ಚಂದ್ರಬಾಬು ನಾಯ್ಡು ಜಾಮೀನು ಷರತ್ತು ಸಡಿಲಿಸಿದ ಸುಪ್ರೀಂ ಕೋರ್ಟ್: ಸಭೆ, ಸಮಾವೇಶಗಳಲ್ಲಿ ಭಾಗಿಯಾಗಲು ಅನುಮತಿ
ಕೌಶಲ್ಯಾಭಿವೃದ್ಧಿ ಹಗರಣದಲ್ಲಿ ಜಾಮೀನು ಷರತ್ತಾಗಿ ಸಾರ್ವಜನಿಕ ಸಭೆ ಸಮಾವೇಶಗಳಲ್ಲಿ ಭಾಗವಹಿಸದಂತೆ ಆಂಧ್ರಪ್ರದೇಶ ಹೈಕೋರ್ಟ್ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿಗೆ ನೀಡಿದ್ದ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೆಗೆದುಹಾಕಿದೆ.
ಆದರೂ, ಪ್ರಕರಣದ ಬಗ್ಗೆ ಸಾರ್ವಜನಿಕ ಹೇಳಿಕೆಗಳನ್ನು ನೀಡಬಾರದು ಅಥವಾ ಮಾಧ್ಯಮಗಳೊಂದಿಗೆ ಮಾತನಾಡಬಾರದು ಎಂದು ನಾಯ್ಡು ಅವರಿಗೆ ಹೈಕೋರ್ಟ್ ವಿಧಿಸಿದ್ದ ಮತ್ತೊಂದು ಷರತ್ತು ಮುಂದುವರೆಯಲಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನಾಯ್ಡು ಅವರಿಗೆ ಜಾಮೀನು ನೀಡಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಆಂಧ್ರಪ್ರದೇಶ ಸರ್ಕಾರ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ನಾಯ್ಡು ಅವರ ಪ್ರತಿಕ್ರಿಯೆ ಕೇಳಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೊರ್ಟ್ ಡಿಸೆಂಬರ್ 11ರಂದು ನಡೆಸಲಿದೆ.
ನಾಯ್ಡು ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆಂಧ್ರಪ್ರದೇಶ ಹೈಕೋರ್ಟ್ ನವೆಂಬರ್ 3 ರಂದು ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಆಂಧ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಯೋಜನೆಗಾಗಿ ಮೀಸಲಿಟ್ಟ ಸರ್ಕಾರಿ ಹಣವನ್ನು ನಕಲಿ ಬಿಲ್ ಸೃಷ್ಟಿಸಿ ವಿವಿಧ ಬೇನಾಮಿ ಕಂಪೆನಿಗಳಿಗೆ ವರ್ಗಾಯಿಸಿದ್ದಕ್ಕೆ ಸಂಬಂಧಿಸಿದ ಹಗರಣ ಇದಾಗಿದ್ದು ನಾಯ್ಡು ಅವರನ್ನು ಕೆಲ ತಿಂಗಳುಗಳ ಹಿಂದೆ ಬಂಧಿಸಲಾಗಿತ್ತು.