕ್ಷೀಣಿಸುತ್ತಿತ್ತು.

  • 'ಜೀವನ ನಡೆಯುತ್ತಿರಬೇಕು' ಎಂಬ ನ್ಯಾಯಾಲಯದ ಸಲಹೆ ತಾತ್ವಿಕ ನೋಟವನ್ನು ಹೊಂದಿದೆಯಾದರೂ, ನೀಟ್ ಯುಜಿ ಮತ್ತು ಜೆಇಇ ಪರೀಕ್ಷೆ ನಡೆಸುವ ಪ್ರಕ್ರಿಯೆಗೆ ಅಗತ್ಯವಾದ ಸೂಕ್ತ ಕಾನೂನು ತಾರ್ಕಿಕತೆ ಮತ್ತು ತಾರ್ಕಿಕ ವಿಶ್ಲೇಷಣೆಗಳಿಗೆ ಪರ್ಯಾಯವಾಗಲಾರದು.

  • ವಿದ್ಯಾರ್ಥಿಗಳು ಒಂದು ಶೈಕ್ಷಣಿಕ ವರ್ಷ ಕಳೆದುಕೊಳ್ಳುವುದು ಅರ್ಜಿದಾರರಿಗೂ ಇಷ್ಟವಿಲ್ಲ. ಆದರೆ, ಹಾಲಿ ಶೈಕ್ಷಣಿಕ ವರ್ಷ ಕಳೆದುಕೊಳ್ಳದೇ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದ ಸುರಕ್ಷತೆ, ಭದ್ರತೆ ಮತ್ತು ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕಿದೆ.

Also Read
ನೀಟ್- ಜೆಇಇ: ವಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಸಚಿವರು ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯಲ್ಲೇನಿದೆ?

ಪಶ್ಚಿಮ ಬಂಗಾಳದ ತೃಣ ಮೂಲ ಕಾಂಗ್ರೆಸ್ ನ ಕಾರ್ಮಿಕ ಮತ್ತು ಕಾನೂನು ಸಚಿವ ಮೊಲೊಯ್ ಘಟಕ್, ಜಾರ್ಖಂಡ್ ಹಣಕಾಸು ಸಚಿವರಾದ ಕಾಂಗ್ರೆಸ್‌ ನ ಡಾ. ರಾಮೇಶ್ವರ್ ಓರಾನ್, ರಾಜಸ್ಥಾನದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಕಾಂಗ್ರೆಸ್ ನಾಯಕ ಡಾ. ರಘು ಶರ್ಮಾ, ಛತ್ತೀಸಗಢದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಕಾಂಗ್ರೆಸ್ ನ ಅಮರಜೀತ್ ಭಗತ್, ಪಂಜಾಬ್‌ ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಕಾಂಗ್ರೆಸ್‌ ಪಕ್ಷದ ಬಲ್ಬೀರ್ ಸಿಂಗ್ ಸಿಧೂ ಮತ್ತು ಮಹಾರಾಷ್ಟ್ರದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸಚಿವ ಹಾಗೂ ಶಿವಸೇನಾ ನಾಯಕರಾದ ಉದಯ್ ರವೀಂದ್ರ ಸಾಮಂತ್ ಅವರು ಅರ್ಜಿದಾರರಾಗಿದ್ದಾರೆ.

ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಸಾರ್ವಜನಿಕ ಕರ್ತವ್ಯ ನಿರ್ವಹಿಸುವ ಏಕೈಕ ಕಾರಣದಿಂದ ವೈಯಕ್ತಿಕ ಸಾಮರ್ಥ್ಯದ ಆಧಾರದಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ಅರ್ಜಿದಾರರು ಉಲ್ಲೇಖಿಸಿದ್ದರು.

Related Stories

No stories found.
Kannada Bar & Bench
kannada.barandbench.com